

ಪಟನಾ: ಆಲ್ರೌಂಡ್ ನಿರ್ವಹಣೆ ತೋರುವ ಮೂಲಕ 90ನೇ ಆವೃತ್ತಿಯ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿರುವ ಕರ್ನಾಟಕ ತಂಡ, ರಾಜ್ಯೋತ್ಸವಕ್ಕೆ ಎರಡು ದಿನ ಮುನ್ನವೇ ಕನ್ನಡಿಗರಿಗೆ ಜಯದ ಉಡುಗೊರೆ ನೀಡಿದೆ. ಮಯಾಂಕ್ ಅಗರ್ವಾಲ್ ಬಳಗ ತನ್ನ 3ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಬಿಹಾರ ತಂಡವನ್ನು 8 ವಿಕೆಟ್‌ಗಳಿಂದ ಮಣಿಸಿತು. ಈ ಮೂಲಕ 6 ಅಂಕ ಕಲೆಹಾಕಿ ನಾಕೌಟ್ ಪ್ರವೇಶದ ಆಸೆಯನ್ನು ಜೀವಂತ ಉಳಿಸಿಕೊಂಡಿದೆ.
ಮೊಯಿನ್ ಉಲ್ ಹಕ್ ಸ್ಟೇಡಿಯಂನಲ್ಲಿ ಮಂಗಳವಾರ ಮುಕ್ತಾಯಗೊಂಡ ಕಾದಾಟದಲ್ಲಿ ಕರ್ನಾಟಕ ತಂಡ 3ನೇ ದಿನದಂತ್ಯಕ್ಕೆ ಗಳಿಸಿದ್ದ 7 ವಿಕೆಟ್‌ಗೆ 287 ರನ್‌ಗಳಿಗೆ 4ನೇ ಹಾಗೂ ಅಂತಿಮ ದಿನ ಬೆಳಗ್ಗೆ ಡಿಕ್ಲೇರ್ ಮಾಡಿಕೊಂಡಿತು. ಬಿಹಾರ ತಂಡ ಸಕಿಬುಲ್ ಗನಿ (130 ರನ್, 194 ಎಸೆತ, 15 ಬೌಂಡರಿ, 4 ಸಿಕ್ಸರ್) ಶತಕದ ಬಲದಿಂದ ಇನಿಂಗ್ಸ್ ಸೋಲಿನಿಂದ ಪಾರಾದರೂ, ಸೋಲು ತಪ್ಪಿಸಲಾಗಲಿಲ್ಲ. ಸ್ಪಿನ್ನರ್ ಶ್ರೇಯಸ್ ಗೋಪಾಲ್ (70ಕ್ಕೆ 4), ವೇಗಿ ವೈಶಾಕ್ ವಿಜಯ್‌ಕುಮಾರ್ (44ಕ್ಕೆ 3) ದಾಳಿಗೆ ಬಿಹಾರ ತಂಡ 66.2 ಓವರ್‌ಗಳಲ್ಲಿ 212 ರನ್‌ಗಳಿಗೆ 2ನೇ ಇನಿಂಗ್ಸ್ ಮುಗಿಸಿತು. ಇದರಿಂದ 69 ರನ್ ಗುರಿ ಪಡೆದ ಕರ್ನಾಟಕ ತಂಡ, 10.1 ಓವರ್‌ಗಳಲ್ಲೇ 2 ವಿಕೆಟ್‌ಗೆ 70 ರನ್ ಗಳಿಸಿ ಜಯ ದಾಖಲಿಸಿತು. ಈ ಮೂಲಕ ಕರ್ನಾಟಕ ತಂಡ 3 ಪಂದ್ಯಗಳಲ್ಲಿ ಒಟ್ಟು 8 ಅಂಕ ಕಲೆಹಾಕಿ ಸಿ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ.
