ಫಿಫಾ ವಿಶ್ವಕಪ್: 5.30 ಲಕ್ಷ ಜನಸಂಖ್ಯೆಯ ದ್ವೀಪರಾಷ್ಟ್ರದ ತಂಡಕ್ಕೆ ನಾಕೌಟ್​ಗೇರುವ ಅವಕಾಶ!

ಕೇಪ್ ವರ್ಡೆ ತಂಡದ ಆಟಗಾರರ ಸಂಭ್ರಮ
ಕೇಪ್ ವರ್ಡೆ ತಂಡದ ಆಟಗಾರರ ಸಂಭ್ರಮ
Published on
ಮಿಯಾಮಿ: ಚೊಚ್ಚಲ ಫಿಫಾ ವಿಶ್ವಕಪ್( FIFA World Cup) ಆಡುತ್ತಿರುವ ಕೇಪ್ ವರ್ಡೆ ತಂಡ ಎರಡು ಬಾರಿಯ ಚಾಂಪಿಯನ್ ಉರುಗ್ವೆ ವಿರುದ್ಧವೂ ದಿಟ್ಟ ಪ್ರತಿರೋಧ ತೋರಿ 2-2ರಿಂದ ಡ್ರಾ ಸಾಧಿಸಿತು. ಮೊದಲ ಪಂದ್ಯದಲ್ಲಿ ಸ್ಪೇನ್ ಎದುರು ಡ್ರಾ ಸಾಧಿಸಿ ಮಿಂಚಿದ್ದ ಕೇಪ್ ವರ್ಡೆ ಸತತ 2ನೇ ಪಂದ್ಯದಲ್ಲೂ ಅಂಕ ಹಂಚಿಕೊಂಡು ಮತ್ತೊಮ್ಮೆ ಎಲ್ಲರ ಗಮನಸೆಳೆಯಿತು.
ಭಾರತೀಯ ಕಾಲಮಾನ ಪ್ರಕಾರ ಸೋಮವಾರ ನಸುಕಿನ ಸಮಯದಲ್ಲಿ ನಡೆದ ಪಂದ್ಯದ 21ನೇ ನಿಮಿಷದಲ್ಲಿ ಕೆವಿನ್ ಪಿನಾ ಫ್ರೀಕಿಕ್‌ನಲ್ಲಿ ಮೊದಲ ಗೋಲು ಬಾರಿಸಿದರು. ಇದು ಕೇವಲ 5.30 ಲಕ್ಷ ಜನಸಂಖ್ಯೆಯ ಕೇಪ್ ವರ್ಡೆ ಪರ ದಾಖಲಾದ ಮೊದಲ ವಿಶ್ವಕಪ್ ಗೋಲು ಎನಿಸಿತು. ಬಳಿಕ ಉರುಗ್ವೆ ಪರ ಮ್ಯಾಕ್ಸಿ ಅರೌಜೊ (44) ಮತ್ತು ಅಗಸ್ಟಿನ್ ಕ್ಯಾನೊಬಿಯೊ (45+6) ಮೊದಲಾರ್ಧದ ಅಂತಿಮ ಹಂತದಲ್ಲಿ ತಲಾ ಒಂದು ಗೋಲು ಬಾರಿಸಿದರು.
ಇದರಿಂದ ಉರುಗ್ವೆ 2-1 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು. ಆದರೆ ದ್ವಿತೀಯಾರ್ಧದಲ್ಲಿ ಹೆಲಿಯೊ ವರೆಲಾ 61ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದ ಕೇಪ್ ವರ್ಡೆ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಯಿತು. ಕೊನೇ ಪಂದ್ಯದಲ್ಲಿ ಸೌದಿ ಅರೇಬಿಯಾವನ್ನು ಎದುರಿಸಲಿರುವ ಕೇಪ್ ವರ್ಡೆ ನಾಕೌಟ್ ಹಂತಕ್ಕೇರಿ ಹೊಸ ಇತಿಹಾಸ ಬರೆಯುವ ಅವಕಾಶವನ್ನೂ ಹೊಂದಿದೆ.
‘ನಮ್ಮದು ಒಂದು ಚಿಕ್ಕ ದೇಶವಾಗಿರಬಹುದು, ಆರ್ಥಿಕವಾಗಿ ಸಂಕಷ್ಟದಲ್ಲಿರಬಹುದು. ಆದರೆ ನಾವು ಹೋರಾಟ ತೋರಬಲ್ಲೆವು ಎಂಬುದನ್ನು ಸಾಬೀತುಪಡಿಸಿದ್ದೇವೆ. ಮೈದಾನದಲ್ಲಿ ನಾವು ಇತರ ಬಲಿಷ್ಠ ತಂಡಗಳಿಗೂ ಸರಿಸಮಾನ ಆಗಬಲ್ಲೆವು’ ಎಂದು ಕೇಪ್ ವರ್ಡೆ ಕೋಚ್ ಪಡ್ರೊ ಲೀಟಾವೊ ಬ್ರಿಟೋ ಹೇಳಿದ್ದಾರೆ. ಸ್ಪೇನ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇಪ್ ವರ್ಡೆ ಗೋಲು ಕೀಪರ್ ವೊಜಿನ್ಹಾ ತಡೆಗೋಡೆಯಾಗಿ ನಿಂತು ಗಮನಸೆಳೆದಿದ್ದರು.
ಉರುಗ್ವೆ: 2
*ಮ್ಯಾಕ್ಸಿ ಅರೌಜೊ (44)
*ಅಗಸ್ಟಿನ್ ಕ್ಯಾನೊಬಿಯೊ (45+6)
ಕೇಪ್ ವರ್ಡೆ: 2
*ಹೆಲಿಯೊ ವರೆಲಾ (61)
*ಕೆವಿನ್ ಪಿನಾ (21).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net