

ಬೆಂಗಳೂರು: ನಿನ್ನೆ (ಏ.02) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ನ 14ನೇ ಪಂದ್ಯ ಆರ್ಸಿಬಿ ಮತ್ತು ಎಲ್ಎಸ್ಜಿ ನಡುವೆ ನಡೆದಿದ್ದು, ಭಾರೀ ಪೈಪೋಟಿಯ ಮಧ್ಯೆ ಕಡೆಗೂ ಆರ್ಸಿಬಿ ಸೋಲನ್ನು ಅನುಭವಿಸುವ ಮೂಲಕ ಪಂದ್ಯ ಕೈಚೆಲ್ಲಿತು. ಇನ್ನು ಆರ್ಸಿಬಿ ಅಭಿಮಾನಿಗಳಿಂದಲೇ ತುಂಬಿದ್ದ ಸ್ಟೇಡಿಯಂನಲ್ಲಿ ಯುವತಿಯೊಬ್ಬಳು ಮ್ಯಾಚ್ ಬಗ್ಗೆ ಕಿಂಚಿತ್ತು ಆಸಕ್ತಿ ತೋರದೆ, ತನ್ನ ಸ್ಮಾರ್ಟ್ಫೋನ್ನಲ್ಲಿ ಫ್ರೆಂಡ್ಸ್ ಸೀರಿಸ್ ನೋಡುತ್ತ ಕುಳಿತಿರುವುದನ್ನು ಕಂಡ ಬೆಂಗಳೂರು ತಂಡದ ಅಭಿಮಾನಿಗಳು ಭಾರೀ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.
ಲಕ್ನೋ ವಿರುದ್ಧ 28 ರನ್‌ಗಳ ಸೋಲಿನೊಂದಿಗೆ ತವರಿನಲ್ಲಿ ಸತತವಾಗಿ ಎರಡನೇ ಸೋಲನ್ನು ಅನುಭವಿಸಿದ ಆರ್ಸಿಬಿ ಇದುವರೆಗೆ ನಿರಾಶಾದಾಯಕ ಪ್ರದರ್ಶನವನ್ನು ತೋರಿದೆ. 182 ರನ್‌ಗಳ ಗುರಿಯೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.4 ಓವರ್‌ಗಳಲ್ಲಿ 153 ರನ್‌ಗಳಿಗೆ ಆಲೌಟ್ ಆಯಿತು. 13 ಎಸೆತಗಳಲ್ಲಿ 33 ರನ್ ಸಿಡಿಸಿದ ಮಹಿಪಾಲ್ ಲ್ಯಾಮ್ರೋರ್ಗೆ ಉತ್ತಮ ಜತೆಯಾಟ ಸಿಗಲಿಲ್ಲ. ವಿರಾಟ್ ಕೊಹ್ಲಿ (22), ಫಾಫ್ ಡು ಪ್ಲೆಸಿಸ್ (19) ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅಬ್ಬರಿಸದೆ ಪೆವಿಲಿಯನ್ಗೆ ಹೋಗಿದ್ದು, ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗಲಿಲ್ಲ.
ಐಪಿಎಲ್ 2024ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ ಎಲ್ಲರಿಗೂ ಮ್ಯಾಚ್ ಸೋತೆವು ಎಂಬ ಚಿಂತೆ, ದುಃಖ ಕಾಡುತ್ತಿದ್ದರೇ ಇಲ್ಲೊಬ್ಬಳು ಯುವತಿ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿ ಕುಳಿತು 'ಫ್ರೆಂಡ್ಸ್' ಸೀರಿಸ್ ವೀಕ್ಷಿಸುತ್ತಿರುವ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುವುದರ ಜತೆಗೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆರ್ಸಿಬಿ ಪಂದ್ಯ ಸೋತಿತು ಎಂದು ಹ್ಯಾಪೆ ಮೊರೆ ಹಾಕಿ ಕುಳಿತ್ತಿದ್ದ ಫ್ಯಾನ್ಸ್ ಒಂದೆಡೆಯಾದರೆ, ಮತ್ತೊಂದೆಡೆ ಈ ಯುವತಿ ಸೀರಿಸ್ ನೋಡುತ್ತ ಕುಳಿತ್ತಿದ್ದು ಬೆಂಗಳೂರು ಫ್ಯಾನ್ಸ್ಗೆ ಭಾರೀ ಬೇಸರ ತಂದಿದೆ. ಕೆಲವರು ಆರ್ಸಿಬಿ ಸೋಲುವ ಪಂದ್ಯ ನೋಡುವ ಬದಲು ಈ ಸೀರಿಸ್ ನೋಡುವುದೇ ಒಳಿತು ಎಂದರೆ, ಇನ್ನು ಕೆಲವರು ಆಕೆ ಮಾಡುತ್ತಿರುವುದು ಸರಿಯೇ ಇದೆ ಬಿಡಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವೊಬ್ಬರು ಆಹಾ, ಎಂಥಹ ಒಳ್ಳೆಯ ಕೆಲಸ...ಎಂದಿದ್ದಾರೆ. ಸದ್ಯ ಯುವತಿಯ ಈ ಪೋಸ್ಟ್ಗೆ ನೆಟ್ಟಿಗರಿಂದ ವ್ಯಾಪಕ ಅಭಿಪ್ರಾಯಗಳು ಹರಿದುಬಂದಿವೆ,(ಏಜೆನ್ಸೀಸ್).