

ತಿರುಪತಿ: ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕುಟುಂಬ ಸಮೇತರಾಗಿ ತಿರುಮಲದಲ್ಲಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದುಕೊಂಡರು. ಅವರು ಈ ಸಂದರ್ಭದಲ್ಲಿ ಭಾರತದ ತಂಡ ೨೦೨೩ ರ ವಿಶ್ವಕಪ್ ಗೆಲ್ಲಲೆಂದು ಪ್ರಾರ್ಥನೆ ಸಲ್ಲಿಸಿರುವುದಾಗಿ ತಿಳಿಸಿದರು.
ಇದನ್ನೂ ಓದಿ
ಬಿಜೆಪಿ ಸಂಸದರೂ ಆಗಿರುವ ಗೌತಮ್ ಗಂಭೀರ್ ಬಾಲಾಜಿಯ ಮುಂಜಾನೆ ಸೇವೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ದೇವಸ್ಥಾನದ ರಂಗನಾಯಕರ ಮಂಟಪದಲ್ಲಿ ವೈದಿಕರು ಗಂಭೀರ್ಗೆ ವೇದಾಶೀರ‍್ವಾದ ಮಾಡಿದರು. ಟಿಟಿಡಿ ಅಧಿಕಾರಿಗಳು ಸ್ಮರಣಿಕೆ ನೀಡಿ ಗೌರವಿಸಿ ತೀರ್ಥಪ್ರಸಾದ ನೀಡಿ ಗೌರವಿಸಿದರು. ಅಭಿಮಾನಿಗಳು ಗಂಭೀರ್ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಮುಂಬರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತಕ್ಕೆ ಗೆಲ್ಲುವ ಎಲ್ಲ ಅವಕಾಶಗಳಿವೆ. ೧.೪ ಶತಕೋಟಿ ಭಾರತೀಯರ ಪ್ರಾರ್ತನೆಯೊಂದಿಗೆ ಭಾರತ ವಿಶ್ವಕಪ್‌ನಲ್ಲಿ ವಿಜಯಶಾಲಿ ತಂಡವಾಗಿ ಹೊರಹೊಮ್ಮಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಮುಂದಿನ ತಿಂಗಳು ಭಾರತದಲ್ಲಿ ಏಕದಿನ ವಿಶ್ವಕಪ್ ಆರಂಭವಾಗಲಿದ್ದು, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಅ.೮ ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಮೊದಲ ಪಂದ್ಯ ನಡೆಯಲಿದೆ. ಸದ್ಯ ಟೀಂ ಇಂಡಿಯಾ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದೆ.