ಡಲ್ಲಾಸ್: ಹಾಲಿ ರನ್ನರ್ಅಪ್ ಹಾಗೂ ಫೇವರಿಟ್ ಫ್ರಾನ್ಸ್ ತಂಡಕ್ಕೆ ಆಘಾತಕಾರಿ ಸೋಲುಣಿಸುವ ಮೂಲಕ ಯುರೋ ಕಪ್ ಚಾಂಪಿಯನ್ ಸ್ಪೇನ್ ತಂಡ 16 ವರ್ಷಗಳ ಬಳಿಕ ಫಿಫಾ ವಿಶ್ವಕಪ್ (FIFA WorldCup) ಫೈನಲ್ ಪ್ರವೇಶಿಸಿದೆ. ಮೈಕೆಲ್ ಒಯರ್ಜಾಬಲ್ (22ನೇ ನಿಮಿಷ, ಪೆನಾಲ್ಟಿ) ಮತ್ತು ಪೆಡ್ರೊ ಪೊರೊ (58) ಗೋಲುಗಳ ಬಲದಿಂದ 2010ರ ಚಾಂಪಿಯನ್ ಸ್ಪೇನ್ ತಂಡ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಲೆಸ್ ಬ್ಲೂಸ್ ಖ್ಯಾತಿಯ ಫ್ರಾನ್ಸ್ ತಂಡವನ್ನು 2-0 ಅಂತರದಿಂದ ಪರಾಭವಗೊಳಿಸಿತು. ಲಾ ರೋಜಾ ಖ್ಯಾತಿಯ ಸ್ಪೇನ್ ತಂಡದ ಬಲಿಷ್ಠ ರಕ್ಷಣಾ ಕೋಟೆಯನ್ನು ಭೇದಿಸಲು ವಿಫಲವಾಗುವುದರೊಂದಿಗೆ, ಸತತ ಮೂರನೇ ಬಾರಿ ಪ್ರಶಸ್ತಿ ಸುತ್ತಿಗೇರುವ ಕೈಲಿಯಾನ್ ಎಂಬಾಪೆ ಬಳಗದ ಕನಸು ಭಗ್ನಗೊಂಡಿತು. ಸ್ಪೇನ್ ತಂಡ ಭಾನುವಾರ ರಾತ್ರಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಅರ್ಜೆಂಟೀನಾ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಫ್ರಾನ್ಸ್ ತಂಡ ಇನ್ನು 2ನೇ ಸೆಮೀಸ್ನಲ್ಲಿ ಸೋತ ತಂಡದ ಎದುರು ಮೂರನೇ ಸ್ಥಾನದ ಸಮಾಧಾನಕ್ಕಾಗಿ ಹೋರಾಡಲಿದೆ.