

ನವದೆಹಲಿ: ಒಂದೊಮ್ಮೆ ಟೀಮ್ ಇಂಡಿಯಾ, ದೆಹಲಿ ತಂಡದಲ್ಲಿ ಸಹ-ಆಟಗಾರರಾಗಿದ್ದ ಗೌತಮ್ ಗಂಭೀರ್-ವಿರಾಟ್ ಕೊಹ್ಲಿ ಬಳಿಕ ಐಪಿಎಲ್ನಲ್ಲಿ ಎದುರಾಳಿಗಳಾಗಿ ಜಟಾಪಟಿ ನಡೆಸಿದ್ದರು. ಇದೀಗ ಕೋಚ್-ಆಟಗಾರರಾಗಿ ಇವರಿಬ್ಬರು ಮತ್ತೆ ಒಂದಾಗಿದ್ದಾರೆ. ಈ ಸಂದರ್ಭದಲ್ಲಿ ಬಿಸಿಸಿಐ ಇಬ್ಬರನ್ನೂ ಕೂರಿಸಿಕೊಂಡು ವಿಶೇಷ ಮಾತುಕತೆಗೆ ವೇದಿಕೆ ಕಲ್ಪಿಸಿದೆ. ಕೊಹ್ಲಿ ನಡೆಸಿಕೊಟ್ಟ ಗಂಭೀರ್ರ ವಿಶಿಷ್ಟ ಸಂದರ್ಶನದ ವೇಳೆ ಇಬ್ಬರೂ ಪರಸ್ಪರರ ಮೇಲಿನ ಗೌರವ, ಟೆಸ್ಟ್ ಕ್ರಿಕೆಟ್ ಮೇಲಿನ ಪ್ರೀತಿ, ಆಧ್ಯಾತ್ಮಿಕತೆ, ಭಾರತೀಯ ಕ್ರಿಕೆಟ್ನ ಶಕ್ತಿ-ಭವಿಷ್ಯದ ಯೋಜನೆ, ತಮ್ಮ ನಡುವಿನ ಸಾಮ್ಯತೆ ಮತ್ತು ಆಕ್ರಮಣಕಾರಿ ಮನೋಭಾವದಿಂದ ತಮಗೆ ಆಗುವ ಲಾಭದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
"ಎಲ್ಲ ಮಸಾಲೆಗಳಿಗೆ ಕೊನೆ ಹಾಕುತ್ತಿದ್ದೇವೆ' ಎಂದು ಕೊಹ್ಲಿ ಮಾತು ಆರಂಭಿಸಿದರೆ, "ನಮ್ಮ ಮಾತುಕತೆಗೆ ಇದುವೇ ಉತ್ತಮ ಆರಂಭ' ಎಂದು ಗಂಭೀರ್ ಧ್ವನಿಗೂಡಿಸಿದರು. ಈ ಮೂಲಕ ಹಿಂದಿನ ಜಗಳಗಳನ್ನೆಲ್ಲ ಮರೆತು ಭಾರತೀಯ ಕ್ರಿಕೆಟ್ನ ಒಳಿತಿಗಾಗಿ ಮತ್ತೆ ಶ್ರಮಿಸುವುದೇ ತಮ್ಮ ಆದ್ಯತೆ ಎಂಬ ಸಂದೇಶ ರವಾನಿಸಿದರು.
