

ನವದೆಹಲಿ: ಭಾರತ ಟೆಸ್ಟ್ ತಂಡದ ಆಯ್ಕೆಯ ವೇಳೆ ರಣಜಿ ಟ್ರೋಫಿಯಲ್ಲಿ ಆಟಗಾರರು ತೋರಿರುವ ನಿರ್ವಹಣೆಗೆ ಬದಲಾಗಿ ಐಪಿಎಲ್ನಲ್ಲಿ ನೀಡಿರುವ ಪ್ರದರ್ಶನವನ್ನು ಪರಿಗಣಿಸಿರುವ ಬಗ್ಗೆ ಸುನೀಲ್ ಗಾವಸ್ಕರ್, ರವಿಶಾಸ್ತ್ರಿ, ದೊಡ್ಡ ಗಣೇಶ್ ಸಹಿತ ಕೆಲ ಮಾಜಿ ಕ್ರಿಕೆಟಿಗರು ಕಟುವಾಗಿ ಟೀಕಿಸಿದ್ದಾರೆ.
ದೇಶೀಯ ಕ್ರಿಕೆಟ್ನಲ್ಲಿ ಕಳೆದ 3 ವರ್ಷಗಳಲ್ಲಿ 37 ಪ್ರಥಮ ದರ್ಜೆ ಪಂದ್ಯಗಳಲ್ಲಿ 13 ಶತಕಗಳ ಸಹಿತ 79.65ರ ಸರಾಸರಿಯಲ್ಲಿ 3,505 ರನ್ ಸಿಡಿಸಿರುವ ಸರ್ಫ್ರಾಜ್ ಖಾನ್ ಜತೆಗೆ ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರನ್ ಮುಂತಾದ ಬ್ಯಾಟರ್ಗಳ ನಿರ್ವಹಣೆಯನ್ನು ಪರಿಗಣಿಸದೆ ಐಪಿಎಲ್ನಲ್ಲಿ ಸಿಎಸ್ಕೆ ಪರ ಮಿಂಚಿದ ಋತುರಾಜ್ ಗಾಯಕ್ವಾಡ್ರನ್ನು ಆರಿಸಿರುವ ಬಗ್ಗೆ ಅವರು ಟೀಕಿಸಿದ್ದಾರೆ. ಋತುರಾಜ್ ಕಳೆದ ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡದಲ್ಲೇ 5 ಗರಿಷ್ಠ ರನ್ಸ್ಕೋರರ್ ಆಗಿದ್ದರು.
ನೆಟ್ಸ್ನಲ್ಲಿ ಪೂಜಾರ ಅಭ್ಯಾಸ
ಭಾರತ ಟೆಸ್ಟ್ ತಂಡದಿಂದ ಹೊರಬಿದ್ದಿರುವ ನಡುವೆ, ಇದರಿಂದ ವಿಚಲಿತರಾಗದಿರುವ ಸೌರಾಷ್ಟ್ರ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ, ಶನಿವಾರ ನೆಟ್ಸ್ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಪೂಜಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ 9 ಸೆಕೆಂಡ್ಗಳ ಈ ವಿಡಿಯೋ ವೈರಲ್ ಆಗಿದೆ. ಪೂಜಾರ ರಾಷ್ಟ್ರೀಯ ತಂಡಕ್ಕೆ ಮರಳುವ ವಿಶ್ವಾಸ ಹೊಂದಿದ್ದಾರೆ ಎಂದು ಅವರ ತಂದೆ ಅರವಿಂದ್ ತಿಳಿಸಿದ್ದಾರೆ. 35 ವರ್ಷದ ಪೂಜಾರ ಇನ್ನು ಜೂನ್ 28ರಿಂದ ಬೆಂಗಳೂರಿನಲ್ಲಿ ನಡೆಯಲಿರುವ ದುಲೀಪ್ ಟ್ರೋಫಿಯಲ್ಲಿ ಪಶ್ಚಿಮ ವಲಯ ಪರ ಕಣಕ್ಕಿಳಿಯಲಿದ್ದಾರೆ.