

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವಿನ ಜಗಳದಷ್ಟು ಅವರ ನಡುವಿನ ಬಾಂಧವ್ಯ ಸುದ್ದಿಯಾಗಿಲ್ಲ. ಹೀಗಾಗಿ ಬಿಸಿಸಿಐ ಇಬ್ಬರನ್ನೂ ಕೂರಿಸಿಕೊಂಡು ವಿಶೇಷ ಮಾತುಕತೆಯೊಂದನ್ನು ಆಯೋಜಿಸುವ ಮೂಲಕ ಇಬ್ಬರ ನಡುವಿನ ಬಾಂಧವ್ಯ, ಪರಸ್ಪರರ ಬಗೆಗಿನ ತಿಳುವಳಿಕೆ ಮತ್ತು ಗೌರವವನ್ನು ಕ್ರಿಕೆಟ್ ಪ್ರೇಮಿಗಳ ಎದುರು ತೆರೆದಿಟ್ಟಿದೆ.
ಕೊಹ್ಲಿ-ಗಂಭೀರ್ ಬ್ಯಾಟಿಂಗ್ ಸಮಯದ ದೈವಭಕ್ತಿ ಮತ್ತು ಅದರಿಂದ ಏಕಾಗ್ರತೆಗೆ ಆಗುವ ಲಾಭದ ಬಗ್ಗೆಯೂ ಇದೇ ವೇಳೆ ಚರ್ಚಿಸಿದರು. 2009ರಲ್ಲಿ ನ್ಯೂಜಿಲೆಂಡ್ ವಿರುದ್ಧದ ನೇಪಿಯರ್ ಟೆಸ್ಟ್ನಲ್ಲಿ 436 ಎಸೆತಗಳನ್ನು ಎದುರಿಸಿ 137 ರನ್ ಬಾರಿಸುವ ಮೂಲಕ ಭಾರತವನ್ನು ಸೋಲಿನಿಂದ ಪಾರು ಮಾಡಿದ್ದ ಗಂಭೀರ್, ಆ ವೇಳೆ ಕೊನೇ 2 ದಿನಗಳ ಹೋರಾಟದ ವೇಳೆ ಹನುಮಾನ್ ಚಾಲೀಸ ಪಠಣ ತನಗೆ ನೆರವಾಗಿತ್ತು ಎಂದರು. ಜತೆಗೆ 2014ರಲ್ಲಿ ಕೊಹ್ಲಿ ಆಸ್ಟ್ರೆಲಿಯಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ 4 ಶತಕ ಸಿಡಿಸಿದ ವೇಳೆ ಪ್ರತಿ ಎಸೆತ ಎದುರಿಸುವ ಮುನ್ನ "ಓಂ ನಮಃ ಶಿವಾಯ' ಮಂತ್ರ ಹೇಳುತ್ತಿದ್ದುದನ್ನು ಬಹಿರಂಗಪಡಿಸಿದರು.