

ನವದೆಹಲಿ: ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ನಲ್ಲಿ ತ್ರಿವಳಿ ಸ್ಪಿನ್ ಅಸ್ತ್ರ ಬಳಸಿ ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು ಮೂರೇ ದಿನಗಳಲ್ಲಿ ಮಣಿಸಿದ್ದ ಭಾರತ ತಂಡ, ಶುಕ್ರವಾರದಿಂದ ದೆಹಲಿಯಲ್ಲಿ ನಡೆಯಲಿರುವ ಎರಡನೇ ಟೆಸ್ಟ್ಗೆ ಹೊಸ ಯೋಜನೆಯೊಂದನ್ನು ರೂಪಿಸಿದೆ. ಆಸ್ಟ್ರೇಲಿಯಾದ ಬ್ಯಾಟರ್ಗಳನ್ನು ಕಂಗೆಡಿಸಲು ದೆಹಲಿಯಲ್ಲಿ ನಾಲ್ಕನೇ ಸ್ಪಿನ್ನರ್ ಆಗಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನೂ ಕಣಕ್ಕಿಳಿಸುವ ಬಗ್ಗೆ ಭಾರತ ತಂಡದ ನಾಯಕ ರೋಹಿತ್ ಶರ್ಮ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಚಿಂತನೆ ನಡೆಸಿದ್ದಾರೆ. ಆದರೆ ದೆಹಲಿ ಪಿಚ್ ಪರಿಶೀಲಿಸಿದ ಬಳಿಕವೇ ಅಂತಿಮ ನಿರ್ಧಾರ ಹೊರಬೀಳಲಿದೆ.
ನಾಗ್ಪುರ ಟೆಸ್ಟ್ನ 3 ಇನಿಂಗ್ಸ್ಗಳಲ್ಲಿ ಉರುಳಿದ ಒಟ್ಟು 30 ವಿಕೆಟ್ಗಳಲ್ಲಿ ಉಭಯ ತಂಡಗಳಿಂದ ಸ್ಪಿನ್ನರ್ಗಳೇ 24 ವಿಕೆಟ್ ಬಾಚಿಕೊಂಡಿದ್ದರು. ಈ ಪೈಕಿ ಭಾರತದ ರವೀಂದ್ರ ಜಡೇಜಾ, ಆರ್. ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಕ್ರಮವಾಗಿ 7, 8, 1 ವಿಕೆಟ್ ಕಬಳಿಸಿದ್ದರು. ಫಿರೋಜ್ ಷಾ ಕೋಟ್ಲಾ ಮೈದಾನವೂ ಸ್ಪಿನ್ ಸ್ನೇಹಿ ಇತಿಹಾಸ ಹೊಂದಿದೆ. ನಾಗ್ಪುರದಂತೆ ಇಲ್ಲೂ ಲೋ-ಬೌನ್ಸ್ ಸವಾಲೊಡ್ಡಲಿದೆ. ಮೊದಲ ಇನಿಂಗ್ಸ್ನಲ್ಲಿ 342 ಮತ್ತು 4ನೇ ಇನಿಂಗ್ಸ್ನಲ್ಲಿ 165 ರನ್ ಇಲ್ಲಿನ ಸರಾಸರಿ ಮೊತ್ತವಾಗಿದೆ. ಇದರನ್ವಯ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳುವುದು ಸೂಕ್ತ. ಕನ್ನಡಿಗ ಅನಿಲ್ ಕುಂಬ್ಳೆ ಕೋಟ್ಲಾದಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ದಾಖಲೆ ಹೊಂದಿದ್ದಾರೆ. 1999ರಲ್ಲಿ ಅವರು ಇನಿಂಗ್ಸ್ನ ಎಲ್ಲ 10 ವಿಕೆಟ್ ಕಬಳಿಸಿದ ಸಾಧನೆಯನ್ನೂ ಇಲ್ಲೇ ಮಾಡಿದ್ದರು.
ನಾಗ್ಪುರದಲ್ಲಿ ತ್ರಿವಳಿ ಸ್ಪಿನ್ನರ್ಗಳು ಉತ್ತಮ ಯಶಸ್ಸು ತಂದುಕೊಟ್ಟಿದ್ದಾರೆ. ಕುಲದೀಪ್ ಯಾದವ್ ಭಾರತದ ಸ್ಪಿನ್ ಅಸ್ತ್ರಕ್ಕೆ ಇನ್ನಷ್ಟು ಹರಿತ ತಂದುಕೊಡಬಲ್ಲರು. ಜಡೇಜಾ, ಅಕ್ಷರ್ ಜತೆಗೆ ಕುಲದೀಪ್ ತಂಡದ 3ನೇ ಎಡಗೈ ಸ್ಪಿನ್ನರ್ ಆಗಲಿದ್ದಾರೆ. 2017ರ ಭಾರತದ ಪ್ರವಾಸದ ಧರ್ಮಶಾಲಾ ಟೆಸ್ಟ್ನಲ್ಲಿ ಕುಲದೀಪ್ ಆಸೀಸ್ಗೆ ಕಡಿವಾಣ ಹಾಕಿ ಗಮನಸೆಳೆದಿದ್ದರು. ನಾಗ್ಪುರದಲ್ಲಿ ಜಡೇಜಾ, ಅಕ್ಷರ್, ಅಶ್ವಿನ್ ಬ್ಯಾಟಿಂಗ್ನಲ್ಲೂ ಭಾರತಕ್ಕೆ ಉಪಯುಕ್ತ ಕೊಡುಗೆ ನೀಡಿದ್ದರು. ಹೀಗಾಗಿ ಹೆಚ್ಚುವರಿ ಬೌಲರ್ ಅಥವಾ 2ನೇ ವೇಗಿ ಬದಲಿಗೆ 4ನೇ ಸ್ಪಿನ್ನರ್ ಕಣಕ್ಕಿಳಿಸುವ ಒಲವು ಹೆಚ್ಚಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ಗೇರುವ ನಿಟ್ಟಿನಲ್ಲಿ ಭಾರತ ಸರಣಿಯ ಉಳಿದ 3 ಟೆಸ್ಟ್ ಗಳಲ್ಲಿ ಇನ್ನೆರಡು ಗೆಲುವು ಕಾಣಬೇಕಿದೆ.