

ಲಂಡನ್: ಭಾರತ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಲೀಡ್ಸ್ನ ಹೆಡಿಂಗ್ಲೆ ಸ್ಟೇಡಿಯಂನಲ್ಲಿ ಸಂಪೂರ್ಣ ಹಸಿರಾಗಿರುವ ಪಿಚ್ ಸಿದ್ಧಗೊಂಡಿದೆ. ಪಿಚ್ ಕ್ಯುರೇಟರ್ ರಿಚರ್ಡ್ ರಾಬಿನ್ಸನ್, ಪಂದ್ಯಕ್ಕೆ ಪಿಚ್ನಲ್ಲಿ ಗಣನೀಯ ಪ್ರಮಾಣದ ಹಸಿರು ಹುಲ್ಲು ಉಳಿಸಿಕೊಳ್ಳುವ ಯೋಚನೆಯನ್ನು ಹೊಂದಿದ್ದಾರೆ. ಜತೆಗೆ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 300 ರನ್ ಬಂದರೆ ಅದು ಉತ್ತಮ ಮೊತ್ತವೇ ಆಗಿರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಹಾಲಿ ವರ್ಷ ಲೀಡ್ಸ್ನಲ್ಲಿ ಹೆಚ್ಚಿನ ಮಳೆ ಬಿದ್ದಿಲ್ಲ. ಪಂದ್ಯಕ್ಕೆ ಮುನ್ನ 20-25 ಡಿಗ್ರಿ ಉಷ್ಣಾಂಶವಿದೆ. ಹೀಗಾಗಿ ಪಿಚ್ ಮೇಲೆ ಸರಿಯಾದ ಪ್ರಮಾಣದಲ್ಲಿ ತೇವಾಂಶ ಮತ್ತು ಹಸಿರು ಹುಲ್ಲು ಉಳಿಸಿ ಸ್ಪರ್ಧಾತ್ಮಕ ಪಿಚ್ ರೂಪಿಸುವುದು ಸವಾಲೆನಿಸಿದೆ. ಪಂದ್ಯ 3 ದಿನದಲ್ಲೇ ಮುಗಿಯದೆ 5ನೇ ದಿನದವರೆಗೆ ಆಟ ನಡೆಯುವಂತೆ ಮಾಡುವ ವಿಶ್ವಾಸವನ್ನು ರಾಬಿನ್ಸನ್ ಹೊಂದಿದ್ದಾರೆ. ಇಲ್ಲಿ ಈ ಹಿಂದೆ ನಡೆದ 84 ಟೆಸ್ಟ್ಗಳಲ್ಲಿ ಮೊದಲ ಇನಿಂಗ್ಸ್ನ ಸರಾಸರಿ ಮೊತ್ತ 298 ರನ್. ಈ ಸಲದ ಪಿಚ್ ಕೂಡ ಬಹುತೇಕ ಅದೇ ರೀತಿಯಾಗಿರಲಿದೆ ಎಂದು ರಾಬಿನ್ಸನ್ ತಿಳಿಸಿದ್ದಾರೆ.
ಇತ್ತೀಚೆಗೆ ಕ್ರಿಕೆಟ್ನಿಂದ ದೂರವಿರುವ ಸಮಯದಲ್ಲಿ ಕುಟುಂಬದೊಂದಿಗೆ ಲಂಡನ್ನಲ್ಲಿ ನೆಲೆಸಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಭಾರತ ತಂಡದ ಆಟಗಾರರಾದ ಶುಭಮಾನ್ ಗಿಲ್, ರಿಷಭ್ ಪಂತ್, ಮೊಹಮದ್ ಸಿರಾಜ್ಗೆ ಆತಿಥ್ಯ ನೀಡಿದ್ದಾರೆ. ಲಂಡನ್ನ ತನ್ನ ಮನೆಗೆ ಈ ಆಟಗಾರರನ್ನು ಕರೆಸಿಕೊಂಡು ಕೊಹ್ಲಿ ಔತಣ ನೀಡಿದ್ದಾರೆ ಎನ್ನಲಾಗಿದೆ. ಕೊಹ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟಗೊಳ್ಳುವುದಕ್ಕೆ ಮುನ್ನವೇ ಟೆಸ್ಟ್ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು.