ದಿಗ್ಗಜರ ದಾಖಲೆ ಮೇಲೆ ಗಿಲ್​ ಕಣ್ಣು!: ದ್ರಾವಿಡ್​, ಗಾವಸ್ಕರ್​, ಬ್ರಾಡ್ಮನ್​ ಸಾಧನೆಗಳನ್ನು ಹಿಂದಿಕ್ಕುವ ಅವಕಾಶ

New Project (2)
Published on

ಲಂಡನ್​: ಎಜ್​ಬಾಸ್ಟನ್​ ಟೆಸ್ಟ್​ ಒಂದರಲ್ಲೇ ಬರೋಬ್ಬರಿ 34 ದಾಖಲೆಗಳನ್ನು ಅಳಿಸಿಹಾಕಿರುವ ಭಾರತ ಟೆಸ್ಟ್​ ತಂಡದ ನಾಯಕ ಹಾಗೂ ಬ್ಯಾಟರ್​ ಶುಭಮಾನ್​ ಗಿಲ್​ ಇಂಗ್ಲೆಂಡ್​ ವಿರುದ್ಧದ ಆಂಡರ್​ಸನ್​-ತೆಂಡುಲ್ಕರ್​ ಟ್ರೋಫಿ ಸರಣಿಯ ಉಳಿದ 3 ಪಂದ್ಯಗಳಲ್ಲಿ ಇನ್ನಷ್ಟು ದಾಖಲೆಗಳನ್ನು ಬರೆಯುವ ಅವಕಾಶವನ್ನು ಹೊಂದಿದ್ದಾರೆ. ಸರಣಿಯ ಮೊದಲ 2 ಪಂದ್ಯಗಳಲ್ಲೇ 3 ಶತಕಗಳ ಸಹಿತ 585 ರನ್​ ಸಿಡಿಸಿರುವ ಗಿಲ್​, ಮುಂದಿನ ಪಂದ್ಯಗಳಲ್ಲಿ ರಾಹುಲ್​ ದ್ರಾವಿಡ್​, ಸುನೀಲ್​ ಗಾವಸ್ಕರ್​ ಮತ್ತು ಡಾನ್​ ಬ್ರಾಡ್ಮನ್​ರಂಥ ದಿಗ್ಗಜರ ದಾಖಲೆಗಳನ್ನು ಮುರಿಯುವ ನಿರೀೆ ಮೂಡಿಸಿದ್ದಾರೆ.

ಇಂಗ್ಲೆಂಡ್​ನಲ್ಲಿ ಗರಿಷ್ಠ ರನ್​: ರಾಹುಲ್​ ದ್ರಾವಿಡ್​ 2002ರಲ್ಲಿ 4 ಪಂದ್ಯಗಳ ಸರಣಿಯಲ್ಲಿ 602 ರನ್​ ದಾಖಲಿಸಿರುವುದು, ಇಂಗ್ಲೆಂಡ್​ನಲ್ಲಿ ನಡೆದ ಟೆಸ್ಟ್​ ಸರಣಿಯೊಂದರಲ್ಲಿ ಭಾರತೀಯ ಬ್ಯಾಟರ್​ ಗಳಿಸಿರುವ ಗರಿಷ್ಠ ರನ್​ ಆಗಿದೆ. ಗಿಲ್​ ಇನ್ನು ಸರಣಿಯ ಉಳಿದ 3 ಪಂದ್ಯಗಳಲ್ಲಿ 18 ರನ್​ ಗಳಿಸಿದರೂ, 23 ವರ್ಷ ಹಿಂದಿನ ದ್ರಾವಿಡ್​ ದಾಖಲೆಯನ್ನು ಮುರಿಯಲಿದ್ದಾರೆ. ಯಶಸ್ವಿ ಜೈಸ್ವಾಲ್​ ಕಳೆದ ವರ್ಷ ತವರಿನ ಸರಣಿಯಲ್ಲಿ 712 ರನ್​ ಗಳಿಸಿದ್ದು, ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯೊಂದರಲ್ಲಿ ಭಾರತೀಯ ಬ್ಯಾಟರ್​ನ ಗರಿಷ್ಠ ಗಳಿಕೆಯಾಗಿದೆ. ಇನ್ನು 127 ರನ್​ ಗಳಿಸಿದರೆ ಗಿಲ್​ ಇದನ್ನೂ ಹಿಂದಿಕ್ಕಬಹುದು.

