ಗಿಲ್ ಪಡೆಗೆ ವೈಟ್‌ವಾಷ್ ತಪ್ಪಿಸುವ ಚಾಲೆಂಜ್: ಇಂದು ಭಾರತ- ಆಸ್ಟ್ರೇಲಿಯಾ ಅಂತಿಮ ಏಕದಿನ

New Project (1)
Published on

ಸಿಡ್ನಿ: ಮಾಜಿ ನಾಯಕರಾದ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಆಸೀಸ್ ನೆಲದಲ್ಲಿ ವೃತ್ತಿಜೀವನದ ಕೊನೇ ಪಂದ್ಯಕ್ಕೆ ಸಜ್ಜಾಗಿದ್ದು, ಇಬ್ಬರು ದಿಗ್ಗಜರಿಗೆ ಪಂದ್ಯವನ್ನು ಸ್ಮರಣೀಯವನ್ನಾಗಿಸುವ ಸವಾಲು ಶುಭಮಾನ್ ಗಿಲ್ ಬಳಗದ ಮುಂದಿದೆ. ಎಸ್‌ಸಿಜಿಯಲ್ಲಿ ಶನಿವಾರ ನಡೆಯಲಿರುವ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ, ಏಕದಿನ ಸರಣಿ ವೈಟ್‌ವಾಷ್‌ನಿಂದ ಪಾರಾಗುವ ಕಠಿಣ ಪರೀಕ್ಷೆ ಎದುರಿಸಲಿದೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತ ಹಿಂದೆಂದೂ ಆಸೀಸ್‌ಗೆ ಕ್ಲೀನ್‌ಸ್ವೀಪ್ ಸಾಧಿಸಲು ಅವಕಾಶ ನೀಡಿಲ್ಲ.

ಪಂದ್ಯ ಬಾಕಿಯಿರುವಂತೆಯೇ ಸರಣಿ ಜಯಿಸಿರುವ ಆಸ್ಟ್ರೇಲಿಯಾ ಪಾಲಿಗೆ ಔಪಚಾರಿಕ ಪಂದ್ಯ ಇದಾಗಿದ್ದು, ಚೊಚ್ಚಲ ಬಾರಿಗೆ ದ್ವಿಪಕ್ಷೀಯ ಸರಣಿಯಲ್ಲಿ ಭಾರತ ಎದುರು ಕ್ಲೀನ್‌ಸ್ವೀಪ್ ಸಾಧಿಸಲು ಹೋರಾಡಲಿದೆ. ರೋಹಿತ್- ಕೊಹ್ಲಿ ಆಸೀಸ್‌ನಲ್ಲಿ ಕೊನೆಯ ಬಾರಿಗೆ ಕಣಕ್ಕಿಳಿಯುವುದರ ಜತೆಗೆ ಸರಣಿ ಸೋಲಿನ ಅಂತರ ತಗ್ಗಿಸುವ ಒತ್ತಡ ಗಿಲ್ ಪಡೆಗಿದೆ. ಆಸ್ಟ್ರೇಲಿಯಾದಲ್ಲಿ ಮುಂದಿನ ಎರಡು ವರ್ಷ ಭಾರತ ಯಾವುದೇ ಏಕದಿನ ಸರಣಿ ಆಡದಿರುವುದರಿಂದ ರೋ-ಕೊ ಪಾಲಿಗೆ ಇದು ಆಸೀಸ್‌ನಲ್ಲಿ ಬಹುತೇಕ ಕೊನೇ ಪಂದ್ಯ ಎನಿಸಿದೆ.

2007-08ರ ಕಾಮನ್ವೆಲ್ತ್ ಬ್ಯಾಂಕ್ ಸರಣಿಯಲ್ಲಿ ರೋಹಿತ್ ಮೊದಲ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡರೆ, ಕೊಹ್ಲಿ 2011-12ರ ಟೆಸ್ಟ್ ಸರಣಿಯ ಅಡಿಲೇಡ್ ಪಂದ್ಯದಲ್ಲಿ ಶತಕದೊಂದಿಗೆ ಗಮನಸೆಳೆದಿದ್ದರು. ಆಧುನಿಕ ಕ್ರಿಕೆಟ್‌ನ ದಿಗ್ಗಜ ಕೊಹ್ಲಿ ಸರಣಿಯ ಎರಡು ಪಂದ್ಯಗಳಲ್ಲಿ ಸತತ 2 ಶೂನ್ಯ ಸಂಪಾದನೆಯೊಂದಿಗೆ ನಿರಾಸೆ ಮೂಡಿಸಿದ್ದಾರೆ. ಟೆಸ್ಟ್ ನಾಯಕನಾಗಿ ಇಂಗ್ಲೆಂಡ್‌ನಲ್ಲಿ ರನ್ ಪ್ರವಾಹ ಹರಿಸಿದ್ದ ಶುಭಮಾನ್ ಗಿಲ್, ಏಕದಿನದಲ್ಲಿ ಪುನರಾವರ್ತಿಸಲು ವಿಲರಾಗಿದ್ದಾರೆ. ಎರಡು ಪಂದ್ಯಗಳಲ್ಲಿ ಕ್ರಮವಾಗಿ 10, 9 ರನ್ ಮಾತ್ರ ಕಲೆಹಾಕಿದ್ದಾರೆ. ಆರಂಭಿಕ ಸ್ಥಾನಕ್ಕೆ ಯಶಸ್ವಿ ಜೈಸ್ವಾಲ್‌ರಿಂದ ಪೈಪೋಟಿ ಎದುರಿಸುತ್ತಿರುವ ರೋಹಿತ್ ಶರ್ಮ, ಹಿಂದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ತುಸು ನಿರಾಳರಾಗಿದ್ದಾರೆ. ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಹಾಗೂ ಕೆಎಲ್ ರಾಹುಲ್‌ರಿಂದ ಹೆಚ್ಚಿನ ಕೊಡುಗೆ ಬೇಕಿದೆ.

ಸಿಡ್ನಿಯಲ್ಲಿ ಭಾರತ ಇದುವರೆಗೆ ಆಡಿರುವ ಐದು ಪಂದ್ಯಗಳ ಪೈಕಿ 1ರಲ್ಲಿ ಮಾತ್ರ ಗೆದ್ದಿದೆ. ಎರಡನೇ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ವೈಲ್ಯ ಕಂಡ ಭಾರತ, ಹಾಲಿ ವರ್ಷ ಸತತ ಮೂರನೇ ಸೋಲು ತಪ್ಪಿಸಲು ಪುಟಿದೇಳಬೇಕಿದೆ. ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ನಿವೃತ್ತಿಯ ಬಳಿಕ ಸ್ಥಿತ್ಯಂತರದಲ್ಲಿರುವ ಆಸ್ಟ್ರೇಲಿಯಾ ಅನನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಂದಲೇ ಮೇಲುಗೈ ಸಾಧಿಸಿದೆ. ವೇಗಿ ಜೋಶ್ ಹ್ಯಾಸಲ್‌ವುಡ್ ನಿರ್ವಹಣೆ ಪ್ಲಸ್ ಪಾಯಿಂಟ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net