

Sarfaraz Khan: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಲು ಭಾರೀ ಕಸರತ್ತು ನಡೆಸಿದ್ದ ಸರ್ಫರಾಜ್ ಖಾನ್, ಬರೋಬ್ಬರಿ 10 ಕೆಜಿ ತೂಕವನ್ನು ಇಳಿಸಿಕೊಂಡು, ತಂಡದಲ್ಲಿ ಸ್ಥಾನ ಪಡೆಯಲು ಎದುರುನೋಡುತ್ತಿದ್ದರು. ಆದರೆ, ಸರಣಿಗೂ ಮುನ್ನ ಬಿಸಿಸಿಐನ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಇದನ್ನು ಪರಿಗಣಿಸದೆ ಸರ್ಫರಾಜ್ರನ್ನು ತಂಡದಿಂದ ಕೈಬಿಟ್ಟರು. ಇದು ಯುವ ಪ್ರತಿಭೆಗೆ ತೀರ ಬೇಸರ ತಂದೊಡ್ಡಿತ್ತು. ಇದೀಗ ಈ ವಿಚಾರಕ್ಕೆ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಪ್ರತಿಕ್ರಿಯಿಸಿದ್ದಾರೆ.
ಪ್ರಸ್ತುತ, 17 ಕೆಜಿ ತೂಕವನ್ನು ಇಳಿಸಿಕೊಂಡು, ಸಖತ್ ಫಿಟ್ ಆಗಿರುವ ಸರ್ಫರಾಜ್ ಖಾನ್, ರಾಷ್ಟ್ರೀಯ ತಂಡಕ್ಕೆ ಮರಳಲು ಭಾರೀ ಶ್ರಮಿಸುತ್ತಿದ್ದಾರೆ. ದೇಶೀಯ ಕ್ರಿಕೆಟ್ನಲ್ಲಿ ಈಗಾಗಲೇ ಶತಕದಾಟ ಮತ್ತು ಅದ್ಭುತ ಇನ್ನಿಂಗ್ಸ್ ತೋರಿರುವ ಖಾನ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವ ಹೆಬ್ಬಯಕೆ ಹೊಂದಿದ್ದಾರೆ. ಆದರೆ, ಇದು ಸಾಧ್ಯವಾಗದೆ ಇರುವುದು ಹಲವರ ಪ್ರಶ್ನೆ, ಚರ್ಚೆಗೆ ಕಾರಣವಾಗಿದೆ.
ಆಯ್ಕೆಗಾರರು ತಮ್ಮನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ್ದೇ ಅತಿಯಾದ ತೂಕ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲಿಲ್ಲ ಎಂಬ ವಿಷಯಕ್ಕೆ ಎಂಬುದನ್ನು ಅರಿತ ಬೆನ್ನಲ್ಲೇ ಸರ್ಫರಾಜ್ ತೂಕ ಇಳಿಕೆಗೆ ಮುಂದಾದರು ಎಂದು ವರದಿ ಉಲ್ಲೇಖಿಸಿದೆ. ಬಿಸಿಸಿಐ ಆಯ್ಕೆಗಾರರು ಯುವ ಆಟಗಾರರನ್ನು ಪರಿಗಣಿಸಲಿಲ್ಲ ಎಂಬ ವಿಚಾರವನ್ನು ಪಾಡ್ಕಾಸ್ಟ್ನಲ್ಲಿ ಪ್ರಸ್ತಾಪಿಸಿದ ಗೇಲ್, ಸರ್ಫರಾಜ್ರನ್ನು ಟೆಸ್ಟ್ ತಂಡದಲ್ಲಿ ಆಡಿಸುವುದು ಉತ್ತಮ ಎಂದಿದ್ದಾರೆ.
"ಇತರೆ ಫಾರ್ಮೆಟ್ ಅಲ್ಲದಿದ್ದರೂ ಕನಿಷ್ಠ ಪಕ್ಷ ಟೆಸ್ಟ್ ತಂಡದಲ್ಲಾದರೂ ಅವರಿರಬೇಕು. ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಆಕರ್ಷಕ ಶತಕ ಗಳಿಸಿದ್ದಾರೆ. ನಾನು ಎರಡು ದಿನಗಳ ಹಿಂದೆ ಒಂದು ಪೋಸ್ಟ್ ನೋಡಿದೆ. ಅವರು, ತೂಕ ಇಳಿಸಿಕೊಂಡಿದ್ದಾರೆ ಎಂದು. ರನ್ ಗಳಿಸುವಲ್ಲಿ ಸರ್ಫರಾಜ್ ಉತ್ತಮ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅವರು ತ್ರಿಶತಕ ಸಿಡಿಸಿದ್ದಾರೆ. ಅವರಿಗೆ ತಂಡದಲ್ಲಿ ಸ್ಥಾನ ಕೊಡುವುದು ಒಳ್ಳೆಯದು. ಭಾರತದಲ್ಲಿ ಸಾಕಷ್ಟು ಪ್ರತಿಭೆಗಳಿಂದ ಕೂಡಿದೆ. ಅವಕಾಶ ಕೊಡಿ ನೋಡೋಣ" ಎಂದು ಹೇಳಿದ್ದಾರೆ,(ಏಜೆನ್ಸೀಸ್).