2011ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಲಂಕಾ ವಿರುದ್ಧ ಆರಂಭಿಕ ಆಘಾತ ಎದುರಿಸಿದಾಗ ಗಂಭೀರ್&ಕೊಹ್ಲಿ 83 ರನ್ಗಳ ಉಪಯುಕ್ತ ಜತೆಯಾಟದೊಂದಿಗೆ ಚೇತರಿಕೆ ಒದಗಿಸಿ ಭಾರತದ ಗೆಲುವಿನ ಹಾದಿ ಭದ್ರಪಡಿಸಿದ್ದರು. ಆಗಿನಿಂದ ಇಬ್ಬರೂ ಸುದೀರ್ ಹಾದಿ ಸಾಗಿ ಬಂದಿದ್ದೇವೆ. ಒಂದೇ ಡ್ರೆಸ್ಸಿಂಗ್ ರೂಮ್ನಲ್ಲಿದ್ದು ಏಳು&ಬೀಳುಗಳನ್ನು ಕಂಡಿದ್ದೇವೆ ಎಂದು ಕೊಹ್ಲಿ ಹೇಳಿದರೆ, "ನಮ್ಮ ನಡುವೆ ನಡೆದಿದ್ದೆಲ್ಲ ಉತ್ತಮ ಉತ್ಸಾಹದಿಂದಲೇ ಆಗಿದ್ದು ಎಂದು ಸೇರಿಸಿದರು.
ಕೊಹ್ಲಿ 2012ರ ಏಷ್ಯಾಕಪ್ನಲ್ಲಿ ಪಾಕಿಸ್ತಾನ ವಿರುದ್ಧ 183 ರನ್ ಸಿಡಿಸಿದ್ದು, ಚೇಸಿಂಗ್ ವೇಳೆ ನಾನು ನೋಡಿದ ಶ್ರೇಷ್ಠ ಇನಿಂಗ್ಸ್ ಶ್ಲಾಘಿಸಿದ ಗಂಭೀರ್, ಟೆಸ್ಟ್ ಕ್ರಿಕೆಟ್ ನನ್ನ ಪಾಲಿಗೆ ಅತ್ಯುನ್ನತವಾದುದು. ನಾನು ಏಕದಿನಕ್ಕೆ ಮುನ್ನ ಟೆಸ್ಟ್ ಆಡಿದೆ. ಟೆಸ್ಟ್ ಪದಾರ್ಪಣೆಯೇ ನನ್ನ ಪಾಲಿಗೆ ಇದುವರೆಗಿನ ಶ್ರೇಷ್ಠ ಕ್ಷಣ ಎಂದರು. ಜತೆಗೆ ಕೊಹ್ಲಿ ನಾಯಕತ್ವದ ಅವಧಿಯಲ್ಲಿ ಭಾರತ ಟೆಸ್ಟ್ ಕ್ರಿಕೆಟ್ನಲ್ಲಿ ಬಲಿಷ್ಠ ಬೌಲಿಂಗ್ ವಿಭಾಗವನ್ನು ರೂಪಿಸಿತ್ತು. 26ನೇ ವಯಸ್ಸಿನಲ್ಲೇ ಟೆಸ್ಟ್ ತಂಡದ ಭಾರ ಹೊರುವುದು ಕೊಹ್ಲಿಗೆ ಸುಲಭ ಸವಾಲು ಆಗಿರಲಿಲ್ಲ ಎಂದರು.
ಎದುರಾಳಿ ಬೌಲರ್ಗಳ ಜತೆಗಿನ ಜಟಾಪಟಿಯ ಬಗ್ಗೆ ಕೊಹ್ಲಿ ಪ್ರಶ್ನಿಸಿದಾಗ ಗಂಭೀರ್, "ನೀನೂ ನನಗಿಂತ ಹೆಚ್ಚು ವಾಗ್ವಾದಗಳನ್ನು ನಡೆಸಿರುವೆ. ನನಗಿಂತ ನೀನೇ ಉತ್ತಮ ಉತ್ತರ ನೀಡಬಹುದು' ಎಂದು ನಕ್ಕರು. ಬಳಿಕ, ಅದು ನನ್ನ ವ್ಯಕ್ತಿತ್ವ. ನೀನೂ ಅಂಥದ್ದೇ ವ್ಯಕ್ತಿತ್ವ ಹೊಂದಿರುವೆ ಎಂದುತ್ತರಿಸಿದರು.