

ಪ್ಯಾರಿಸ್: ಸ್ಲೊವೇನಿಯಾದ ಆಟಗಾರ್ತಿ ಟಮರ ಜಿದಾನ್‌ಸೆಕ್ ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್‌ಗೇರುವ ಮೂಲಕ ಹೊಸ ಇತಿಹಾಸ ರಚಿಸಿದ್ದಾರೆ. ರಷ್ಯಾದ ಅನುಭವಿ ಆಟಗಾರ್ತಿ ಅನಸ್ತೆಸಿಯಾ ಪಾವ್ಲಚೆಂಕೋವಾ ಕೂಡ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ ಉಪಾಂತ್ಯಕ್ಕೇರಿದ ಸಾಧನೆ ಮಾಡಿದ್ದಾರೆ. ವಿಶ್ವ ನಂ. 85 ಜಿದಾನ್‌ಸೆಕ್ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್‌ನ ಪೌಲಾ ಬಡೊಸಾ ವಿರುದ್ಧ 7-5, 4-6, 8-6 ಸೆಟ್‌ಗಳಿಂದ ಹೋರಾಟಯುತ ಗೆಲುವು ದಾಖಲಿಸಿದರು. ಈ ಮೂಲಕ ಗ್ರಾಂಡ್ ಸ್ಲಾಂನಲ್ಲಿ ಉಪಾಂತ್ಯಕ್ಕೇರಿದ ಮೊದಲ ಸ್ಲೊವೇನಿಯಾ ಆಟಗಾರ್ತಿ ಎನಿಸಿದರು. 23 ವರ್ಷದ ಜಿದಾನ್‌ಸೆಕ್ ಹಿಂದೆಂದೂ ಗ್ರಾಂಡ್ ಸ್ಲಾಂನಲ್ಲಿ 2ನೇ ಸುತ್ತಿಗಿಂತ ಮೇಲೇರಿರಲಿಲ್ಲ. 33ನೇ ಶ್ರೇಯಾಂಕಿತೆ ಬಡೊಸಾ ಹಾಲಿ ಕ್ಲೇಕೋರ್ಟ್ ಋತುವಿನಲ್ಲಿ ಅತ್ಯಧಿಕ ಪಂದ್ಯ (17) ಗೆದ್ದ ದಾಖಲೆ ಹೊಂದಿದ್ದರೂ, ಜಿದಾನ್‌ಸೆಕ್ ಪ್ರಬಲ ಹೋರಾಟದ ಎದುರು ಶರಣಾದರು.
31ನೇ ಶ್ರೇಯಾಂಕಿತೆ ಪಾವ್ಲಚೆಂಕೋವಾ ಎಂಟರ ಘಟ್ಟದಲ್ಲಿ 21ನೇ ಶ್ರೇಯಾಂಕಿತೆ ಕಜಾಕಿಸ್ತಾನದ ಎಲಿನಾ ರೈಬಕಿನಾ ವಿರುದ್ಧ 6-7, 6-2, 9-7ರಿಂದ ಗೆಲುವು ದಾಖಲಿಸಿದರು. ಈ ಹಿಂದೆ 6 ಬಾರಿ ಗ್ರಾಂಡ್ ಸ್ಲಾಂ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲೇ ಎಡವಿದ್ದ 29 ವರ್ಷದ ಪಾವ್ಲಚೆಂಕೋವಾ, ಮೊದಲ ಬಾರಿಗೆ ಈ ತಡೆ ದಾಟುವಲ್ಲಿ ಸಲರಾದರು. ಅಲ್ಲದೆ 2011ರ ಬಳಿಕ ಇದೇ ಮೊದಲ ಬಾರಿಗೆ ಅವರು ರೋಲ್ಯಾಂಡ್ ಗ್ಯಾರಸ್‌ನಲ್ಲಿ 4ನೇ ಸುತ್ತಿಗಿಂತ ಮೇಲೇರಿದ್ದರು.
ಕ್ವಾರ್ಟರ್ ಫೈನಲ್‌ಗೇರಿದ ಹಾಲಿ ಚಾಂಪಿಯನ್
ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಗೇರಿದ್ದಾರೆ. ಪೋಲೆಂಡ್ ತಾರೆ ಇಗಾ ಸ್ವಿಯಾಟೆಕ್ ಸೋಮವಾರ ರಾತ್ರಿ ನಡೆದ 4ನೇ ಸುತ್ತಿನ ಕಾದಾಟದಲ್ಲಿ ಉಕ್ರೇನ್‌ನ ಮಾರ್ಟಾ ಕೊಸ್ಟಿಯುಕ್ ವಿರುದ್ಧ 6-3, 6-4 ನೇರಸೆಟ್‌ಗಳಿಂದ ಜಯಿಸಿದರು. ಈ ಮೂಲಕ 8ನೇ ಶ್ರೇಯಾಂಕಿತೆ ಸ್ವಿಯಾಟೆಕ್ ರೊಲ್ಯಾಂಡ್ ಗ್ಯಾರೊಸ್‌ನಲ್ಲಿ ಸತತ 22 ಸೆಟ್ ಜಯಿಸಿದ ಸಾಧನೆ ಮಾಡಿದರು. ಕ್ವಾರ್ಟರ್ ಫೈನಲ್‌ನಲ್ಲಿ ಅವರು ಗ್ರೀಕ್ ತಾರೆ ಮರಿಯಾ ಸಕ್ಕರಿ ವಿರುದ್ಧ ಸೆಣಸಲಿದ್ದಾರೆ. 2007ರ ಬಳಿಕ (ಜಸ್ಟಿನ್ ಹೆನಿನ್) ಫ್ರೆಂಚ್ ಓಪನ್‌ನಲ್ಲಿ ಸತತ 2 ಬಾರಿ ಪ್ರಶಸ್ತಿ ಜಯಿಸಿದ ಮೊದಲ ಆಟಗಾರ್ತಿ ಎನಿಸುವ ಅವಕಾಶ ಈಗ ಸ್ವಿಯಾಟೆಕ್ ಮುಂದಿದೆ.
* ಉಪಾಂತ್ಯಕ್ಕೆ ಅಲೆಕ್ಸಾಂಡರ್ ಜ್ವೆರೇವ್
ಪುರುಷರ ಸಿಂಗಲ್ಸ್ ವಿಭಾಗದ ಎಂಟರಘಟ್ಟದ ಪಂದ್ಯದಲ್ಲಿ 6ನೇ ಶ್ರೇಯಾಂಕಿತ ಆಟಗಾರ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ 6-4, 6-1, 6-1 ನೇರ ಸೆಟ್‌ಗಳಿಂದ ಸ್ಪೇನ್‌ನ ಅಲೆಜಾಂಡ್ರೊ ಡೇವಿಡೊವಿಚ್ ಅವರನ್ನು ಸುಲಭವಾಗಿ ಸೋಲಿಸಿದರು. 24 ವರ್ಷದ ಜ್ವೆರೇವ್ ಬಲಿಷ್ಠ ನಿರ್ವಹಣೆ ಎದುರು ಸ್ಪೇನ್ ಆಟಗಾರ ಕನಿಷ್ಠ ಪ್ರತಿರೋಧ ತೋರಲು ವಿಲರಾದರು.