FIFA WorldCup: ಶೂಟೌಟ್​ನಲ್ಲಿ ಮೊರಾಕ್ಕೊ ಗೆಲುವಿನ ಮ್ಯಾಜಿಕ್​

FIFA WorldCup: ಶೂಟೌಟ್​ನಲ್ಲಿ ಮೊರಾಕ್ಕೊ ಗೆಲುವಿನ ಮ್ಯಾಜಿಕ್​
FIFA WorldCup: ಶೂಟೌಟ್​ನಲ್ಲಿ ಮೊರಾಕ್ಕೊ ಗೆಲುವಿನ ಮ್ಯಾಜಿಕ್​
Published on
ಮಾಂಟೆರ್ರಿ: ನಿರ್ಣಾಯಕ ಪೆನಾಲ್ಟಿ ಶೂಟೌಟ್​ ಹೊಡೆತದಲ್ಲಿ ಇಸ್ಮಾಯಿಲ್​ ಸಾಯಿಬರಿ ಗೋಲು ಬಾರಿಸಲು ಯಶಸ್ವಿಯಾಗುವುದರೊಂದಿಗೆ ಮೊರಾಕ್ಕೊ ತಂಡ ಫಿಫಾ ವಿಶ್ವಕಪ್​ (FIFA WorldCup) 32ರ ಘಟ್ಟದಲ್ಲಿ ಮೂರು ಬಾರಿಯ ರನ್ನರ್​ಅಪ್​ ನೆದರ್ಲ್ಯಾಂಡ್ಸ್​ ತಂಡಕ್ಕೆ 3-2ರಿಂದ ಆಘಾತಕಾರಿ ಸೋಲುಣಿಸಿತು. ಇದರೊಂದಿಗೆ ಡಚ್ಚರು ವಿಶ್ವಕಪ್​ ಇತಿಹಾಸದಲ್ಲಿ ಅತಿ ಬೇಗನೆ ಹೊರಬಿದ್ದ ನಿರಾಸೆ ಅನುಭವಿಸಿದರು. ನೆದರ್ಲ್ಯಾಂಡ್ಸ್​ ಈ ಹಿಂದೆ ಆಡಿದ 11 ಆವೃತ್ತಿಯಲ್ಲೂ ಕನಿಷ್ಠ 16ರ ಘಟ್ಟಕ್ಕೇರಿತ್ತು.
ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಬೆಳಗ್ಗೆ ನಡೆದ ಪಂದ್ಯದಲ್ಲಿ ಕೋಡಿ ಗ್ಯಾಕ್ಪೋ 72ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದ ನೆದರ್ಲ್ಯಾಂಡ್ಸ್​ ಮುನ್ನಡೆ ಸಾಧಿಸಿತ್ತು. ಇತ್ತೀಚೆಗಷ್ಟೇ ತನ್ನ ಸಂಗಾತಿಗೆ ಗರ್ಭಪಾತವಾದ ಬೇಸರದ ನಡುವೆ ಕಣಕ್ಕಿಳಿದಿದ್ದ ಗ್ಯಾಕ್ಪೋ, ಗೋಲು ಸಿಡಿಸಿದ ಬಳಿಕ ಭಾವುಕರಾದರು. ಬಳಿಕ ಇಸಾ ಡಿಯೋಪ್​ (90+1ನೇ ನಿಮಿಷ) ಇಂಜುರಿ ಸಮಯದಲ್ಲಿ ಬಾರಿಸಿದ ಗೋಲಿನಿಂದ ಮೊರಾಕ್ಕೊ ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ವಿಸ್ತರಿಸುವಲ್ಲಿ ಯಶಸ್ವಿಯಾಯಿತು. 120 ನಿಮಿಷಗಳ ಆಟದ ಬಳಿಕವೂ ಪಂದ್ಯ 1-1 ಸಮಬಲದಲ್ಲಿ ಮುಗಿದ ಬಳಿಕ ಫಲಿತಾಂಶ ನಿರ್ಧಾರಕ್ಕೆ ಪೆನಾಲ್ಟಿ ಶೂಟೌಟ್​ ಮೊರೆ ಹೋಗಲಾಯಿತು.

ಶೂಟೌಟ್​ನಲ್ಲಿ ಮೊದಲ 4 ಸುತ್ತಿನ ಹೊಡೆತಗಳ ಬಳಿಕವೂ ಪಂದ್ಯ 2-2 ಸಮಬಲದಲ್ಲಿತ್ತು. ಆಗ ಮೊರಾಕ್ಕೊ ಗೋಲು ಕೀಪರ್​ ಯಾಸಿನ್​ ಬೌನೌ, ಕೆಸೆನ್ಸಿಯೊ ಸಮ್ಮರ್​ವಿಲ್ಲೆರ 5ನೇ ಹೊಡೆತವನ್ನು ಎಡಗಾಲಿನಿಂದ ತಡೆಯುವಲ್ಲಿ ಯಶಸ್ವಿಯಾದರು. ಸಾಯಿಬರಿ ಕೊನೇ ಹೊಡೆತದಲ್ಲಿ ಡಚ್ಚರ ಗೋಲು ಕೀಪರ್​ ರ್ಬಟ್​ ವರ್ಬ್ರುಗೆನ್​ರನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದ ಬೆನ್ನಲ್ಲೇ ಜೆರ್ಸಿ ಬಿಚ್ಚಿ ಸಂಭ್ರಮಿಸಿದರು.

4 ವರ್ಷಗಳ ಹಿಂದೆ ಕತಾರ್​ನಲ್ಲಿ ವಿಶ್ವಕಪ್​ ಸೆಮಿಫೈನಲ್​ಗೇರಿದ ಮೊದಲ ಆಫ್ರಿಕನ್​ ದೇಶವೆನಿಸಿದ್ದ ಮೊರಾಕ್ಕೊ ಈ ಬಾರಿಯೂ ತನ್ನ ಮ್ಯಾಜಿಕ್​ ಮುಂದುವರಿಸಿದೆ. ಮೊರಾಕ್ಕೊ 16ರ ಟ್ಟದಲ್ಲಿ ಸಹ&ಆತಿಥೇಯ ಕೆನಡಾ ತಂಡವನ್ನು ಅಮೆರಿಕದ ಹ್ಯೂಸ್ಟನ್​ನಲ್ಲಿ ಎದುರಿಸಲಿದೆ. ಮೊರಾಕ್ಕೊ 2022ರ ವಿಶ್ವಕಪ್​ ಲೀಗ್​ ಹಂತದಲ್ಲಿ ಕೆನಡಾಗೆ ಸೋಲುಣಿಸಿದ ದಾಖಲೆಯನ್ನೂ ಹೊಂದಿದೆ.
*4: ನೆದರ್ಲ್ಯಾಂಡ್ಸ್​ 4ನೇ ಬಾರಿ ಪೆನಾಲ್ಟಿ ಶೂಟೌಟ್​ನಲ್ಲೇ ವಿಶ್ವಕಪ್​ನಿಂದ ಹೊರಬಿದ್ದಿತು.
*2: ಮೊರಾಕ್ಕೊ ವಿಶ್ವಕಪ್​ನಲ್ಲಿ 2ನೇ ಬಾರಿ ಪೆನಾಲ್ಟಿ ಶೂಟೌಟ್​ನಲ್ಲಿ ಜಯಿಸಿತು. 2022ರಲ್ಲಿ ಸ್ಪೇನ್​ ಎದುರು ಗೆದ್ದಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net