ಈ ಸಲ ಫಿಫಾ ವಿಶ್ವಕಪ್​ ಪಂದ್ಯಗಳಲ್ಲಿ ಒಂದಲ್ಲ, ಮೂರು ವಿರಾಮ! 4 ಕ್ವಾರ್ಟರ್​ಗಳಲ್ಲಿ ಕಾದಾಟ!

ಈ ಸಲ ಫಿಫಾ ವಿಶ್ವಕಪ್​ ಪಂದ್ಯಗಳಲ್ಲಿ ಒಂದಲ್ಲ, ಮೂರು ವಿರಾಮ! 4 ಕ್ವಾರ್ಟರ್​ಗಳಲ್ಲಿ ಕಾದಾಟ!
ಈ ಸಲ ಫಿಫಾ ವಿಶ್ವಕಪ್​ ಪಂದ್ಯಗಳಲ್ಲಿ ಒಂದಲ್ಲ, ಮೂರು ವಿರಾಮ! 4 ಕ್ವಾರ್ಟರ್​ಗಳಲ್ಲಿ ಕಾದಾಟ!
Published on
ಬೆಂಗಳೂರು: ಫುಟ್​ಬಾಲ್​ ಪಂದ್ಯಗಳು ಸಾಮಾನ್ಯವಾಗಿ ಎರಡು ಭಾಗಗಳಲ್ಲಿ ನಡೆಯುತ್ತವೆ ಮತ್ತು 90 ನಿಮಿಷಗಳ ಪಂದ್ಯದಲ್ಲಿ ಮೊದಲ 45 ನಿಮಿಷಗಳ ಬಳಿಕ ಸಣ್ಣ ವಿರಾಮವೊಂದಿರುತ್ತದೆ. ಆದರೆ ಈ ಬಾರಿ ಫುಟ್​ಬಾಲ್​ ವಿಶ್ವಕಪ್​ (FIFA World Cup) ನಲ್ಲಿ ಒಂದಲ್ಲ, ಮೂರು ವಿರಾಮಗಳನ್ನು ನೀಡಲಾಗುತ್ತದೆ. ಇದರಿಂದ ಪಂದ್ಯಗಳು ನಾಲ್ಕು ಕ್ವಾರ್ಟರ್​ಗಳಲ್ಲಿ ವಿಭಜನೆಯಾಗಲಿವೆ. ಆಟಗಾರರಿಗೆ ದಣಿವು ತಣಿಸಲು ಎರಡು ಪಾನೀಯ ವಿರಾಮವನ್ನು ನೀಡಲಾಗುತ್ತದೆ ಎಂದು ಫಿಫಾ ಹೇಳುತ್ತಿದ್ದರೂ, ಈ ವಿರಾಮದ ಸಮಯದಲ್ಲಿ ಟಿವಿಯಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವ ಮೂಲಕ ಹಣ ಸಂಪಾದನೆಯ ಉದ್ದೇಶವೂ ಇದರ ಹಿಂದಿದೆ ಎಂದರೆ ತಪ್ಪಿಲ್ಲ.
ಎರಡು ಹೈಡ್ರೇಷನ್​ ಬ್ರೇಕ್​: ಫಿಫಾ ವಿಶ್ವಕಪ್​ನಲ್ಲಿ ಮೊದಲ 45 ನಿಮಿಷಗಳ ಆಟದ ಬಳಿಕ 15 ನಿಮಿಷಗಳ ವಿರಾಮ ಇದ್ದೇ ಇರಲಿದೆ. ಜತೆಗೆ ಈ ಬಾರಿ 45 ನಿಮಿಷಗಳ ಎರಡು ಭಾಗದ ನಡುವೆಯೂ ವಿರಾಮ ನೀಡಲಾಗುತ್ತದೆ. ಮೊದಲಾರ್ಧದಲ್ಲಿ 22 ನಿಮಿಷಗಳ ಬಳಿಕ ಮತ್ತು ದ್ವೀತಿಯಾರ್ಧದಲ್ಲಿ 67 ನಿಮಿಷಗಳ ಬಳಿಕ ತಲಾ 3 ನಿಮಿಷಗಳ ಪಾನೀಯ ವಿರಾಮ ನೀಡಲಾಗುತ್ತದೆ. ಇದನ್ನು ಫಿಫಾ "ಹೈಡ್ರೇಷನ್​ ಬ್ರೇಕ್​' ಎನ್ನುತ್ತಿದೆ. ವಾತಾವರಣ ತಂಪಾಗಿದ್ದರೂ, ಪ್ರತಿ ಪಂದ್ಯದ ನಡುವೆ ಈ ವಿರಾಮ ಇದ್ದೇ ಇರಲಿದೆ. ಇದರಿಂದ ಫುಟ್​ಬಾಲ್​ ಕೂಡ ಹಾಕಿಯಂತೆ 4 ಕ್ವಾರ್ಟರ್​ಗಳ ಪಂದ್ಯವಾಗಿರಲಿದೆ. ಈ ಹೈಡ್ರೇಷನ್​ ಬ್ರೇಕ್​ ವೇಳೆಯೂ ಕೋಚ್​ಗಳು ಆಟಗಾರರಿಗೆ ಮಾರ್ಗದರ್ಶನ ನೀಡುವ ಅವಕಾಶವಿರಲಿದೆ. ಹೀಗಾಗಿ ಇದು ಕಾರ್ಯತಂತ್ರ ಬದಲಾವಣೆ, ಪರಿಶೀಲನೆ ದೃಷ್ಟಿಯಿಂದಲೂ ಅನುಕೂಲಕರ. 
