ಟೀಮ್​ ಇಂಡಿಯಾ ಕೋಚ್​ ಹುದ್ದೆಗೆ ಗಂಭೀರ್​ ಸಂದರ್ಶನ; ಪೈಪೋಟಿ ನೀಡಲಿದ್ದಾರೆ ರಾಮನ್​!

web coach
Published on

ನವದೆಹಲಿ: ಟೀಮ್​ ಇಂಡಿಯಾದ ನೂತನ ಮುಖ್ಯ ಕೋಚ್​ ಹುದ್ದೆಯ ರೇಸ್​ನಲ್ಲಿರುವ ಪ್ರಮುಖ ಅಭ್ಯರ್ಥಿ ಗೌತಮ್​ ಗಂಭೀರ್​ ಮಂಗಳವಾರ ಸಂದರ್ಶನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಬಿಸಿಸಿಐನ ಕ್ರಿಕೆಟ್​ ಸಲಹಾ ಸಮಿತಿ (ಸಿಎಸಿ) ಗಂಭೀರ್​ರನ್ನು ಝೂಮ್​ ಕಾಲ್​ ಮೂಲಕ ಸಂದರ್ಶನ ನಡೆಸಿದ್ದು, ಶ್ರೀ ನೇಮಕಾತಿ ಪ್ರಕ್ರಿಯೆ ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಅಶೋಕ್​ ಮಲ್ಹೋತ್ರಾ ನೇತೃತ್ವದ ಸಿಎಸಿಯಲ್ಲಿ ಜತಿನ್​ ಪರಾಂಜಪೆ ಮತ್ತು ಸುಕ್ಷಣಾ ನಾಯ್ಕ್​ ಇತರ ಸದಸ್ಯರಾಗಿದ್ದಾರೆ. ಮಂಗಳವಾರ ಗಂಭೀರ್​ ಸಂದರ್ಶನದ ಒಂದು ಸುತ್ತು ಪೂರ್ಣಗೊಂಡಿದೆ. ಎರಡನೇ ಹಂತದ ಸಂದರ್ಶನ ಬುಧವಾರ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಕೆಕೆಆರ್​ ತಂಡದ ಮೆಂಟರ್​ ಆಗಿ ಐಪಿಎಲ್​ ಟ್ರೋಫಿ ಗೆದ್ದುಕೊಟ್ಟಿರುವ ಗಂಭೀರ್​ ಕೋಚ್​ ಹುದ್ದೆಗೆ ನೆಚ್ಚಿನ ಅಭ್ಯರ್ಥಿಯಾಗಿದ್ದು, 48 ಗಂಟೆಗಳ ಅವಧಿಯಲ್ಲಿ ಅವರ ನೇಮಕಾತಿ ಪ್ರಕ್ರಿಯೆಯನ್ನು ಬಿಸಿಸಿಐ ಮುಕ್ತಾಯಗೊಳಿಸಲಿದೆ ಎನ್ನಲಾಗಿದೆ.

ಹೊಸ ಕೋಚ್​ ಅವಧಿಯು 2027ರ ಏಕದಿನ ವಿಶ್ವಕಪ್​ವರೆಗೆ ಇರಲಿದೆ. ಹೀಗಾಗಿ ಮುಂದಿನ 3 ವರ್ಷಗಳ ರೂಪುರೇಷೆಯ ಬಗ್ಗೆ ಗಂಭೀರ್​ ತನ್ನ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಈ ಅವಧಿಯಲ್ಲಿ 3 ಐಸಿಸಿ ಟೂರ್ನಿಗಳು (2025ರ ಚಾಂಪಿಯನ್ಸ್​ ಟ್ರೋಫಿ, 2026ರ ಟಿ20 ವಿಶ್ವಕಪ್​, 2027ರ ಏಕದಿನ ವಿಶ್ವಕಪ್​) ಇರಲಿವೆ.

ಬಿಸಿಸಿಐ ಅಪೆಕ್ಸ್​ ಕೌನ್ಸಿಲ್​ ಸಭೆಯೂ ಮಂಗಳವಾರ ಸಂಜೆ ನಡೆದಿದ್ದು, ಕೋಚ್​ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರ ಮುಗಿಸಲು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ಕೂಡ ಒಲವು ತೋರಿದ್ದಾರೆ ಎನ್ನಲಾಗಿದೆ.

