

ನವದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪುರುಷರ ಮತ್ತು ಮಹಿಳೆಯರ ರಾಷ್ಟ್ರೀಯ ಕ್ರಿಕೆಟ್ ತಂಡಗಳು ಜತೆಯಾಗಿ ಇಂಗ್ಲೆಂಡ್‌ಗೆ ಪ್ರಯಾಣಿಸಲಿವೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಮತ್ತು ಆತಿಥೇಯರ ವಿರುದ್ಧದ ಟೆಸ್ಟ್ ಸರಣಿಗಾಗಿ ವಿರಾಟ್ ಕೊಹ್ಲಿ ಪಡೆ ಪ್ರಯಾಣಿಸುತ್ತಿದ್ದರೆ, ಮಹಿಳಾ ತಂಡ ಇಂಗ್ಲೆಂಡ್‌ನಲ್ಲಿ ಸೀಮಿತ ಓವರ್‌ಗಳ ಸರಣಿ ಮತ್ತು ಏಕೈಕ ಟೆಸ್ಟ್ ಆಡಲಿದ್ದು, ಜೂನ್ 2ರಂದು ಮುಂಬೈನಿಂದ ಒಂದೇ ಖಾಸಗಿ ವಿಮಾನದಲ್ಲಿ ತೆರಳಲಿವೆ.
ವಿರಾಟ್ ಕೊಹ್ಲಿ ಪಡೆ ಜೂನ್ 18ರಿಂದ ನ್ಯೂಜಿಲೆಂಡ್ ವಿರುದ್ಧ ಸೌಥಾಂಪ್ಟನ್‌ನಲ್ಲಿ ಡಬ್ಲ್ಯುಟಿಸಿ ಫೈನಲ್ ಪಂದ್ಯ ಆಡಬೇಕಾಗಿದ್ದರೆ, ಮಿಥಾಲಿ ರಾಜ್ ನೇತೃತ್ವದ ತಂಡ ಜೂನ್ 15ರಿಂದ ಏಕೈಕ ಟೆಸ್ಟ್ ಮತ್ತು 3 ಏಕದಿನ ಪಂದ್ಯ ಆಡಲಿದೆ. ಬಳಿಕ ಹರ್ಮಾನ್‌ಪ್ರೀತ್ ಕೌರ್ ಸಾರಥ್ಯದ ತಂಡ 3 ಟಿ20 ಪಂದ್ಯ ಆಡಲಿದೆ. ಹೀಗಾಗಿ ಏಕಕಾಲದಲ್ಲಿ ನಡೆಯುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಕರೊನಾ ಕಾಲದ ಪ್ರಯಾಣ ಸವಾಲುಗಳಿಂದಾಗಿ ಪುರುಷರ ಮತ್ತು ಮಹಿಳಾ ತಂಡಗಳನ್ನು ಜತೆಯಾಗಿ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.
ನಾಳೆಯಿಂದ ಕ್ವಾರಂಟೈನ್
ಪುರುಷರ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಮೇ 19ರಿಂದ ಮುಂಬೈನಲ್ಲಿ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಲಿದ್ದು, ಜೂನ್ 2ರಂದು ಇಂಗ್ಲೆಂಡ್‌ಗೆ ತೆರಳಲಿದೆ. ಮುಂಬೈ ನಿವಾಸಿಗಳಾಗಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಅಜಿಂಕ್ಯ ರಹಾನೆ ಮುಂತಾದ ಕ್ರಿಕೆಟಿಗರಿಗೆ ಒಂದು ವಾರ ತಡವಾಗಿ ಟೀಮ್ ಇಂಡಿಯಾದ ಬಯೋಬಬಲ್ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಆದರೆ ಈ ಒಂದು ವಾರದಲ್ಲಿ ಅವರು ಮನೆಯಿಂದ ಹೊರ ಬಾರದೆ ಕಟ್ಟುನಿಟ್ಟಿನ ಐಸೋಲೇಷನ್ ನಿಯಮ ಪಾಲಿಸಬೇಕಾಗುತ್ತದೆ. ಆಟಗಾರರ ಜತೆಗೆ ತೆರಳುವ ಕುಟುಂಬದ ಸದಸ್ಯರು ಕೂಡ ಕೋವಿಡ್-19 ಪರೀಕ್ಷೆಗೆ ಒಳಪಡುವುದು ಮತ್ತು ಕ್ವಾರಂಟೈನ್‌ನಲ್ಲಿರುವುದು ಅಗತ್ಯವಾಗಿದೆ.