ಮೀಸಲು ಬಳಗದಿಂದ ಗಿಲ್,ಆವೇಶ್ ಬಿಡುಗಡೆ: ಶುಭಮಾನ್ ವಿರುದ್ಧ ಶಿಸ್ತು ಕ್ರಮ?

New-Project-5-1
Published on

ಲೌಡೆರ್‌ಹಿಲ್: ಯುವ ಬ್ಯಾಟರ್ ಶುಭಮಾನ್ ಗಿಲ್ ಹಾಗೂ ವೇಗಿ ಆವೇಶ್ ಖಾನ್ ಅವರನ್ನು ಟೀಮ್ ಇಂಡಿಯಾ ಟಿ20 ವಿಶ್ವಕಪ್ ತಂಡದ ಮೀಸಲು ಬಳಗದಿಂದ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು, ಕೆನಡಾ ವಿರುದ್ಧ ಪಂದ್ಯದ ಬಳಿಕ ಭಾರತಕ್ಕೆ ವಾಪಸ್ ಆಗಿದ್ದಾರೆ. ಟೂರ್ನಿಯಲ್ಲಿ ಯಾವುದೇ ಆಟಗಾರರು ಗಾಯದ ಸಮಸ್ಯೆಗೆ ತುತ್ತಾದರೆ ಬದಲಿ ಆಟಗಾರರಾಗಿ ಸೇರ್ಪಡೆ ಮಾಡಲು ಪ್ರಧಾನ ತಂಡದೊಂದಿಗೆ ರಿಂಕು ಸಿಂಗ್, ಆವೇಶ್ ಖಾನ್, ಶುಭಮಾನ್ ಗಿಲ್, ಖಲೀಲ್ ಅಹ್ಮದ್ ಅವರನ್ನು ಮೀಸಲು ಆಟಗಾರರಾಗಿ ಬಿಸಿಸಿಐ ಹೆಸರಿಸಿತ್ತು. ಜತೆಗೆ ನಾಲ್ವರು ಆಟಗಾರರು ಟೀಮ್ ಇಂಡಿಯಾದೊಂದಿಗೆ ಅಮೆರಿಕಕ್ಕೆ ಪ್ರಯಾಣಿಸಿದ್ದರು.

ಭಾರತ ತಂಡ ಸೂಪರ್-8 ಪಂದ್ಯಗಳನ್ನು ವೆಸ್ಟ್ ಇಂಡೀಸ್‌ನಲ್ಲಿ ಜೂ.20, 22, 24ರಂದು ಆಡಲಿದ್ದು, ಪಂದ್ಯಗಳ ನಡುವೆ ಆಟಗಾರರ ಅಭ್ಯಾಸಕ್ಕೆ ಸಮಯದ ಕೊರತೆ ಕಾಡಲಿದೆ. ಆದ್ದರಿಂದ ಆಟಗಾರರ ಕಾರ್ಯ ನಿರ್ವಹಣೆ ತಪ್ಪಿಸುವ ಉದ್ದೇಶದಿಂದ ಗಿಲ್ ಹಾಗೂ ಆವೇಶ್ ಅವರನ್ನು ಬಿಡುಗಡೆ ಮಾಡಲಾಗಿದೆ. ಒಂದು ವೇಳೆ ತಂಡದಲ್ಲಿ ಗಾಯದ ಸಮಸ್ಯೆ ಕಾಡಿದರೆ ಆರಂಭಿಕನ ಸ್ಥಾನ ತುಂಬಲು ಯಶಸ್ವಿ ಜೈಸ್ವಾಲ್, ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ಸನ್ ತಂಡದಲ್ಲಿರುವುದರಿಂದ ಇವರಿಬ್ಬರನ್ನು ಬಿಡುಗಡೆ ಮಾಡಲಾಗಿದೆ. ಜತೆಗೆ ಇವರಿಬ್ಬರನ್ನು ಲೀಗ್ ಪಂದ್ಯಗಳಿಗೆ ಮಾತ್ರ ಮೀಸಲು ಆಟಗಾರರನ್ನಾಗಿ ಹೆಸರಿಸಲಾಗಿತ್ತು ಎನ್ನಲಾಗಿದೆ. ಟೀಮ್ ಇಂಡಿಯಾದಲ್ಲಿ ಈಗಾಗಲೆ ಮೂವರು ವೇಗಿಗಳಿದ್ದು, ವಿಂಡೀಸ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗುವ ಸಾಧ್ಯತೆಗಳಿವೆ. ಇದರಿಂದ ಆವೇಶ್‌ರನ್ನು ಬಿಡುಗಡೆ ಮಾಡಲಾಗಿದೆ. ಅಭ್ಯಾಸದಲ್ಲಿ ವೈವಿಧ್ಯತೆ ತರಲು ಎಡಗೈ ವೇಗಿ ಖಲೀಲ್ ಅಹ್ಮದ್ ಅವರನ್ನು ಉಳಿಸಿಕೊಳ್ಳಲಾಗಿದೆ.

ಗಿಲ್ ವಿರುದ್ಧ ಶಿಸ್ತು ಕ್ರಮ?

ಮೀಸಲು ಬಳಗದಿಂದ ಶುಭಮಾನ್ ಗಿಲ್‌ರನ್ನು ಕೈಬಿಟ್ಟ ಬೆನ್ನಲ್ಲೇ, ಇದು ಬಿಸಿಸಿಐನ ಶಿಸ್ತುಕ್ರಮ ಎಂದು ವರದಿಯಾಗಿದೆ. ಟೀಮ್ ಇಂಡಿಯಾದೊಂದಿಗೆ ಅಮೆರಿಕಕ್ಕೆ ತೆರಳಿದ ಗಿಲ್ ತಂಡದ ಅಭ್ಯಾಸ ಅವಧಿಯಲ್ಲಿ ಹೆಚ್ಚಾಗಿ ಭಾಗವಹಿಸುತ್ತಿರಲಿಲ್ಲ. ಜತೆಗೆ ವೈಯಕ್ತಿಕ ಹಿತಾಸಕ್ತಿಯ ವ್ಯಾಪಾರ ಹಾಗೂ ಉದ್ಯಮಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿದರು ಎನ್ನಲಾಗಿದೆ. ಇದು ನಾಯಕ ರೋಹಿತ್ ಹಾಗೂ ಗಿಲ್ ನಡುವೆ ಮನಸ್ತಾಪ ಉಂಟು ಮಾಡಿದ್ದು, ಇನ್‌ಸ್ಟಾಗ್ರಾಂನಲ್ಲಿ ರೋಹಿತ್‌ರನ್ನು ಗಿಲ್ ಅನ್‌ಾಲೋ ಮಾಡಿದ್ದಾರೆ ಎನ್ನಲಾಗಿದೆ. ಭಾರತ-ಪಾಕ್ ನಡುವಿನ ಪಂದ್ಯದ ವೇಳೆ ಆವೇಶ್, ರಿಂಕು ಹಾಗೂ ಖಲೀಲ್ ಗ್ಯಾಲರಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆದರೆ ಗಿಲ್ ಮಾತ್ರ ಎಲ್ಲಿಯೂ ಕಾಣಿಸಿಕೊಳ್ಳದೆ ಗೈರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net