

ದುಬೈ: ಕಲುಷಿತ ಆಹಾರ ಸೇವನೆಯಿಂದಾಗಿ ಆಸ್ಪತ್ರೆ ಸೇರಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರೀಗ ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಅವರು ಗುರುವಾರ ನಡೆಯಲಿರುವ ತಮ್ಮ ಹಳೆಯ ತಂಡ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀಕ್ಷೆ ಇದೆ.
ಕಳೆದ ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲೇ 41 ವರ್ಷದ ಗೇಲ್ ಆಡಬೇಕಾಗಿತ್ತು. ಆದರೆ ಅನಾರೋಗ್ಯದಿಂದಾಗಿ ಶನಿವಾರ ನಡೆದ ಕೆಕೆಆರ್ ವಿರುದ್ಧದ ಪಂದ್ಯದಿಂದಲೂ ಹೊರಗುಳಿದಿದ್ದರು. ಇದರ ಬೆನ್ನಲ್ಲೇ ಅವರು ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಆರ್‌ಸಿಬಿ ವಿರುದ್ಧದ ಪಂದ್ಯ ಶಾರ್ಜಾದಲ್ಲಿ ನಡೆಯಲಿದ್ದು, ಇಲ್ಲಿನ ಸಣ್ಣ ಮೈದಾನದಲ್ಲಿ ಗೇಲ್ ಅವರಿಂದ ಸಿಕ್ಸರ್ ಸುರಿಮಳೆ ಕಾಣುವ ಹಂಬಲವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹೊಂದಿದೆ. ಇದರಿಂದಾಗಿ, ಸತತ 5 ಸೋಲಿನ ಸುಳಿಯಿಂದಲೂ ಕೆಎಲ್ ರಾಹುಲ್ ಬಳಗ ಹೊರಬರಬಹುದಾಗಿದೆ. ಪಂಜಾಬ್ ತಂಡ ಈಗ ಪ್ಲೇಆಫ್ ಆಸೆ ಜೀವಂತ ಉಳಿಸಿಕೊಳ್ಳಲು ಉಳಿದ ಏಳೂ ಲೀಗ್ ಪಂದ್ಯಗಳನ್ನು ಜಯಿಸಬೇಕಾಗಿದೆ.