ರಾಷ್ಟ್ರೀಯ ಕ್ರಿಕೆಟ್​ ಆಯ್ಕೆ ಸಮಿತಿಗೆ ಉತ್ತರ ವಲಯದಿಂದ ಓರ್ವ ಆಯ್ಕೆಗಾರನ ಹುದ್ದೆಗೂ ಸಿಎಸಿ ಮಂಗಳವಾರ ಕೆಲ ಅಭ್ಯರ್ಥಿಗಳ ಸಂದರ್ಶನ ನಡೆಸಿದೆ ಎನ್ನಲಾಗಿದೆ.

ಟೀಮ್​ ಇಂಡಿಯಾದ ಹಾಲಿ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಅವಧಿ ಟಿ20 ವಿಶ್ವಕಪ್​ ಟೂರ್ನಿಯೊಂದಿಗೆ ಮುಗಿಯಲಿದೆ. ನಂತರದಲ್ಲಿ ಜುಲೈ 6ರಿಂದ ಜಿಂಬಾಬ್ವೆ ಪ್ರವಾಸದ ಟಿ20 ಸರಣಿಯೊಂದಿಗೆ ಭಾರತ ತಂಡದ ಮುಂದಿನ ಸವಾಲು ಶುರುವಾಗಲಿದೆ.

ರೇಸ್​ನಲ್ಲಿದ್ದಾರೆ ರಾಮನ್​?

ಭಾರತ ತಂಡದ ಮುಖ್ಯ ಕೋಚ್​ ಹುದ್ದೆಗೆ ಗಂಭೀರ್​ ಏಕೈಕ ಅಭ್ಯರ್ಥಿ ಎಂದು ಮೊದಲಿಗೆ ವರದಿಯಾಗಿತ್ತು. ಆದರೆ, ಮಂಗಳವಾರ ಸಂದರ್ಶನ ಎದುರಿಸಿದವರಲ್ಲಿ ಗಂಭೀರ್​ ಒಬ್ಬರೇ ಅಲ್ಲ, ಭಾರತ ಮಹಿಳಾ ತಂಡದ ಮಾಜಿ ಕೋಚ್​ ಡಬ್ಲ್ಯುವಿ ರಾಮನ್​ ಕೂಡ ಸಂದರ್ಶನ ಎದುರಿಸಿದ್ದಾರೆ ಎನ್ನಲಾಗಿದೆ. ಬುಧವಾರ ವಿದೇಶಿ ಅಭ್ಯರ್ಥಿಯೊಬ್ಬರ ಸಂದರ್ಶನ ಪ್ರಕ್ರಿಯೆಯೂ ನಡೆಯಲಿದೆ ಎನ್ನಲಾಗಿದೆ.

ಪ್ರತ್ಯೇಕ ತಂಡಗಳಿಗೆ ಬೇಡಿಕೆ ಇಟ್ಟ ಗಂಭೀರ್​!

ಗೌತಮ್​ ಗಂಭೀರ್​ ಭಾರತ ತಂಡದ ಕೋಚ್​ ಹುದ್ದೆಯನ್ನು ಒಪ್ಪಿಕೊಳ್ಳಲು ಕೆಲ ಪ್ರಮುಖ ಬೇಡಿಕೆಗಳನ್ನು ಬಿಸಿಸಿಐ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಈ ಪೈಕಿ ಟೆಸ್ಟ್​ ಮತ್ತು ಸೀಮಿತ ಓವರ್​ (ಏಕದಿನ/ಟಿ20) ಕ್ರಿಕೆಟ್​ಗೆ ಪ್ರತ್ಯೇಕವಾದ ರಾಷ್ಟ್ರೀಯ ತಂಡವನ್ನು ರಚಿಸಿವುದು ಪ್ರಮುಖ ಬೇಡಿಕೆ ಎನಿಸಿದೆ. ಇದಕ್ಕೆ ಬಿಸಿಸಿಐ ಈಗಾಗಲೆ ಸಮ್ಮತಿಸಿದೆ ಎಂದೂ ಹೇಳಲಾಗುತ್ತಿದೆ. ಗಂಭೀರ್​ ತನ್ನದೇ ಆದ ಇತರ ತರಬೇತಿ ಸಿಬ್ಬಂದಿ ಬಳಗದ ಆಯ್ಕೆಗೂ ಬೇಡಿಕೆ ಇಟ್ಟಿದ್ದು, ಅದಕ್ಕೂ ಬಿಸಿಸಿಐ ಈಗಾಗಲೆ ಸಮ್ಮತಿ ಸೂಚಿಸಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net