ಮತ್ತೆ ಬಸಿರಾದ ಗೀತಾ ಬಾಸ್ರಾ, 2ನೇ ಮಗುವಿನ ನಿರೀಕ್ಷೆಯಲ್ಲಿ ಹರ್ಭಜನ್ ಸಿಂಗ್

harbajan singh web
Published on

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಮತ್ತು ಬಾಲಿವುಡ್ ನಟಿ ಗೀತಾ ಬಾಸ್ರಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿರುವುದನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ 37ನೇ ಜನ್ಮದಿನದ ಮರುದಿನವಾದ ಭಾನುವಾರ ಗೀತಾ ಬಾಸ್ರಾ ತಾವು ಗರ್ಭಿಣಿಯಾಗಿರುವುದನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ವಿಶೇಷ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದು, 2021ರ ಜುಲೈನಲ್ಲಿ ಮಗುವಿನ ಆಗಮನವಾಗಲಿದೆ ಎಂದು ಹೇಳಿಕೊಂಡಿದ್ದಾರೆ.

ಗೀತಾ ಬಾಸ್ರಾ ಅವರು ಹಾಕಿರುವ ಪೋಸ್ಟ್‌ನಲ್ಲಿ ಪತಿ ಹರ್ಭಜನ್ ಸಿಂಗ್ ಜತೆಗೆ ಮೊದಲ ಮಗಳು ಹಿನಾಯಾ ಕೂಡ, ‘ಶೀಘ್ರವೇ ದೊಡ್ಡ ಅಕ್ಕನಾಗುವೆ’ ಎಂದು ಬರೆದಿರುವ ಕಪ್ಪು ಟೀ-ಶರ್ಟ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಜತೆಗೆ ಗೀತಾ ಬಾಸ್ರಾ ಅವರು ಬೇಬಿ ಬಂಪ್ ಪ್ರದರ್ಶಿಸಿದ್ದಾರೆ.

ಹರ್ಭಜನ್ ಸಿಂಗ್ ಮತ್ತು ಗೀತಾ ಬಾಸ್ರಾ 5 ವರ್ಷಗಳ ಡೇಟಿಂಗ್ ಬಳಿಕ 2015ರ ಅಕ್ಟೋಬರ್ 29ರಂದು ವಿವಾಹವಾಗಿದ್ದರು. 2016ರ ಹಿನಾಯ ಲಂಡನ್‌ನಲ್ಲಿ ಜನಿಸಿದ್ದರು. 40 ವರ್ಷದ ಹರ್ಭಜನ್ ಸಿಂಗ್, 103 ಟೆಸ್ಟ್, 236 ಏಕದಿನ ಮತ್ತು 28 ಟಿ20 ಪಂದ್ಯವಾಡಿದ್ದು, ಕ್ರಮವಾಗಿ 417, 269 ಮತ್ತು 25 ವಿಕೆಟ್ ಕಬಳಿಸಿದ್ದಾರೆ. 2015ರಲ್ಲಿ ಕೊನೆಯದಾಗಿ ಅವರು ಭಾರತವನ್ನು ಪ್ರತಿನಿಧಿಸಿದ್ದು, ಮುಂಬರುವ ಐಪಿಎಲ್‌ನಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ವರ್ಷ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡವನ್ನು ಪ್ರತಿನಿಧಿಸಬೇಕಾಗಿದ್ದ ಹರ್ಭಜನ್ ಸಿಂಗ್, ಕೊನೇಕ್ಷಣದಲ್ಲಿ ಟೂರ್ನಿಯಿಂದಲೇ ಹಿಂದೆ ಸರಿದಿದ್ದರು.

ಗೀತಾ ಬಾಸ್ರಾ 2006ರಲ್ಲಿ ಇಮ್ರಾನ್ ಹಶ್ಮಿ ಹೀರೋ ಆಗಿದ್ದ ದಿಲ್ ದಿಯಾ ಹೈ ಸಿನಿಮಾದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಬಳಿಕ ದಿ ಟ್ರೇನ್, ಜಿಲ್ ಗಝಿಯಾಬಾದ್, ಸೆಕೆಂಡ್ ಹ್ಯಾಂಡ್ ಹಸ್ಬಂಡ್, ಲಾಕ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net