624 ನಿಮಿಷ ಅಧಿಕ
ಹೈಡ್ರೇಷನ್​ ಬ್ರೇಕ್​ನಿಂದಾಗಿ ಈ ಬಾರಿ ಟೂರ್ನಿಯ 104 ಪಂದ್ಯಗಳ ವೇಳೆ 624 ನಿಮಿಷ ಹೆಚ್ಚುವರಿ ಆಗಲಿದೆ. ಇದರಿಂದ ಪ್ರಸಾರ ವಾಹಿನಿಗೆ ಪಂದ್ಯ ನಡುವೆ ಜಾಹೀರಾತು ಪ್ರಕಟಿಸಲು 10 ಗಂಟೆಗೂ ಅಧಿಕ ಸಮಯ ಲಭಿಸಲಿದೆ. ಅಂದರೆ ಈ ಸಮಯದಲ್ಲಿ 90 ನಿಮಿಷಗಳ 7 ಫುಟ್​ಬಾಲ್​ ಪಂದ್ಯಗಳನ್ನು ಆಡಬಹುದು!
ಟಿವಿ ಆದಾಯ ಸ್ನೇಹಿ ಫುಟ್​ಬಾಲ್​
ಅಮೆರಿಕದ ಎನ್​ಬಿಎ, ಎನ್​ಎಫ್​ಎಲ್​ಗಳಲ್ಲಿ 4 ಕ್ವಾರ್ಟರ್​ಗಳ ನಡುವೆ ಟಿವಿ ಜಾಹೀರಾತುಗಳಿಂದ ಹೇರಳ ಆದಾಯ ಬರುತ್ತದೆ. ಇದೇ ರೀತಿ ಕ್ರಿಕೆಟ್​ನಲ್ಲೂ ಪ್ರತಿ ಓವರ್​ ನಡುವೆ ಟಿವಿ ಜಾಹೀರಾತು ಪ್ರಸಾರ ಮಾಡುವ ಅನುಕೂಲವಿದೆ. ಇದೇ ರೀತಿ ಈಗ ಹೆಚ್ಚಿನ ವಿರಾಮದ ಮೂಲಕ ಫುಟ್​ಬಾಲ್​ ಪಂದ್ಯವನ್ನೂ ಟಿವಿ ಆದಾಯ ಸ್ನೇಹಿಯಾಗಿ ಮಾಡಲು ಫಿಫಾ ಪ್ರಯತ್ನಿಸುತ್ತಿದೆ. 
ಫೈನಲ್​ನಲ್ಲಿ ಅರ್ಧಗಂಟೆ ಬ್ರೇಕ್​!
ಫಿಫಾ ವಿಶ್ವಕಪ್​ನಲ್ಲಿ ಜುಲೈ 19ರಂದು ನ್ಯೂಜೆರ್ಸಿಯಲ್ಲಿ ನಡೆಯಲಿರುವ ಫೈನಲ್​ ಪಂದ್ಯದ ನಡುವೆ 15 ನಿಮಿಷಕ್ಕೆ ಬದಲಾಗಿ ಅರ್ಧ ಗಂಟೆಯ ವಿರಾಮ ಇರಲಿದೆ. ಈ ಸಮಯದಲ್ಲಿ ಸಮಾರೋಪದ ಮನರಂಜನೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಪಾಪ್​ ತಾರೆಯರಾದ ಮಡೋನ್ನಾ, ಶಕೀರಾ, ಬಿಟಿಎಸ್​ ಸಂಗೀತ ಸುಧೆ ಹರಿಸಲಿದ್ದಾರೆ. ಇದು ಪಂದ್ಯಕ್ಕೆ ಅಡಚಣೆ ತರುತ್ತದೆ, ಆಟಗಾರರ ಲಯ ತಪ್ಪುತ್ತದೆ ಮತ್ತು ಏಕಾಗ್ರತೆಗೆ ಭಂಗವಾಗುತ್ತದೆ ಎಂಬ ಟೀಕೆಗಳು ಎದುರಾಗಿದ್ದರೂ, ಫಿಫಾ ಇದಕ್ಕೆ ಸೊಪ್ಪು ಹಾಕಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net