ಟೀಮ್​​ ಇಂಡಿಯಾಗೆ ಶಾಕ್​! ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಆಡ್ತಾರಾ ಬುಮ್ರಾ? | ENG VS IND

Jasprit Bumrah
Published on

ENG VS IND:ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ಭಾರತ ತಂಡ ಸೋತ ನಂತರ, ಜುಲೈ 23 ರಂದು ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಗೆಲ್ಲುವುದು ಅತ್ಯಗತ್ಯ ಎಂದು ಶುಭಮನ್ ಗಿಲ್ ನೇತೃತ್ವದ ತಂಡಕ್ಕೆ ಚೆನ್ನಾಗಿ ತಿಳಿದಿದ್ದು, ಈ ಕುರಿತಂತೆ ತಂಡದಲ್ಲಿ ಆಗಬೇಕಿರುವ ಬದಲಾವಣೆಗಳ ಕುರಿತು ಚರ್ಚೆ ನಡೆದಿದೆ ಎಂದು ಶುಕ್ರವಾರ ವರದಿಯಾಗಿದೆ.

ಭಾರತ ತಂಡ ಪ್ರಸ್ತುತ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯನ್ನು ಗೆಲ್ಲಬೇಕೆಂದರೆ ಉಳಿದಿರುವ ಎರಡು ಪಂದ್ಯಗಳಲ್ಲಿ ಜಯ ಸಾಧಿಸಲೇಬೇಕಿದೆ. ರವೀಂದ್ರ ಜಡೇಜಾ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್‌ರಂತಹ ಮಧ್ಯಮ-ಕೆಳ ಕ್ರಮಾಂಕದ ಆಲ್‌ರೌಂಡರ್‌ಗಳನ್ನು ಹೊಂದಿದ್ದರು ಕೂಡ, ಮೂರನೇ ಟೆಸ್ಟ್‌ನಲ್ಲಿ ಭಾರತವು 193 ರನ್‌ಗಳ ಗುರಿಯನ್ನು ಬೆನ್ನಟ್ಟಲು ವಿಫಲವಾಗಿದ್ದು, ಈ ವಿಷಯವಾಗಿ ಮಾತನಾಡಿರುವ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್, ಮುಂದಿನ ಪಂದ್ಯದಲ್ಲಿ ಕುಲ್‌ದೀಪ್ ಯಾದವ್​ಗೆ ಅವಕಾಶ ನೀಡಬೇಕೆಂದು ಮತ್ತೊಮ್ಮೆ ಸಲಹೆ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಕುಲದೀಪ್ ಯಾದವ್​ ತಂಡದಲ್ಲಿರಲಿ

ಬಿಯಾಂಡ್-23 ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಮೈಕೆಲ್ ಕ್ಲಾರ್ಕ್, ''ಆಡುವ ಹನ್ನೊಂದರ ಬಳಗದಲ್ಲಿ ಕುಲದೀಪ್ ಯಾದವ್ ಅವರನ್ನು ನೋಡಲು ನಾನು ಬಯಸುತ್ತೇನೆ. ಅವರನ್ನು ಸೇರಿಸಿಕೊಳ್ಳಿ. ಆದರೆ, ಅವರನ್ನು ಸೇರಿಸಿಕೊಳ್ಳಲು ನೀವು ಯಾರನ್ನು ತಂಡದಿಂದ ಹೊರಗಿಡುತ್ತೀರಿ ನನಗೆ ಗೊತ್ತಿಲ್ಲ ಎಂದಿದ್ದಾರೆ. ಈ ಸರಣಿಯಲ್ಲಿ ವಾಷಿಂಗ್ಟನ್ ಸುಂದರ್ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ ಮತ್ತು ಅವಶ್ಯಕತೆ ಇದ್ದಾಗ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ನೆರವಾಗಿದ್ದಾರೆ. ಜಡೇಜಾ ಬ್ಯಾಟಿಂಗ್ ವಿಭಾಗಕ್ಕೆ ಉತ್ತಮ ಕೊಡುಗೆ ನೀಡುವ ಮೂಲಕ ಭಾರತದ ಗೆಲುವಿಗೆ ಶ್ರಮಿಸಿದ್ದಾರೆ'' ಎಂದರು.

ನಾಲ್ಕನೇ ಟೆಸ್ಟ್ ಆಡ್ತಾರಾ ಬುಮ್ರಾ..?

ಸರಣಿಯಲ್ಲಿ ಈಗಾಗಲೇ ಭಾರತ ತಂಡ 2-1 ಅಂತರದಲ್ಲಿ ಹಿನ್ನಡೆ ಅನುಭವಿಸುತ್ತಿರುವಾಗ, ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ ಭಾರತಕ್ಕೆ ನಿರ್ಣಾಯಕವಾಗಿದೆ. ಈ ಪಂದ್ಯಕ್ಕೆ ಭಾರತದ ಪ್ರಮುಖ ವೇಗಿ ಜಸ್ಪೀತ್​ ಬುಮ್ರಾ ಲಭ್ಯರಾಗುತ್ತಾರಾ ಎಂಬ ವಿಷಯದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಎಲ್ಲರ ದೃಷ್ಠಿ ಸದ್ಯ ಬುಮ್ರಾ ಮೇಲೆ ನೆಟ್ಟಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ಸಹಾಯಕ ಕೋಚ್ ರಿಯಾನ್ ಟೆನ್ ಡೋಸ್ಚೇಟ್, ಬುಮ್ರಾ ಲಭ್ಯತೆಯ ಕುರಿತು ಅಂತಿಮ ನಿರ್ಧಾರವನ್ನು ಮಾಡಲಾಗುವುದು ಎಂದಿರುವುದಾಗಿ ESPNCricInfo ವರದಿ ಮಾಡಿದೆ.

ಲಾರ್ಡ್ಸ್‌ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಭಾರತ 22 ರನ್‌ಗಳಿಂದ ಸೋಲನುಭವಿಸಿದ್ದು ಸರಣಿ ಸಮಬಲಗೊಳಿಸಲು ಪ್ರವಾಸಿ ಭಾರತ ತಂಡ ಎದುರು ನೋಡುತ್ತಿರುವಾಗ ಬುಮ್ರಾ ಅವರ ಉಪಸ್ಥಿತಿಯು ನಿರ್ಣಾಯಕವಾಗಿದೆ.

ಮಾರ್ಚ್‌ನಲ್ಲಿ ನಡೆದ ಶಸ್ತ್ರಚಿಕಿತ್ಸೆಯ ನಂತರ ಬುಮ್ರಾ ಮೇಲಿನ ಹೊರೆ ತಗ್ಗಿಸಲು, ಐದು ಟೆಸ್ಟ್‌ಗಳಲ್ಲಿ ಮೂರರಲ್ಲಿ ಮಾತ್ರ ಭಾಗವಹಿಸಲು ಬಿಸಿಸಿಐ ವೈದ್ಯಕೀಯ ತಂಡದ ಎಚ್ಚರಿಕೆಯೊಂದಿಗೆ ಬುಮ್ರಾ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿದ್ದಾರೆ. ಪಂದ್ಯಗಳ ನಡುವೆ ವಾರದ ವಿರಾಮದ ಹೊರತಾಗಿಯೂ ಅವರು ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಿಂದ ಹೊರಗುಳಿದರು. ಈ ಕ್ರಮವು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಸೇರಿದಂತೆ ಅನೇಕರಿಂದ ಟೀಕೆಗೆ ಗುರಿಯಾಯಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net