ಪಿಚ್ ಕ್ಯುರೇಟರ್ ಜಿ.ಕಸ್ತೂರಿರಂಗನ್ ನಿಧನ

Kasthuri Rangan
Published on

ಬೆಂಗಳೂರು: ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಪಿಚ್ ಕ್ಯುರೇಟರ್ ಗೋಪಾಲ ಸ್ವಾಮಿ ಕಸ್ತೂರಿರಂಗನ್ ಬುಧವಾರ ಚಾಮರಾಜಪೇಟೆ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರಿಗೆ 89 ವರ್ಷ ವಯಸ್ಸಾಗಿತ್ತು. ಮೃತರ ನಿಧನಕ್ಕೆ ಕರ್ನಾಟಕ ಕ್ರಿಕೆಟ್ ವಲಯ ಕಂಬನಿ ಮಿಡಿದಿದೆ. ರಣಜಿ ಟ್ರೋಫಿ ಟೂರ್ನಿಯಲ್ಲಿ ಮೈಸೂರು ತಂಡ ಪ್ರತಿನಿಧಿಸಿದ್ದ ಕಸ್ತೂರಿರಂಗನ್, ಕ್ರಿಕೆಟ್​ನಿಂದ ನಿವೃತ್ತಿ ಘೋಷಿಸಿದ ಬಳಿಕ ಪಿಚ್ ಕ್ಯುರೇಟರ್ ಆಗಿದ್ದರು. ಜತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಕೆಎಸ್​ಸಿಎ ಪಾಲಿಗೆ ಪೋಷಕರಂತೆ ಇದ್ದರು. ಅವರ ನಿಧನದಿಂದ ಕೆಎಸ್​ಸಿಎಗೆ ತುಂಬಲಾರದ ನಷ್ಟವುಂಟಾಗಿದೆ ಎಂದು ಕೆಎಸ್​ಸಿಎ ಖಜಾಂಚಿ ಹಾಗೂ ವಕ್ತಾರ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ. ಮಧ್ಯಮ ವೇಗಿಯಾಗಿದ್ದ ಕಸ್ತೂರಿರಂಗನ್, 1948-1963ರವರೆಗೆ ಮೈಸೂರು ರಾಜ್ಯ ತಂಡವನ್ನು ದೇಶೀಯ ಕ್ರಿಕೆಟ್​ನಲ್ಲಿ ಪ್ರತಿನಿಧಿಸಿದ್ದರು. 36 ಪ್ರಥಮ ದರ್ಜೆ ಪಂದ್ಯಗಳಿಂದ 94 ವಿಕೆಟ್ ಕಬಳಿಸಿದ್ದರು. ಮೃತರು ಪತ್ನಿ, ಕೆಎಸ್​ಸಿಎ ಪಿಚ್ ಕ್ಯುರೇಟರ್ ಶ್ರೀರಾಮ್ ಸೇರಿದಂತೆ ಇಬ್ಬರು ಗಂಡು ಮಕ್ಕಳು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮಾಜಿ ಕ್ರಿಕೆಟಿಗರ ಸಂತಾಪ

ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ, ಮಾಜಿ ವೇಗಿ ದೊಡ್ಡ ಗಣೇಶ್ ಸೇರಿದಂತೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಕಸ್ತೂರಿರಂಗನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಕಸ್ತೂರಿರಂಗನ್ ನಿಧನದ ಸುದ್ದಿ ಕೇಳಿ ಆಘಾತವಾಯಿತು. ಕ್ರಿಕೆಟ್​ಗೆ ಅವರ ಕೊಡುಗೆ ಅಪಾರ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಕೆಎಸ್​ಸಿಎ ಮಾಜಿ ಅಧ್ಯಕ್ಷರೂ ಆದ ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ. ಮೃತರ ನಿಧನಕ್ಕೆ ಕೆಎಸ್​ಸಿಎ ಸಂತಾಪ ವ್ಯಕ್ತಪಡಿಸಿದೆ.

ಸ್ನೇಹಿತನಿಗಾಗಿ ರಾಷ್ಟ್ರೀಯ ತಂಡಕ್ಕೆ ಹೋಗಲಿಲ್ಲ..!

ಉತ್ತಮ ನಿರ್ವಹಣೆ ತೋರಿದರೂ ತಮ್ಮ ಬಾಲ್ಯ ಸ್ನೇಹಿತ ಎಲ್.ಟಿ. ಆದಿಶೇಷ ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ 1952-53ನೇ ಅವಧಿಯಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆಯಾದರೂ ಕಸ್ತೂರಿ ರಂಗನ್ ಭಾರತ ತಂಡದಿಂದ ದೂರ ಉಳಿದರು. ಅದೇ ವರ್ಷ ಆದಿಶೇಷ ಅವರಿಗೂ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಲಭಿಸಿತ್ತು. ಆದರೆ, ಆ ತಂಡದಲ್ಲಿ ಕಸ್ತೂರಿರಂಗನ್ ಅವರಿಗೆ ಸ್ಥಾನ ಲಭಿಸಿರಲಿಲ್ಲ. ಇದರಿಂದಾಗಿ ಆದಿಶೇಷ ಕೂಡ ರಾಷ್ಟ್ರೀಯ ತಂಡದಿಂದ ಹೊರಗುಳಿದರು ಎಂದು ಕಸ್ತೂರಿರಂಗನ್ ಪುತ್ರ ಕೆ.ಶ್ರೀರಾಮ್ ‘ವಿಜಯವಾಣಿ’ ಜತೆ ಸ್ಮರಿಸಿಕೊಂಡರು.

ಕಸ್ತೂರಿರಂಗನ್ ಸಾವಿನ ಸುದ್ದಿ ಕೇಳಿ ಶಾಕ್ ಆಯಿತು. ಅವರಿಗೆ 1952-53ರಲ್ಲಿ ಭಾರತ ತಂಡದೊಂದಿಗೆ ವಿಂಡೀಸ್ ಪ್ರವಾಸಕ್ಕೆ ಹೋಗುವ ಅವಕಾಶ ವಿದ್ದರೂ ಹೊರಗುಳಿದಿದ್ದರು. ಬಳಿಕ ರಾಷ್ಟ್ರೀಯ ತಂಡಕ್ಕೆ ಆಡುವ ಅವಕಾಶ ಲಭಿಸಲಿಲ್ಲ. | ದೊಡ್ಡ ಗಣೇಶ್ ಮಾಜಿ ವೇಗದ ಬೌಲರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net