

ಲೌಸನ್ನೆ: ತನ್ನ ಅಮೆರಿಕನ್ ಬಾಯ್ಫ್ರೆಂಡ್ಗೆ 9 ದಿನಗಳ ಕಾಲ ನಿರಂತರ ಕಿಸ್ ನೀಡಿದ ಪರಿಣಾಮ ಫ್ರಾನ್ಸ್ನ ಒಲಿಂಪಿಯನ್ ಕತ್ತಿವರಸೆ ಪಟು ಯಸೋರಾ ಥಿಬಸ್ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದರು. ಆದರೆ ಇದೀಗ, ತಾನು ಡೋಪಿಂಗ್ನಲ್ಲಿ ಹೇಗೆ ಸಿಕ್ಕಿಬಿದ್ದೆ ಎಂದು ಅವರು ನೀಡಿರುವ ಈ ವಿವರಣೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಒಪ್ಪಿಕೊಂಡಿದ್ದು, ಅವರನ್ನು ದೋಷಮುಕ್ತಗೊಳಿಸಿ ಶಿಕ್ಷೆಯಿಂದಲೂ ಪಾರು ಮಾಡಿದೆ. ಈ ಪ್ರಕರಣದಲ್ಲಿ ವಾಡಾ, ಥಿಬಸ್ಗೆ 4 ವರ್ಷ ನಿಷೇಧ ಶಿಕ್ಷೆಯನ್ನೂ ನೀಡಿತ್ತು.
ಆದರೆ, ನಿಷೇಧಿತ ಉದ್ದೀಪನವನ್ನು ಬಳಸುತ್ತಿದ್ದ ಬಾಯ್ಫ್ರೆಂಡ್ಗೆ ಕಿಸ್ ನೀಡಿದ್ದರಿಂದ ಥಿಬಸ್ ದೇಹಕ್ಕೂ ಗೊತ್ತಿಲ್ಲದೆ ಅದು ಬಂದಿರುವುದರಿಂದ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲು ಸಿಎಎಸ್ ನಿರಾಕರಿಸಿದೆ. ಅಲ್ಲದೆ 2009ರಲ್ಲಿ ಟೆನಿಸ್ ಆಟಗಾರ ರಿಚರ್ಡ್ ಗಾಸ್ಕೆಟ್ ಕೂಡ ಕೊಕೇನ್ ಸೇವಿಸಿದ ಗೆಳತಿಗೆ ಕಿಸ್ ನೀಡಿ ಡೋಪಿಂಗ್ನಲ್ಲಿ ಸಿಕ್ಕಿಬಿದ್ದಾಗ ಶಿಕ್ಷೆಯಿಂದ ಪಾರಾದ ದೃಷ್ಟಾಂತವನ್ನು ಪರಿಗಣಿಸಲಾಗಿದೆ. ಥಿಬಸ್ 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ರಜತ ಗೆದ್ದಿದ್ದರೆ, 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 5ನೇ ಸ್ಥಾನ ಪಡೆದಿದ್ದರು.