ಗೌತಮ್​ ಗಂಭೀರ್​ ಭಾರತದ ಹೆಡ್‌ ಕೋಚ್‌: ಸೌರವ್ ಗಂಗೂಲಿ ಶಾಕಿಂಗ್‌ ಹೇಳಿಕೆ

ganguli
Published on

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಮುಂದಿನ ಕೋಚ್ ಹುದ್ದೆಗೆ ಭರ್ಜರಿ ರೇಸ್ ಆರಂಭವಾಗಿದೆ. ಹಲವಾರು ಮಾಜಿ ಕ್ರಿಕೆಟಿಗರ ಹೆಸರುಗಳು ಮಹತ್ವರ ಹುದ್ದೆಗಾಗಿ ಕೇಳಿಬರುತ್ತಿವೆ. ಈ ಕುರಿತು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಹಾಗೂ ಟೀಮ್‌ ಇಂಡಿಯಾ ಮಾಜಿ ನಾಯಕ ಸೌರವ್‌ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

ಗಂಗೂಲಿ ಕೂಡ ಗೌತಮ್​ ಗಂಭೀರ್​ ಟೀಮ್​ ಇಂಡಿಯಾದ ಕೋಚ್​ ಆದರೆ ಉತ್ತಮ ಎಂದಿದ್ದಾರೆ. ‘ಗಂಭೀರ್​ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ್ದರೆ, ನನ್ನ ಬೆಂಬಲವಿದೆ. ಅವರು ಈ ಹುದ್ದಗೆ ಸೂಕ್ತ ಅಭ್ಯರ್ಥಿ’ ಎಂದು ಹೇಳುವ ಮೂಲಕ ಗಂಭೀರ್​ ಪರ ಬ್ಯಾಟ್​ ಬೀಸಿದ್ದಾರೆ.

ಅವರು (ಗಂಭೀರ್‌) ಉತ್ಸುಕರಾಗಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹೆಡ್‌ ಕೋಚ್‌ ಹುದ್ದೆಗೆ ಅವರು ಸೂಕ್ತ ಅಭ್ಯರ್ಥಿ. ಫ್ರಾಂಚೈಸಿಯ ತಂಡದ ಮಾರ್ಗದರ್ಶಕರಾಗಿರುವುದು ಮತ್ತು ಉನ್ನತ ಮಟ್ಟದ ಅಂತರರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದರ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಗಂಭೀರ್‌ಗೆ ಇದೆಲ್ಲವೂ ಚೆನ್ನಾಗಿ ತಿಳಿದಿರುತ್ತದೆ ಮತ್ತು ವಿರಾಟ್ ಮತ್ತು ರೋಹಿತ್‌ನಂತಹ ಆಟಗಾರರನ್ನು ಹೇಗೆ ನಿಭಾಯಿಸಬೇಕು ಎಂದು ಸಹ ತಿಳಿದಿರುತ್ತದೆ.

ಅವರು ಟೀಂ ಇಂಡಿಯಾದ ಕೋಚ್ ಆದರೆ ತಂಡಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಭಾವನೆಗಳನ್ನು ಮುಂದಕ್ಕೆ ತಳ್ಳುವುದು ಇದಲ್ಲ. ಆದರೆ, ಅವರು ಮಾಡಲಿದ್ದಾರೆಂದು ನನಗೆ ಖಚಿತತೆ ಇದೆ. ಡ್ರೆಸ್ಸಿಂಗ್‌ ಕೊಠಡಿಗೆ ಅವರು ಹೊಂದಿಕೊಳ್ಳಲಿದ್ದಾರೆ," ಎಂದು ಸೌರವ್‌ ಗಂಗೂಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್ ಮುಕ್ತಾಯದೊಂದಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಾರ್ಯಾವಧಿ ಮುಗಿಯಲಿದ್ದು, ಆ ಮೂಲಕ ದ್ರಾವಿಡ್‌ ಅವರ ಸ್ಥಾನವನ್ನು ಗೌತಮ್‌ ಗಂಭೀರ್‌ ಅಲಂಕರಿಸಲಿದ್ದಾರೆಂದು ವರದಿಯಾಗಿದೆ.

ಗಂಭೀರ್​ಗೆ ಕೋಚ್ ಪಟ್ಟ ಗ್ಯಾರಂಟಿ?: ಇದೆಲ್ಲದರ ನಡುವೆ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರೇ ಟೀಂ ಇಂಡಿಯಾದ ಮುಖ್ಯ ತರಬೇತುದಾರರ ಹುದ್ದೆಗೆ ಆಯ್ಕೆಯಾಗಲಿದ್ದಾರೆ ಎಂಬ ವಿಚಾರವನ್ನು ಕೆಲವು ಮಾಧ್ಯಮಗಳು ಹೊರಗೆಡವಿವೆ. ಗೌತಮ್ ಗಂಭೀರ್ ಅವರು, 2024ರ ಐಪಿಎಲ್ ಗೆದ್ದಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದು, ಅವರ ಸೂಕ್ತ ಮಾರ್ಗದರ್ಶನದಲ್ಲಿ ತಂಡ ಕಪ್ ಗೆದ್ದಿರುವುದು ಗಂಭೀರ್ ಅವರ ವರ್ಚಸ್ಸನ್ನು ಹೆಚ್ಚಿಸಿದೆ. ಹಾಗಾಗಿ, ಅವರನ್ನಾಗಲೇ ಬಹುತೇಕ ಕೋಚ್ ಹುದ್ದೆಗೆ ಆಯ್ಕೆ ಮಾಡಲಾಗಿದ್ದು, ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ.

ನೂತನ ಕೋಚ್​ ಆಗಿ ಆಯ್ಕೆಯಾದವರ ಕಾರ್ಯಾವಧಿ 2027ರ ಡಿಸೆಂಬರ್ 31ಕ್ಕೆ ಮುಕ್ತಾಯಗೊಳ್ಳುತ್ತದೆ. 2027ರಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿಯೂ ಈ ಕೋಚ್​ಗೆ ಸಿಗಲಿದೆ. ಆಯ್ಕೆ ಪ್ರಕ್ರಿಯೆ ಅರ್ಜಿಗಳ ಸಂಪೂರ್ಣ ಪರಿಶೀಲನೆಯನ್ನು ನಡೆಸಿ ನಂತರ ವೈಯಕ್ತಿಕ ಸಂದರ್ಶನಗಳು ಮತ್ತು ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳ ಮೌಲ್ಯಮಾಪನ ಒಳಗೊಂಡಿರುತ್ತದೆ. ಆಯ್ಕೆಯಾದ ಹೊಸ ಕೋಚ್‌ ಟಿ20 ವಿಶ್ವಕಪ್‌ ಟೂರ್ನಿಯ ನಂತರ ತಕ್ಷಣವೇ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net