

ಮುಂಬೈ: ಮಾಜಿ ಕ್ರಿಕೆಟರ್ ಮೊಹಮ್ಮದ್ ಕೈಫ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ವೊಂದು ನೆಟ್ಟಿಗರ ಮನ ಗೆದ್ದಿದೆ.
ಮೊಹಮ್ಮದ್ ಕೈಫ್ ಅವರು ಅತ್ಯುತ್ತಮ ಫೀಲ್ಡರ್ ಆಗಿದ್ದವರು. 2018ರ ಜೂನ್ 13ರಂದು ಇಂಗ್ಲೆಂಡ್ ವಿರುದ್ಧದ ನ್ಯಾಟ್ವೆಸ್ಟ್ ಸರಣಿಯ ಫೈನಲ್ ಪಂದ್ಯವನ್ನು ಆಡಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದಾರೆ. ಆ ಪಂದ್ಯವನ್ನು ಭಾರತ ಗೆದ್ದಿದೆ.
ಅಂದು ಆ ಪಂದ್ಯದಲ್ಲಿ ಆಡಿದ್ದ ಸಚಿನ್ ತೆಂಡೂಲ್ಕರ್ ಅವರು ನಿವೃತ್ತಿ ಪಡೆದ ಮೊಹಮ್ಮದ್ ಕೈಫ್ಗೆ ಶುಭ ಹಾರೈಸಿದ್ದರು. ರಿಟೈರ್ಮೆಂಟ್ ತೆಗೆದುಕೊಳ್ಳಲು ಅತ್ಯುತ್ತಮ ದಿನವನ್ನೇ ನೀವು ಆಯ್ಕೆ ಮಾಡಿಕೊಂಡಿದ್ದೀರಿ. ಈ ನೆನಪುಗಳು ಸದಾ ಕಾಲ ನಮ್ಮ ಮನಸಿನಲ್ಲಿ ಉಳಿಯಲಿವೆ. 2002ರಲ್ಲಿ ನೀವು ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯಾವಳಿಯನ್ನು ಆಡುವಾಗ ನಿಮ್ಮನ್ನು ಹರಸಿದ್ದ ದೇವರು ಇನ್ನು ಮುಂದೆ ಕೂಡ ನಿಮಗೆ ಇನ್ನೂ ಹೆಚ್ಚಿನ ಯಶಸ್ಸನ್ನು ನೀಡಲಿ ಎಂದು ಟ್ವೀಟ್ ಮಾಡಿದ್ದರು.
ಈಗ ಕೈಫ್ ಅವರು ತಾವು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಇರುವ ಫೋಟೋವೊಂದನ್ನು ಟ್ವೀಟ್ ಮಾಡಿ, ಕೃಷ್ಣ ಪರಮಾತ್ಮನೊಂದಿಗೆ ನಾನು ಸುಧಾಮನಾದ ಕ್ಷಣ ಎಂದು ಕ್ಯಾಪ್ಷನ್ ಬರೆದಿದ್ದಾರೆ.
2 ಸಾವಿರ ರೀಟ್ವೀಟ್ ಆಗಿದ್ದು, 19.4 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಅಲ್ಲದೆ ಕಾಮೆಂಟ್ ಸೆಕ್ಷನ್ನಲ್ಲಿ ಮೆಚ್ಚುಗೆಗಳ ಸುರಿಮಳೆಯೇ ಬರುತ್ತಿದೆ.
ಮೊಹಮ್ಮದ್ ಕೈಫ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 125 ಏಕದಿನ ಪಂದ್ಯಾವಳಿಗಳನ್ನು ಆಡಿದ್ದು 2,753ರನ್ ಗಳಿಸಿದ್ದಾರೆ. ಎರಡು ಸೆಂಚೂರಿ ಬಾರಿಸಿದ್ದಾರೆ. (ಏಜೆನ್ಸೀಸ್)