ಕೇರಳದ ರಾಷ್ಟ್ರೀಯ ಕಬಡ್ಡಿ ಆಟಗಾರ್ತಿ ಈಗ ಮೀನು ಮಾರಾಟಗಾರ್ತಿ!

krishnamma kabaddi web
Published on

ಅಲಪುಜಾ: ಹತ್ತಕ್ಕೂ ಅಧಿಕ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿರುವ ಕೇರಳದ ಮಾಜಿ ಕಬಡ್ಡಿ ಆಟಗಾರ್ತಿ ಕೃಷ್ಣಮ್ಮ ಅವರು ಈಗ ಜೀವನ ನಿರ್ವಹಣೆಗಾಗಿ ಮೀನು ಮಾರಾಟಗಾರ್ತಿಯಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿಯಾಗಿದ್ದರೂ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ಮತ್ತು ಉದ್ಯೋಗ ಲಭಿಸದ ಕಾರಣದಿಂದಾಗಿ ಅವರು ಈಗ ಚೆನ್ನಿಥಲದ ಬೀದಿಬೀದಿಗಳಲ್ಲಿ ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟ ಮಾಡುತ್ತ ಕುಟುಂಬದ ಹಸಿವು ನೀಗಿಸುತ್ತಿದ್ದಾರೆ.

ಶಾಲಾ ದಿನಗಳಲ್ಲಿ ಕೃಷ್ಣಮ್ಮ ಅತ್ಯುತ್ತಮ ಕಬಡ್ಡಿ ಆಟಗಾರ್ತಿಯಾಗಿದ್ದರು. ಸಬ್ ಜೂನಿಯರ್, ಜೂನಿಯರ್ ಮಟ್ಟದ ಕಬಡ್ಡಿ ಪಂದ್ಯಗಳಲ್ಲಿ ಮಿಂಚಿದ್ದ ಅವರು ಬಳಿಕ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಆಡಿದ್ದರು. ಹೈಸ್ಕೂಲ್ ವಿದ್ಯಾಭ್ಯಾಸದ ಬಳಿಕ ಜಮ್ಮು-ಕಾಶ್ಮೀರ, ಛತ್ತೀಸ್‌ಗಢ, ತಮಿಳುನಾಡು ಮತ್ತು ಪಂಜಾಬ್‌ನಲ್ಲಿ ನಡೆದ 10ಕ್ಕೂ ಅಧಿಕ ರಾಷ್ಟ್ರೀಯ ಟೂರ್ನಿಗಳಲ್ಲೂ ಸ್ಪರ್ಧಿಸಿದ್ದರು.

ಕಬಡ್ಡಿ ಕೋಚ್ ಮತ್ತು ರೆಫ್ರಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಆದರೆ ಕೇರಳ ಕಂಡ ಅತ್ಯುತ್ತಮ ಕಬಡ್ಡಿ ಆಟಗಾರ್ತಿಯಾಗಿದ್ದರೂ ಅವರಿಗೆ ಸರ್ಕಾರದಿಂದ ಉದ್ಯೋಗಾವಕಾಶ ಒಲಿದು ಬರಲಿಲ್ಲ. ಅವರ ಪತಿ ಹಾಗೂ ತೆಯ್ಯಮ್ ಕಲಾವಿದ ಅಶೋಕನ್ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದು, ಕೆಲಸ ಕಳೆದುಕೊಂಡಿದ್ದಾರೆ. ಕುಟುಂಬದ ನಿರ್ವಹಣೆಗಾಗಿ ಈ ಹಿಂದೆ ಹಲವು ಉದ್ಯೋಗಗಳಲ್ಲಿ ಕೃಷ್ಣಮ್ಮ ತೊಡಗಿಸಿಕೊಂಡಿದ್ದರು. ಕಟ್ಟಿಗೆ ಕಡಿಯುವುದು ಮತ್ತು ತೆಂಗಿನ ಮರ ಹತ್ತುವ ಕೆಲಸಗಳನ್ನೂ ಮಾಡಿದ್ದರು.

2 ವರ್ಷಗಳ ಹಿಂದೆ ಕೇರಳದಲ್ಲಿ ಪ್ರವಾಹ ಬಂದಾಗ ಕೃಷ್ಣಮ್ಮ ಮನೆಯನ್ನೂ ಕಳೆದುಕೊಂಡಿದ್ದರು. ಬಳಿಕ ಶ್ರೀಮಂತ ಕುಟುಂಬದ ಮನೆಕೆಲಸ ಮಾಡುತ್ತಿದ್ದರು. ಆ ಕುಟುಂಬ ವಿದೇಶಕ್ಕೆ ಹೋದ ಬಳಿಕ ಆ ಕೆಲಸವೂ ಹೋಗಿತ್ತು. ಕೊನೆಗೆ ಇದೀಗ ಅವರು ಮೀನು ಮಾರಾಟಗಾರ್ತಿಯಾಗಿದ್ದಾರೆ. ಈ ಮೂಲಕ ಪತಿಯ ಚಿಕಿತ್ಸೆ ಮತ್ತು ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನೂ ನಿಭಾಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net