Paris Olympic: ಚಿನ್ನದ ಹುಡುಗ ನೀರಜ್​ ಚೋಪ್ರಾ ಇಂದು ಕಣಕ್ಕೆ; ಜಾವೆಲಿನ್​ ಥ್ರೋ ಅರ್ಹತಾ ಸುತ್ತಿನಲ್ಲಿ ಕಿಶೋರ್​ ಜೆನಾ ಕೂಡ ಸ್ಪರ್ಧೆ

web neeraj
Published on

ಪ್ಯಾರಿಸ್​: ಟೋಕಿಯೊ ಗೇಮ್ಸ್​ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಜಾವೆಲಿನ್​ ಥ್ರೋ ತಾರೆ ನೀರಜ್​ ಚೋಪ್ರಾ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲೂ ಅದನ್ನು ಪುನರಾವರ್ತಿಸುವ ಹಂಬಲದೊಂದಿಗೆ ಮಂಗಳವಾರ ಕಣಕ್ಕಿಳಿಯಲಿದ್ದಾರೆ. ಮಧ್ಯಾಹ್ನ 3.20ರಿಂದ ನಡೆಯಲಿರುವ ಅರ್ಹತಾ ಸುತ್ತಿನಲ್ಲಿ ನೀರಜ್​ ಮತ್ತು ಮಧ್ಯಾಹ್ನ 1.50ರಿಂದ ಭಾರತದ ಮತ್ತೋರ್ವ ಸ್ಪರ್ಧಿ ಕಿಶೋರ್​ ಜೆನಾ ಕಣಕ್ಕಿಳಿಯಲಿದ್ದಾರೆ. ಗುರುವಾರ ರಾತ್ರಿ 11.55ರಿಂದ ಫೈನಲ್​ ಸ್ಪರ್ಧೆ ನಡೆಯಲಿದೆ.

ಅರ್ಹತಾ ಸುತ್ತಿನಲ್ಲಿ ಒಟ್ಟು 32 ಸ್ಪರ್ಧಿಗಳಿದ್ದು, ತಲಾ 16ರಂತೆ 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಕಿಶೋರ್​ ಜೆನಾ ಎ ಮತ್ತು ನೀರಜ್​ ಬಿ ಗುಂಪಿನಲ್ಲಿದ್ದಾರೆ. ಪಾಕಿಸ್ತಾನದ ಅರ್ಷದ್​ ನದೀಂ ಕೂಡ ಬಿ ಗುಂಪಿನಲ್ಲಿದ್ದಾರೆ. 84 ಮೀಟರ್​ ದೂರ ಜಾವೆಲಿನ್​ ಎಸೆದವರು ಅಥವಾ ಅಗ್ರ 12 ಎಸೆತಗಾರರು ಫೈನಲ್​ಗೆ ಅರ್ಹತೆ ಸಂಪಾದಿಸಲಿದ್ದಾರೆ.

ವಿಶ್ವ ಚಾಂಪಿಯನ್​ ಕೂಡ ಆಗಿರುವ 26 ವರ್ಷದ ನೀರಜ್​ ಚೋಪ್ರಾ, ಸತತ 2 ಒಲಿಂಪಿಕ್ಸ್​ನಲ್ಲಿ ವೈಯಕ್ತಿಕ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಎನಿಸುವ ಅವಕಾಶ ಹೊಂದಿದ್ದಾರೆ. 89.94 ಮೀ. ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯಾಗಿದ್ದು, ಹಾಲಿ ವರ್ಷ ಮೇನಲ್ಲಿ ದೋಹಾ ಡೈಮಂಡ್​ ಲೀಗ್​ನಲ್ಲಿ 88.36 ಮೀ. ಎಸೆದಿದ್ದೇ ಶ್ರೇಷ್ಠ ನಿರ್ವಹಣೆಯಾಗಿದೆ. ಹಾಲಿ ವರ್ಷ 3 ಸ್ಪರ್ಧೆಗಳಲ್ಲಿ ಅವರು ಭಾಗವಹಿಸಿದ್ದು. ಈ ಪೈಕಿ ಜೂನ್​ 18ರಂದು ಪಾವೊ ನುರ್ಮಿ ಗೇಮ್ಸ್​ನಲ್ಲಿ ಕೊನೆಯದಾಗಿ 85.97 ಮೀ. ಎಸೆದಿದ್ದರು. ಅಡುಕ್ಟರ್​ (ತೊಡೆ ಸ್ನಾಯು) ಗಾಯದ ಸಮಸ್ಯೆಯಿಂದಾಗಿ ಅವರು ಹಾಲಿ ವರ್ಷ ಕೆಲ ಸ್ಪರ್ಧೆಗಳಿಂದ ಹೊರಗುಳಿದಿದ್ದರು. ಆದರೆ ಒಲಿಂಪಿಕ್ಸ್​ಗೆ ಶೇ. 100 ಫಿಟ್​ ಆಗಿರುವುದಾಗಿ ತಿಳಿಸಿದ್ದಾರೆ.