ಬಿಹಾರ: 143 ಮತ್ತು 66.2 ಓವರ್‌ಗಳಲ್ಲಿ 212 (ಸೂರ್ಯವಂಶಿ 6, ಬಾಬುಲ್ 44, ಸಕಿಬುಲ್ ಗನಿ 130, ಜಿತಿನ್ 15, ಶ್ರೇಯಸ್ 70ಕ್ಕೆ 4, ವೈಶಾಕ್ 44ಕ್ಕೆ 3, ವಿದ್ಯಾಧರ್ 34ಕ್ಕೆ 1, ಕೌಶಿಕ್ 10ಕ್ಕೆ 1, ಮೊಹ್ಸಿನ್ 46ಕ್ಕೆ 1), ಕರ್ನಾಟಕ: 7 ವಿಕೆಟ್‌ಗೆ 287 ಡಿಕ್ಲೇರ್ ಮತ್ತು 10.1 ಓವರ್‌ಗಳಲ್ಲಿ 2 ವಿಕೆಟ್‌ಗೆ 70 (ನಿಕಿನ್ ಜೋಸ್ 28*, ಮಯಾಂಕ್ 9, ಸ್ಮರಣ್ 15, ಅಭಿನವ್ ಮನೋಹರ್ 17*, ರಾಜ್ 32ಕ್ಕೆ 1, ಹಿಮಾಂಶು 16ಕ್ಕೆ 1).
ಕರ್ನಾಟಕಕ್ಕೆ ಮುಂದಿನ ಪಂದ್ಯ
ಯಾವಾಗ: ನವೆಂಬರ್ 6-9
ಎದುರಾಳಿ: ಬಂಗಾಳ
ಎಲ್ಲಿ: ಚಿನ್ನಸ್ವಾಮಿ ಸ್ಟೇಡಿಯಂ, ಬೆಂಗಳೂರು
ತಪ್ಪಿದ ಪೂರ್ಣ 7 ಅಂಕ
ಇನಿಂಗ್ಸ್ ಗೆಲುವು ಕೈತಪ್ಪಿದ ಬಳಿಕ ಕರ್ನಾಟಕ ತಂಡ ವಿಕೆಟ್ ನಷ್ಟವಿಲ್ಲದೆ ಗೆಲುವು ದಾಖಲಿಸಿದರೂ ಸಂಪೂರ್ಣ 7 ಅಂಕ ಕಲೆಹಾಕುವ ಅವಕಾಶವಿತ್ತು. ಆದರೆ 4 ಓವರ್‌ಗಳಲ್ಲಿ 26 ರನ್ ಗಳಿಸಿದ ಬಳಿಕ 5ನೇ ಓವರ್‌ನ ಮೊದಲ ಎಸೆತದಲ್ಲೇ ಮಯಾಂಕ್ ಅಗರ್ವಾಲ್ (9) ಎಡಗೈ ವೇಗಿ ಅನುಜ್ ರಾಜ್‌ಗೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಪೂರ್ಣ ಅಂಕ ಕೈಜಾರಿದ ಬಳಿಕ ನಿಕಿನ್ ಜೋಸ್ (28*), ಆರ್. ಸ್ಮರಣ್ (15), ಅಭಿನವ್ ಮನೋಹರ್ (17*) ಬಿರುಸಿನ ಆಟವಾಡಿ ಬೇಗನೆ ಗೆಲುವು ತಂದುಕೊಟ್ಟರು.
ರಾಜ್ಯಕ್ಕೆ ಇನಿಂಗ್ಸ್ ಜಯ ತಪ್ಪಿಸಿದ ಸಕಿಬುಲ್ ಶತಕ: ಬೆಳಗ್ಗೆ 2ನೇ ಇನಿಂಗ್ಸ್ ಆರಂಭಿಸಿದ ಬಿಹಾರ 6 ರನ್ ಗಳಿಸುವಷ್ಟರಲ್ಲೇ ಆರಂಭಿಕರಿಬ್ಬರನ್ನು ಕಳೆದುಕೊಂಡಿತು. ಆಗ ಜತೆಯಾದ ಬಾಬುಲ್ ಕುಮಾರ್ (44) ಮತ್ತು ಸಕಿಬುಲ್ ಗನಿ 3ನೇ ವಿಕೆಟ್‌ಗೆ ಸುಮಾರು 38 ಓವರ್‌ಗಳಲ್ಲಿ 130 ರನ್ ಜತೆಯಾಟವಾಡಿ ಕರ್ನಾಟಕದ ಬೌಲರ್‌ಗಳನ್ನು ಸತಾಯಿಸಿದರು. ಈ ಮೂಲಕ ರಾಜ್ಯಕ್ಕೆ ಇನಿಂಗ್ಸ್ ಗೆಲುವನ್ನೂ ತಪ್ಪಿಸಿದರು. ಆದರೆ ಡ್ರಾ ಸಾಧಿಸುವ ಬಿಹಾರ ಆಸೆ ಈಡೇರಲು ಶ್ರೇಯಸ್ ಗೋಪಾಲ್ ಅವಕಾಶ ನೀಡಲಿಲ್ಲ.
