ಯಾವಾಗಲೂ ಸೀರಿಯಸ್​ ಆಗಿರುತ್ತಿದ್ದ ಗಂಭೀರ್​​ ಈ ಪರಿ ನಗಲು ಕಾರಣ ಯಾರು ಗೊತ್ತಾ? ನಿಜಕ್ಕೂ ಅಚ್ಚರಿಪಡ್ತೀರಾ!

Gautam Gambhir
Published on

ನವದೆಹಲಿ: ಶ್ರೀಲಂಕಾ ವಿರುದ್ಧ ನಡೆದ ಮೂರು ಟಿ20 ಪಂದ್ಯದ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಟೀಮ್​ ಇಂಡಿಯಾ ಇದೀಗ ಏಕದಿನ ಸರಣಿಯತ್ತ ಗಮನ ಹರಿಸಿದೆ. ಭಾರತ ಮತ್ತು ಶ್ರೀಲಂಕಾ ನಡುವೆ ಮೂರು ಏಕದಿನ ಪಂದ್ಯಗಳ ಸರಣಿ ಶುಕ್ರವಾರದಿಂದ ಆರಂಭವಾಗಲಿದೆ. ಮೊದಲ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ.

ಈ ಪಂದ್ಯದೊಂದಿಗೆ ಸ್ಟಾರ್ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮ ದೀರ್ಘ ವಿರಾಮದ ಬಳಿಕ ಮತ್ತೆ ತಂಡಕ್ಕೆ ಎಂಟ್ರಿ ಕೊಡಲಿದ್ದಾರೆ. ಟಿ20 ವಿಶ್ವಕಪ್ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಸ್ವರೂಪದಿಂದ ನಿವೃತ್ತರಾಗಿರುವ ಕೊಹ್ಲಿ ಮತ್ತು ರೋಹಿತ್, ಮೆಗಾ ಟೂರ್ನಮೆಂಟ್ ನಂತರ ಮೊದಲ ಬಾರಿಗೆ ಮೈದಾನಕ್ಕೆ ಬರುತ್ತಿದ್ದಾರೆ. ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳು ಈ ಸರಣಿಯತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಅಲ್ಲದೆ, ಗೌತಮ್ ಗಂಭೀರ್ ಅವರ ಮುಖ್ಯ ಕೋಚ್ ಅಡಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಆಡುವ ಮೊದಲ ಸರಣಿ ಇದಾಗಿದೆ.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಜುಗಲ್​ಬಂದಿಯನ್ನು ನೋಡಲು ಎಲ್ಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗಾಗಿ ವಿರಾಟ್ ಕೊಹ್ಲಿ ಸೋಮವಾರ ಲಂಕಾ ತಲುಪಿದ್ದಾರೆ. ಮತ್ತೊಂದೆಡೆ ಕೊನೆಯ ಟಿ20 ಪಂದ್ಯದ ನಂತರ ಗಂಭೀರ್ ಬುಧವಾರ ಏಕದಿನ ತಂಡವನ್ನು ಸೇರಿಕೊಂಡಿದ್ದಾರೆ. ಪಲ್ಲೆಕಲೆಯಿಂದ ಕೊಲಂಬೋ ತಲುಪಿದ ಗಂಭೀರ್, ತಂಡದ ಅಭ್ಯಾಸದಲ್ಲಿ ಪಾಲ್ಗೊಂಡರು. ಗಂಭೀರ್ ಅಲ್ಲಿ ಕೊಹ್ಲಿಯನ್ನು ಭೇಟಿ ಮಾಡಿ ಬಹಳ ಹೊತ್ತು ಮಾತುಕತೆ ನಡೆಸಿದರು.

ಇಬ್ಬರೂ ಬಹಳ ಹೊತ್ತು ಮಾತನಾಡಿದರು. ಈ ವೇಳೆ ಗಂಭೀರ್ ನಗೆಗಡಲಲ್ಲಿ ತೇಲುತ್ತಿರುವ ಚಿತ್ರಗಳು ಹೊರಬಿದ್ದಿವೆ. ಸದಾ ಸೀರಿಯಸ್ ಆಗಿರುವ ಗಂಭೀರ್, ಕೊಹ್ಲಿ ಜತೆ ಮಾತನಾಡುತ್ತಾ ತುಂಬಾ ನಗುತ್ತಿದ್ದರಿಂದ ಕ್ರಿಕೆಟ್ ಅಭಿಮಾನಿಗಳು ಶಾಕ್ ಆಗಿದ್ದಾರೆ. ಟೀಮ್​ ಇಂಡಿಯಾ ಪರ ಆಡುವಾಗ ಎರಡ್ಮೂರು ಬಾರಿ ಈ ಇಬ್ಬರು ಆಟಗಾರರ ನಡುವೆ ಜಗಳ ನಡೆದಿದ್ದು ಗೊತ್ತೇ ಇದೆ. ಐಪಿಎಲ್ 2023ರ ಸೀಸನ್ ಕೂಡ ದೊಡ್ಡ ಹೋರಾಟವನ್ನು ಕಂಡಿತು. ಇದರೊಂದಿಗೆ ಟೀಮ್​ ಇಂಡಿಯಾದಲ್ಲಿ ಹೇಗಿರುತ್ತಾರೋ ಎಂದು ಎಲ್ಲರೂ ಚಿಂತಾಕ್ರಾಂತರಾಗಿರುವಾಗಲೇ ಈ ದೃಶ್ಯದಿಂದ ಕ್ರಿಕೆಟ್ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಕೊಹ್ಲಿ ಮತ್ತು ಗಂಭೀರ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಫೋಟೋ ನೋಡಿ ನಿಮಗೆ ಏನು ಅನಿಸುತ್ತದೆ ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net