ಭಾರತ ಪರ ಸರಣಿಯೊಂದರಲ್ಲಿ ಗರಿಷ್ಠ ರನ್​: ಸುನೀಲ್​ ಗಾವಸ್ಕರ್​ 1970-71ರ ವೆಸ್ಟ್​ ಇಂಡೀಸ್​ ಪ್ರವಾಸದ 4 ಟೆಸ್ಟ್​ಗಳಲ್ಲಿ 4 ಶತಕಗಳ ಸಹಿತ 774 ರನ್​ ಸಿಡಿಸಿರುವುದು ಸರಣಿಯೊಂದರಲ್ಲಿ ಭಾರತ ಪರ ಗರಿಷ್ಠ ರನ್​ ಆಗಿದೆ. ಗಿಲ್​ ಇನ್ನು 190 ರನ್​ ಗಳಿಸಿದರೆ ಗಾವಸ್ಕರ್​ರ 54 ವರ್ಷ ಹಳೆಯ ದಾಖಲೆಯನ್ನು ಮುರಿಯಲಿದ್ದಾರೆ. ಇನ್ನು ಗಾವಸ್ಕರ್​ 1978-79ರಲ್ಲಿ ವಿಂಡೀಸ್​ ಎದುರಿನ 6 ಟೆಸ್ಟ್​ಗಳಲ್ಲಿ 732 ರನ್​ ಗಳಿಸಿರುವುದು, ಭಾರತೀಯ ನಾಯಕನೊಬ್ಬ ಸರಣಿಯೊಂದರಲ್ಲಿ ಗಳಿಸಿರುವ ಗರಿಷ್ಠ ರನ್​ ಆಗಿದೆ. ಗಿಲ್​ ಇನ್ನು 148 ರನ್​ ಗಳಿಸಿದರೆ, ಸರಣಿಯೊಂದರಲ್ಲಿ ಗರಿಷ್ಠ ರನ್​ ಗಳಿಸಿದ ಭಾರತೀಯ ನಾಯಕ ಎನಿಸಲಿದ್ದಾರೆ.

ಸಾವಿರ ರನ್​ ಚಾನ್ಸ್​!

ಆಸ್ಟ್ರೆಲಿಯಾದ ದಂತಕಥೆ ಡಾನ್​ ಬ್ರಾಡ್ಮನ್​ 1930ರಲ್ಲಿ ಇಂಗ್ಲೆಂಡ್​ ವಿರುದ್ಧದ ಆಶಸ್​ ಸರಣಿಯ 5 ಟೆಸ್ಟ್​ಗಳಲ್ಲಿ 4 ಶತಕಗಳ ಸಹಿತ 974 ರನ್​ ಸಿಡಿಸಿರುವುದು, ಸರಣಿಯೊಂದರಲ್ಲಿ ದಾಖಲಾಗಿರುವ ಗರಿಷ್ಠ ರನ್​ ವಿಶ್ವದಾಖಲೆಯಾಗಿದೆ. ಗಿಲ್​ ಸರಣಿಯ ಉಳಿದ 3 ಪಂದ್ಯಗಳಲ್ಲಿ 390 ರನ್​ ಗಳಿಸಿದರೆ, 95 ವರ್ಷ ಹಳೆಯ ಈ ದಾಖಲೆ ಮುರಿಯುವ ಅವಕಾಶವನ್ನು ಹೊಂದಿದ್ದಾರೆ.

ಬ್ರಾಡ್ಮನ್​ 1936-37ರ ಆಶಸ್​ನಲ್ಲಿ 810 ರನ್​ ಗಳಿಸಿದ್ದು, 5 ಪಂದ್ಯಗಳ ಸರಣಿಯೊಂದರಲ್ಲಿ ಗರಿಷ್ಠ ರನ್​ ದಾಖಲೆಯಾಗಿದೆ. ಇನ್ನು 225 ರನ್​ ಗಳಿಸಿದರೆ ಗಿಲ್​ ಇದನ್ನೂ ಮುರಿಯಬಹುದಾಗಿದೆ. ಅಲ್ಲದೆ ಗಿಲ್​ ಇನ್ನು 415 ರನ್​ ಗಳಿಸಿದರೆ, ಟೆಸ್ಟ್​ ಸರಣಿಯೊಂದರಲ್ಲಿ ಸಾವಿರ ರನ್​ ಗಳಿಸಿದ ವಿಶ್ವದ ಮೊಟ್ಟಮೊದಲ ಬ್ಯಾಟರ್​ ಎನಿಸಲಿದ್ದಾರೆ. ಈ ಮೂಲಕ ಗಿಲ್​ ನಾಯಕನಾಗಿ ಅತಿವೇಗದ ಸಾವಿರ ರನ್​ ಸಿಡಿಸಿದ ಸಾಧನೆಯನ್ನೂ ಮಾಡಬಹುದು. ಬ್ರಾಡ್ಮನ್​ ನಾಯಕನಾಗಿ 11 ಇನಿಂಗ್ಸ್​ಗಳಲ್ಲಿ ಸಾವಿರ ರನ್​ ಗಳಿಸಿದ್ದು ಹಾಲಿ ದಾಖಲೆಯಾಗಿದೆ. ಗಾವಸ್ಕರ್​ 14 ಇನಿಂಗ್ಸ್​ಗಳಲ್ಲಿ ಸಾವಿರ ರನ್​ ಗಳಿಸಿದ್ದು, ಭಾರತೀಯ ನಾಯಕನ ದಾಖಲೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net