ಹ್ಯೂಸ್ಟನ್: ಹಾಲಿ ಫಿಫಾ ವಿಶ್ವಕಪ್ನಲ್ಲಿ ಹಲವು ಸ್ಟಾರ್ ಆಟಗಾರರು ಆರಂಭಿಕ ಪಂದ್ಯದಲ್ಲೇ ಭರ್ಜರಿ ಗೋಲು ಸಿಡಿಸಿ ಮಿಂಚಿರುವ ನಡುವೆ ಪೋರ್ಚುಗಲ್ ಸೂಪರ್ಸ್ಟಾರ್ ಕ್ರಿಶ್ಚಿಯಾನೊ ರೊನಾಲ್ಡೊ (Cristiano Ronaldo) ಒಂದೂ ಗೋಲು ಬಾರಿಸಲು ಶಕ್ತರಾಗದೆ ನಿರಾಸೆ ಅನುಭವಿಸಿದ್ದಾರೆ. ಇದರೊಂದಿಗೆ ಪೋರ್ಚುಗಲ್ ತಂಡ ಕೆ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಕಾಂಗೋ ಡೆಮಕ್ರಾಟಿಕ್ ರಿಪಬ್ಲಿಕ್ ತಂಡದ ವಿರುದ್ಧ 1-1 ಅಂತರದಿಂದ ಡ್ರಾಕ್ಕೆ ತೃಪ್ತಿಪಟ್ಟಿತು. ಇದರ ಬೆನ್ನಲ್ಲೇ ಪೋರ್ಚುಗಲ್ ತಂಡದ ನಾಯಕ ಕ್ರಿಶ್ಚಿಯಾನೊ ರೊನಾಲ್ಡೊ ಟೀಕೆಗೆ ಗುರಿಯಾಗಿದ್ದಾರೆ.
ಅವರ ಸ್ವಾರ್ಥ ಆಟದಿಂದಲೇ ತಂಡಕ್ಕೆ ಗೆಲುವು ಸಿಗಲಿಲ್ಲ ಎಂದು ಹಲವು ಫುಟ್ಬಾಲ್ ಪಂಡಿತರು ದೂರಿದ್ದಾರೆ. ರೊನಾಲ್ಡೊ ತಾನು ಗೋಲು ಗಳಿಸಬೇಕೆಂದು ಪ್ರಯತ್ನಿಸಿದರು. ತಂಡದ ಗೋಲಿಗಾಗಿ ಅವರು ಪ್ರಯತ್ನಿಸಲಿಲ್ಲ. ಹಲವು ಬಾರಿ ತಂಡದ ಇತರ ಆಟಗಾರರ ಗೋಲು ಗಳಿಸುವ ಅವಕಾಶಗಳಿಗೆ ಅವರು ಅಡ್ಡ ಬಂದರು. ರೊನಾಲ್ಡೊ ಇಲ್ಲದೆಯೇ ಪೋರ್ಚುಗಲ್ ಉತ್ತಮ ತಂಡವಾಗಬಲ್ಲುದು ಎಂದು ಮಾಜಿ ಆಟಗಾರರಾದ ಥಿಯರಿ ಹೆನ್ರಿ, ಕೆವಿನ್ ಪ್ರಿನ್ಸ್ ಬೋಟೆಂಗ್, ವೇಯ್ನ್ ರೂನಿ ಮತ್ತಿತರರು ದೂರಿದ್ದಾರೆ.