

ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್ ನಿರ್ವಹಣೆ ತೋರಿದ ಬಳಿಕ ಟಿ20 ಸರಣಿ ಗೆಲುವಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಹಾರ್ದಿಕ್ ಪಾಂಡ್ಯ ಇದೀಗ ತವರಿಗೆ ಮರಳಿದ್ದಾರೆ. 4 ತಿಂಗಳ ಬಳಿಕ ಪುತ್ರ ಅಗಸ್ತ್ಯನನ್ನು ಕೂಡಿಕೊಂಡಿರುವ ಹಾರ್ದಿಕ್ ಪಾಂಡ್ಯ ಅವರು ಈಗ ಮಗುವಿನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ತಂದೆಯಾದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಪರ ಐಪಿಎಲ್ನಲ್ಲಿ ಆಡುವ ಸಲುವಾಗಿ ಯುಎಇಗೆ ತೆರಳಿದ್ದರು. ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟವೇರಿದ ಬಳಿಕ ಅಲ್ಲಿಂದಲೇ ಭಾರತ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದ್ದರು. ಇದೀಗ ಆಸ್ಟ್ರೇಲಿಯಾದಲ್ಲಿ ಏಕದಿನ, ಟಿ20 ಸರಣಿಯಲ್ಲಿ ಆಡಿ ತವರಿಗೆ ಮರಳಿರುವ ಅವರು, ತಂದೆಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬಾಟಲಿ ಮೂಲಕ ಮಗುವಿಗೆ ಹಾಲುಣಿಸುತ್ತಿರುವ ಚಿತ್ರವನ್ನು ಶನಿವಾರ ಟ್ವಿಟರ್ನಲ್ಲಿ ಪ್ರಕಟಿಸಿರುವ ಹಾರ್ದಿಕ್ ಪಾಂಡ್ಯ, ‘ರಾಷ್ಟ್ರೀಯ ತಂಡದ ಕರ್ತವ್ಯದಿಂದ ತಂದೆಯ ಕರ್ತವ್ಯ ನಿರ್ವಹಿಸಲು ಬಂದಿರುವೆ’ ಎಂದು ಬರೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಕಳೆದ ಜುಲೈ 30ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಸ್ಟ್ರೇಲಿಯಾ ಪ್ರವಾಸದ ಅಂತ್ಯದಲ್ಲಿ ಹಾರ್ದಿಕ್ ಪಾಂಡ್ಯ, ‘ಕಳೆದ 4 ತಿಂಗಳಿನಿಂದ ನಾನು ನನ್ನ ಮಗುವನ್ನು ನೋಡಿಲ್ಲ. ಹೀಗಾಗಿ ಇನ್ನು ಕುಟುಂಬದೊಂದಿಗೆ ಕೆಲ ಸಮಯವನ್ನು ಕಳೆಯಲು ಬಯಸಿರುವೆ’ ಎಂದು ಹೇಳಿಕೊಂಡಿದ್ದರು.