ಟೋಕಿಯೊ ಒಲಿಂಪಿಕ್ಸ್​ ಚಿನ್ನ ಗೆಲುವಿನ ಬಳಿಕ ಸ್ಥಿರ ನಿರ್ವಹಣೆ ತೋರುತ್ತ ಬಂದಿರುವ ನೀರಜ್​, 15 ಎಸೆತಗಳಲ್ಲಿ 2 ಬಾರಿ ಮಾತ್ರ 85 ಮೀ.ಗಿಂತ ಕಡಿಮೆ ದೂರ ಭರ್ಜಿ ಎಸೆದಿದ್ದಾರೆ.

ಭಾರತದ ಮತ್ತೋರ್ವ ಸ್ಪರ್ಧಿ ಒಡಿಶಾದ ಕಿಶೋರ್​ ಜೆನಾ ಕಳೆದ ವರ್ಷ ಏಷ್ಯನ್​ ಗೇಮ್ಸ್​ನಲ್ಲಿ 87.54 ಮೀ. ಎಸೆದು ನೇರವಾಗಿ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸಿದ್ದರು. ಆದರೆ ನಂತರದಲ್ಲಿ ಕಿಶೋರ್​ 80 ಮೀ. ಗಡಿ ದಾಟಲು ಪರದಾಡುತ್ತಿದ್ದಾರೆ. ಹಾಲಿ ಋತುವಿನಲ್ಲಿ 80.84 ಮೀ. ಎಸೆತವೇ ಅವರ ಶ್ರೇಷ್ಠ ಸಾಧನೆಯಾಗಿದೆ.

ಪ್ರಬಲ ಪ್ರತಿಸ್ಪರ್ಧಿಗಳು

ಟೋಕಿಯೊ ಒಲಿಂಪಿಕ್ಸ್​ ರಜತ ವಿಜೇತ ಜೆಕ್​ ಗಣರಾಜ್ಯದ ಜೇಕಬ್​ ವಾಡ್ಲೆಜ್​, ಜರ್ಮನಿಯ ಜೂಲಿಯನ್​ ವೆಬರ್​ ಮತ್ತು ಮಾಜಿ ವಿಶ್ವ ಚಾಂಪಿಯನ್​ ಗ್ರೆನೇಡಾದ ಆಂಡರ್​ಸನ್​ ಪೀಟರ್ಸ್​ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದಾರೆ. ಜರ್ಮನಿಯ 19 ವರ್ಷದ ಮ್ಯಾಕ್ಸ್​ ಡೆಹ್ನಿಂಗ್​ ಹಾಲಿ ಋತುವಿನಲ್ಲಿ ಗರಿಷ್ಠ 90.20 ಮೀ. ಎಸೆತದ ದಾಖಲೆ ಹೊಂದಿದ್ದು, ಸ್ಪರ್ಧೆಯ ಕರಿಗುದುರೆ ಎನಿಸಿದ್ದಾರೆ. ಪಾಕಿಸ್ತಾನದ ಅರ್ಷದ್​ ನದೀಂ ಹಾಲಿ ಋತುವಿನಲ್ಲಿ ಗರಿಷ್ಠ 84.21 ಮೀ. ಎಸೆತವನ್ನಷ್ಟೇ ಎಸೆದಿದ್ದಾರೆ. ಆದರೆ ನೀರಜ್​ಗೆ ಇನ್ನೂ 90 ಮೀ. ಗಡಿ ದಾಟಲು ಸಾಧ್ಯವಾಗದಿರುವ ನಡುವೆ, ಸ್ಪರ್ಧೆಯಲ್ಲಿರುವ ಐವರು 90 ಮೀ.ಗಿಂತ ಅಧಿಕ ಎಸೆತದ ಜೀವನಶ್ರೇಷ್ಠ ನಿರ್ವಹಣೆ ಹೊಂದಿದ್ದಾರೆ ಎಂಬುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net