ಟಾರ್ಗೆಟ್​ ನಾನಾಗಿರಲಿ, ಆ ಯುವಕ ಅಲ್ಲ! ಮಾಜಿ ಕ್ರಿಕೆಟಿಗನಿಗೆ ಗೌತಮ್ ಗಂಭೀರ್​ ಖಡಕ್​ ವಾರ್ನಿಂಗ್​ | Gautam Gambhir

ವಿಜಯವಾಣಿ (51)
Published on

ನವದೆಹಲಿ: ಇದೇ ಅ.19ರಿಂದ ಆರಂಭಗೊಳ್ಳಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಏಕದಿನ ಪಂದ್ಯಗಳು ಮತ್ತು ಐದು ಪಂದ್ಯಗಳ ಟಿ20 ಸರಣಿಗೆ ಈಗಾಗಲೇ ಎರಡು ದೇಶದ ತಂಡಗಳು ಪ್ರಕಟವಾಗಿವೆ. ಏಕದಿನ ಸರಣಿಗೆ ಟೀಮ್ ಇಂಡಿಯಾ ಸನ್ನದ್ಧವಾಗಿದ್ದು, ದಿಗ್ಗಜ ಕ್ರಿಕೆಟಿಗರಾದ ರೋಹಿತ್ ಶರ್ಮ ಮತ್ತು ವಿರಾಟ್​ ಕೊಹ್ಲಿ ತಂಡಕ್ಕೆ ಕಮ್​ಬ್ಯಾಕ್​ ಮಾಡಿರುವುದು ಕ್ರಿಕೆಟ್​ ಪ್ರಿಯರ ಉತ್ಸಾಹವನ್ನು ಹೆಚ್ಚಿಸಿದೆ. ಈ ಮಧ್ಯೆ, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೌತಮ್ ಗಂಭೀರ್ (Gautam Gambhir), ಹರ್ಷಿತ್ ರಾಣಾ ಬಗ್ಗೆ ಕೇಳಿಬಂದ ವಿಚಾರಕ್ಕೆ ಕಿಡಿಕಾರಿದ್ದಾರೆ.

ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಕ್ರಿಸ್​ ಶ್ರೀಕಾಂತ್​, 23ರ ಯುವಕ ಹರ್ಷಿತ್​ ರಾಣಾ ಆಸೀಸ್​ ವಿರುದ್ಧದ ಎರಡು ಸರಣಿಗೂ ಆಯ್ಕೆಯಾದ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ವ್ಯಂಗ್ಯವಾಡಿದ್ದರು. 'ಗಂಭೀರ್​ನಿಂದ ಆ ಯುವಕ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಗೌತಿ ಕೋಚ್ ಆಗಿರುವವರೆಗೂ ಆತನಿಗೆ ಯಾವುದೇ ಸಮಸ್ಯೆ ಕಾಡುವುದಿಲ್ಲ. ಇಂದು ಆತ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾನೆ ಎಂದರೆ ಅದಕ್ಕೆ ಗಂಭೀರ್ ಕಾರಣ' ಎಂದಿದ್ದರು. ಈ ವಿಚಾರ ಮುನ್ನೆಲೆಗೆ ಬರ್ತಿದ್ದಂತೆ ಸಿಟ್ಟಾದ ಗೌತಿ, "ನಿಮ್ಮ ಟಾರ್ಗೆಟ್​ ನಾನಾಗಿರಲಿ ಆ ಹುಡುಗ ಅಲ್ಲ" ಎಂದಿದ್ದಾರೆ.

"ಯಾರ ಬೆಂಬಲವಿಲ್ಲದೆ ತನ್ನ ಸ್ವಂತ ಪ್ರತಿಭೆಯಿಂದ ಹರ್ಷಿತ್​ ಕ್ರಿಕೆಟ್ ಆಡುತ್ತಿದ್ದೇನೆ. ಇಲ್ಲಿ ನೀವು ಯಾರನ್ನು ಟಾರ್ಗೆಟ್​ ಮಾಡಬೇಕು ಎಂದುಕೊಂಡಿದ್ದೀರಿ, ಅವರನ್ನೇ ಗುರಿಯಾಗಿಸಿಕೊಳ್ಳಿ. ನಿಮ್ಮ ಟಾರ್ಗೆಟ್​ ನಾನಾಗಿದ್ದರೆ ನಾನೇ ಇರಲಿ. ಅದನ್ನು ಬಿಟ್ಟು, ಯುವ ಆಟಗಾರನನ್ನು ಈ ರೀತಿ ಟ್ರೋಲ್ ಮಾಡುವುದು ನಾಚಿಕೆಗೇಡು. ಹರ್ಷಿತ್ ರಾಣಾ ವಿಚಾರದಲ್ಲಿ ಮಾತ್ರವಲ್ಲ, ಭವಿಷ್ಯದಲ್ಲಿ ಯಾವುದೇ ಆಟಗಾರನ ಮೇಲೆ ಇಂತಹ ವೈಯಕ್ತಿಕ ಟೀಕೆಗಳನ್ನು ಮಾಡಬಾರದು" ಎಂದು ಗಂಭೀರ್ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net