ಈ ಜತೆಯಾಟವನ್ನು ಬೇಧಿಸಿದ ಶ್ರೇಯಸ್ ನಂತರ ಬಿಪಿನ್ ಸೌರಭ್ (7), ರಘುವೇಂದ್ರ ಪ್ರತಾಪ್ ಸಿಂಗ್‌ಗೂ (4) ಬೇಗನೆ ಪೆವಿಲಿಯನ್ ದಾರಿ ತೋರಿಸಿದರು. ಬಿಹಾರ ಕೆಳ ಕ್ರಮಾಂಕಕ್ಕೂ ಕರ್ನಾಟಕ ಬೇಗನೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಯಿತು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5ನೇ ಶತಕ ಸಿಡಿಸಿದ ಸಕಿಬುಲ್ ಗನಿ ಔಟಾಗುವುದರೊಂದಿಗೆ ಬಿಹಾರ ಇನಿಂಗ್ಸ್ ಮುಕ್ತಾಯಗೊಂಡಿತು. ಬಿಹಾರದ ಕೊನೇ 5 ವಿಕೆಟ್‌ಗಳು ಕೇವಲ 11 ರನ್ ಅಂತರದಲ್ಲಿ ಉರುಳಿತು.
183.2 ಓವರ್‌ಗಳಲ್ಲೇ ಜಯ: ಮಳೆ, ಒದ್ದೆ ಮೈದಾನದಿಂದಾಗಿ 2ನೇ ದಿನದಾಟ ಒಂದೂ ಎಸೆತ ಕಾಣದೆ ರದ್ದುಗೊಂಡಿದ್ದರೆ, ಮೊದಲ ಮತ್ತು 3ನೇ ದಿನವೂ ಹೆಚ್ಚಿನ ಓವರ್ ನಷ್ಟಗೊಂಡಿತ್ತು. ಇದರ ನಡುವೆಯೂ ಕರ್ನಾಟಕ ಪಂದ್ಯದಲ್ಲಿ ಒಟ್ಟಾರೆ 183.2 ಓವರ್‌ಗಳ ಆಟದಲ್ಲೇ ಗೆಲುವು ಒಲಿಸಿಕೊಂಡಿತು. ಈ ಮೂಲಕ ರಾಜ್ಯ ತಂಡ ಸುಮಾರು ಎರಡು ದಿನಗಳಲ್ಲೇ ಜಯ ದಾಖಲಿಸಿದಂತಾಗಿದೆ. ರಾಜ್ಯ ತಂಡದ ಮೊದಲ 2 ಪಂದ್ಯಗಳಲ್ಲಿ ಮಳೆಯಿಂದಾಗಿ ಮೊದಲ ಇನಿಂಗ್ಸ್ ಕೂಡ ಪೂರ್ಣಗೊಳ್ಳದೆ ತಲಾ 1 ಅಂಕಕ್ಕೆ ತೃಪ್ತಿಪಟ್ಟಿತ್ತು.
ವೈಶಾಕ್ ಬದಲಿಗೆ ಪರಂತಪ್: ದಕ್ಷಿಣ ಆಫ್ರಿಕಾ ಪ್ರವಾಸದ ಟಿ20 ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ವೇಗಿ ವೈಶಾಕ್ ವಿಜಯ್‌ಕುಮಾರ್ ಬದಲಿಗೆ ಯುವ ವೇಗಿ ಯಶೋವರ್ಧನ್ ಪರಂತಪ್‌ರನ್ನು 4ನೇ ಲೀಗ್ ಪಂದ್ಯಕ್ಕಾಗಿ ರಾಜ್ಯ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಕಳೆದ ಆವೃತ್ತಿಯ ಸಿಕೆ ನಾಯ್ಡು ಟ್ರೋಫಿ ಗೆಲುವಿನಲ್ಲಿ ಮಿಂಚಿದ್ದ 20 ವರ್ಷದ ಯಶೋವರ್ಧನ್ ಮೊದಲ ಬಾರಿ ರಾಜ್ಯ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ.