ಕತಾರ್ನಲ್ಲಿ ನಡೆದ ಕಳೆದ 2022ರ ಫಿಫಾ ವಿಶ್ವಕಪ್ನಲ್ಲಿ ಆಡಿದ್ದ 32 ತಂಡಗಳ ಪೈಕಿ 26 ತಂಡಗಳು ಈ ಬಾರಿಯೂ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿವೆ. ಕಳೆದ ಬಾರಿ ಆಡಿದ್ದ ಕೋಸ್ಟಾರಿಕಾ, ಕ್ಯಾಮರೂನ್, ಡೆನ್ಮಾರ್ಕ್, ಪೋಲೆಂಡ್, ಸೆರ್ಬಿಯಾ ಮತ್ತು ವೇಲ್ಸ್ ಈ ಬಾರಿ ಅರ್ಹತೆಯಿಂದ ವಂಚಿತವಾಗಿವೆ. 4 ದೇಶಗಳಾದ ಕೇಪ್ ವರ್ಡೆ, ಕುರಾಕಾವೊ, ಜೋರ್ಡಾನ್ ಮತ್ತು ಉಜ್ಬೇಕಿಸ್ತಾನ ಈ ಬಾರಿ ಫಿಫಾ ವಿಶ್ವಕಪ್ಗೆ ಪದಾರ್ಪಣೆ ಮಾಡಲಿವೆ. ಕಳೆದ ವರ್ಷ ಆತಿಥೇಯ ತಂಡವಾಗಿ ನೇರಅರ್ಹತೆ ಪಡೆದಿದ್ದ ಕತಾರ್, ಇದೇ ಮೊದಲ ಬಾರಿಗೆ ಅರ್ಹತಾ ಟೂರ್ನಿಯ ಮೂಲಕ ವಿಶ್ವಕಪ್ನಲ್ಲಿ ಆಡುವ ಅವಕಾಶ ಗಿಟ್ಟಿಸಿಕೊಂಡಿದೆ. ಕಾಂಗೋ ಡಿಆರ್ ಮತ್ತು ಹೈಟಿ ದೇಶಗಳು ಬರೋಬ್ಬರಿ 52 ವರ್ಷಗಳ ಬಳಿಕ ಅಂದರೆ 1974ರ ಬಳಿಕ ವಿಶ್ವಕಪ್ ಆಡುವ ಅವಕಾಶ ಪಡೆದಿವೆ. ಇನ್ನುಳಿದಂತೆ ಇರಾಕ್ 1986ರ ಬಳಿಕ, ಆಸ್ಟ್ರಿಯಾ, ನಾರ್ವೆ, ಸ್ಕಾಟ್ಲೆಂಡ್ 1998ರ ಬಳಿಕ, ಟರ್ಕಿ 2002ರ ಬಳಿಕ ಜೆಕ್ ಗಣರಾಜ್ಯ 2006ರ ಬಳಿಕ, ನ್ಯೂಜಿಲೆಂಡ್, ಪರಾಗ್ವೆ, ದ. ಆಫ್ರಿಕಾ 2010ರ ಬಳಿಕ, ಅಲ್ಜೀರಿಯಾ, ಬೋಸ್ನಿಯಾ-ಹರ್ಜೆಗೋವಿನಾ, ಐವರಿಕೋಸ್ಟ್ 2014ರ ಬಳಿಕ ವಿಶ್ವಕಪ್ ಅರ್ಹತೆ ಗಿಟ್ಟಿಸಿಕೊಂಡಿವೆ. 2022ರ ಟೂರ್ನಿ ತಪ್ಪಿಸಿಕೊಂಡಿದ್ದ ಕೊಲಂಬಿಯಾ, ಈಜಿಪ್ಟ್, ಪನಾಮ, ಸ್ವೀಡನ್ ಈ ಬಾರಿ ಮರಳಿವೆ.