

ಬೆಂಗಳೂರು: ಐಪಿಎಲ್ 13ನೇ ಆವೃತ್ತಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕೆಲ ಉತ್ತಮ ನಿರ್ವಹಣೆಯ ನಡುವೆಯೂ ಸೋಲು ಎದುರಿಸಿದೆ. ಇದಕ್ಕೆ ತಂಡದ ಮಧ್ಯಮ ಸರದಿಯಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೈಡೊಡುತ್ತಿರುವುದು ಪ್ರಮುಖ ಕಾರಣವಾಗಿದೆ. ಕಳೆದ ಹರಾಜಿನಲ್ಲಿ ಬರೋಬ್ಬರಿ 10.75 ಕೋಟಿ ರೂಪಾಯಿ ಮೊತ್ತಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೇರಿದ ಅವರು ಪ್ರತಿ ಪಂದ್ಯದಲ್ಲಿ ಆಡಿದ್ದರೂ, ನಿರೀಕ್ಷಿತ ನಿರ್ವಹಣೆ ಮೂಡಿಬಂದಿಲ್ಲ. 9 ಪಂದ್ಯಗಳಲ್ಲಿ ಕೇವಲ 58 ರನ್ ಗಳಿಸಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಟ್ರೇಲಿಯಾದ ಆಟಗಾರ, ಕ್ರಿಕೆಟ್ ಪ್ರೇಮಿಗಳಿಂದ ಕಟು ಟೀಕೆಗಳಿಗೆ ಗುರಿಯಾಗಿದ್ದಾರೆ.
ಮ್ಯಾಕ್ಸ್‌ವೆಲ್ 2014ರಲ್ಲಿ ಐಪಿಎಲ್ ಟೂರ್ನಿಯ ಮೊದಲಾರ್ಧ ಯುಎಇಯಲ್ಲಿ ನಡೆದಾಗ ಭರ್ಜರಿ ಬ್ಯಾಟಿಂಗ್ ನಿರ್ವಹಣೆ (5 ಪಂದ್ಯಗಳಲ್ಲಿ 300 ರನ್) ತೋರಿದ್ದರು. ಆಗಲೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿದ್ದ ಮ್ಯಾಕ್ಸ್‌ವೆಲ್ ರನ್‌ಪ್ರವಾಹವನ್ನೇ ಹರಿಸಿದ್ದರು. ಆದರೆ ಈ ಬಾರಿ ಅವರು 9 ಪಂದ್ಯಗಳಲ್ಲಿ ಆಡಿದ್ದರೂ, ಇದುವರೆಗೆ ಒಂದೂ ಸಿಕ್ಸರ್ ಸಿಡಿಸಿಲ್ಲ.
ಮುಂಬೈ ವಿರುದ್ಧ ಭಾನುವಾರ ನಡೆದ ರೋಚಕ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ನಿರ್ಣಾಯಕ ಘಟ್ಟದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಇದು ಕೂಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಮ್ಯಾಕ್ಸ್‌ವೆಲ್‌ಗೆ ನೀಡಲಾಗುತ್ತಿರುವ ದುಬಾರಿ ಸಂಭಾವನೆಗೂ (10.75 ಕೋಟಿ ರೂ.), ಅವರ ಆಟಕ್ಕೂ ಸಂಬಂಧವೇ ಇಲ್ಲ ಎಂದು ಕಿಡಿಕಾರಲಾಗುತ್ತಿದೆ.
ಮ್ಯಾಕ್ಸ್‌ವೆಲ್ ಈ ಬಾರಿ 45ಕ್ಕಿಂತ ಹೆಚ್ಚು ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಕನಿಷ್ಠ ( 92.06) ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಅವರು ಕಳೆದ 2 ಐಪಿಎಲ್ ಆವೃತ್ತಿಗಳಿಂದ ಒಂದೂ ಸಿಕ್ಸರ್ ಸಿಡಿಸಿಲ್ಲ. ಇದರಿಂದಾಗಿ ನೆಟ್ಟಿಗರು, ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಕೊನೆಯದಾಗಿ ಸಿಕ್ಸರ್ ಸಿಡಿಸಿದಾಗ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇನ್ನೂ ಡೆಲ್ಲಿ ಡೇರ್‌ಡೆವಿಲ್ಸ್ ಆಗಿತ್ತು ಎಂದು ತಮಾಷೆ ಮಾಡಿದ್ದಾರೆ.
ಮ್ಯಾಕ್ಸ್‌ವೆಲ್ ಈ ಬಾರಿ ಐಪಿಎಲ್‌ನಲ್ಲಿ ಬೇಜವಾಬ್ದಾರಿಯ ಹೊಡೆತಗಳ ಮೂಲಕ ಔಟ್ ಆಗುತ್ತಿರುವ ರೀತಿಯೂ ಅಭಿಮಾನಿಗಳನ್ನು ಕೆರಳಿಸಿದೆ. ಆದರೂ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಯಾಕೆ ಸ್ಥಾನ ನೀಡಲಾಗುತ್ತಿದೆ ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.