ಶ್ರೀಮಂತ ಫುಟ್​ಬಾಲ್​ ದುನಿಯಾ! ಈ ಸಲದ ವಿಶ್ವಕಪ್​ನಿಂದ ದಾಖಲೆ ಆದಾಯದ ನಿರೀಕ್ಷೆಯಲ್ಲಿ ಫಿಫಾ

ಶ್ರೀಮಂತ ಫುಟ್​ಬಾಲ್​ ದುನಿಯಾ! ಈ ಸಲದ ವಿಶ್ವಕಪ್​ನಿಂದ ದಾಖಲೆ ಆದಾಯದ ನಿರೀಕ್ಷೆಯಲ್ಲಿ ಫಿಫಾ
ಶ್ರೀಮಂತ ಫುಟ್​ಬಾಲ್​ ದುನಿಯಾ! ಈ ಸಲದ ವಿಶ್ವಕಪ್​ನಿಂದ ದಾಖಲೆ ಆದಾಯದ ನಿರೀಕ್ಷೆಯಲ್ಲಿ ಫಿಫಾ
Published on
ಬೆಂಗಳೂರು: ಫಿಫಾ ವಿಶ್ವಕಪ್​ (FIFA World Cup) 23ನೇ ಆವೃತ್ತಿಯು ಆತಿಥೇಯ ದೇಶಗಳು (3), ಭಾಗವಹಿಸುವ ತಂಡಗಳು (48) ಮತ್ತು ಆಡುತ್ತಿರುವ ಪಂದ್ಯ (104), ಕ್ರೀಡಾಂಗಣ (16) ಮತ್ತು ದಿನಗಳ (39) ಲೆಕ್ಕದಲ್ಲಿ ಹಿಂದೆಂದೂ ಕಂಡರಿಯದಷ್ಟು ದೈತ್ಯ ಫುಟ್​ಬಾಲ್​ ಹಬ್ಬವೆನಿಸಿದೆ. ಅದೇ ರೀತಿ ಈ ಬಾರಿ ಟೂರ್ನಿಯಿಂದ ಹರಿಯಲಿರುವ ಹಣದ ಹೊಳೆಯೂ ದೊಡ್ಡ ಪ್ರಮಾಣದಲ್ಲಿದೆ. ಒಟ್ಟಾರೆ ಲಕ್ಷ ಕೋಟಿ ರೂಪಾಯಿ ಲೆಕ್ಕದಲ್ಲೇ ಈ ಬಾರಿ ಟೂರ್ನಿಯ ಹಣಕಾಸು ಲೆಕ್ಕಾಚಾರ ನಡೆಯುತ್ತಿದೆ. ಹೀಗಾಗಿ ಟೂರ್ನಿಗೆ ಸಂಬಂಧಿಸಿದ ಆರ್ಥಿಕ ವ್ಯವಹಾರಗಳ ಸಂಪ್ತ ವಿವರ ಇಲ್ಲದೆ.
ಡೈನಾಮಿಕ್​ ದರ; ಟಿಕೆಟ್​ ದುಬಾರಿ
ಈ ಸಲದ ಫಿಫಾ ವಿಶ್ವಕಪ್​ ಪಂದ್ಯಗಳ ಟಿಕೆಟ್​ ದರ ದುಬಾರಿ ಎನಿಸಿದೆ. ಈ ಬಾರಿ ಫಿಫಾ ಟಿಕೆಟ್​ ಮಾರಾಟ ಪ್ರಕ್ರಿಯೆ ಸಂಪೂರ್ಣ ನಿಯಂತ್ರಣ ತೆಗೆದುಕೊಂಡಿದ್ದು, ಕಳೆದ ಆವೃತ್ತಿಗಿಂತ ದುಪ್ಪಟ್ಟು ಬೆಲೆ ನಿಗದಿಪಡಿಸಲಾಗಿದೆ. ಜತೆಗೆ ಡೈನಾಮಿಕ್​ ಮಾದರಿಯನ್ನು ಅನುಸರಿಸಲಾಗುತ್ತಿದ್ದು, ಹೆಚ್ಚಿನ ಕುತೂಹಲದ ಮತ್ತು ಸ್ಟಾರ್​ ಆಟಗಾರರು ಆಡುವ ಪಂದ್ಯಗಳ ಟಿಕೆಟ್​ ದರವನ್ನು ಇನ್ನಷ್ಟು ಏರಿಕೆ ಮಾಡಲಾಗಿದೆ. ಟೂರ್ನಿಯ ಕನಿಷ್ಠ ಟಿಕೆಟ್​ ಬೆಲೆ 5,716 ರೂ. (60 ಡಾಲರ್​) ಆಗಿದೆ. ಲೀಗ್​ ಹಂತದ ಪಂದ್ಯದ ಗರಿಷ್ಠ ಟಿಕೆಟ್​ ಬೆಲೆ 9.52 ಲಕ್ಷ ರೂ. ಆಗಿದೆ. ಲೀಗ್​ ಪಂದ್ಯಗಳ ಸರಾಸರಿ ಟಿಕೆಟ್​ ದರ 72,214 ರೂ. ಆಗಿದೆ. ನಾಕೌಟ್​ ಪಂದ್ಯಗಳ ಟಿಕೆಟ್​ ದರ ಕನಿಷ್ಠ 2.57 ಲಕ್ಷ ರೂ.ನಿಂದ ಗರಿಷ್ಠ 10.47 ಲಕ್ಷ ರೂ. ಆಗಿದೆ. ಫೈನಲ್​ ಪಂದ್ಯದ ಟಿಕೆಟ್​ ದರ ಕನಿಷ್ಠ 8.76 ಲಕ್ಷ ರೂ.ನಿಂದ ಗರಿಷ್ಠ 70 ಲಕ್ಷ ರೂ. ನಿಗದಿಯಾಗಿದೆ. ಫಿಫಾ ಹಂತ ಹಂತವಾಗಿ ಬಿಡುಗಡೆಯಾಗಿರುವ ಎಲ್ಲ ಟಿಕೆಟ್​ಗಳು ಈಗಾಗಲೆ ಬಹುತೇಕ ಮಾರಾಟವಾಗಿದ್ದು, ಕಾಳಸಂತೆಯಲ್ಲೂ ದೊಡ್ಡ ಬೆಲೆಗೆ ಮಾರಾಟವಾಗುತ್ತಿವೆ. ಓರ್ವ ವ್ಯಕ್ತಿಗೆ ಪಂದ್ಯವೊಂದರ ಗರಿಷ್ಠ 4 ಟಿಕೆಟ್​ ಮತ್ತು ಒಟ್ಟಾರೆ ಟೂರ್ನಿಯ 40 ಟಿಕೆಟ್​ಗಳನ್ನು ಮಾತ್ರ ವಿತರಿಸಲಾಗುತ್ತದೆ ಎಂದು ಫಿಫಾ ತಿಳಿಸಿದೆ. 
2ನೇ ಶ್ರೀಮಂತ ವಿಶ್ವಕಪ್​
ಕಳೆದ ಸಲದ ಕತಾರ್​ ವಿಶ್ವಕಪ್​ ಈಗಾಗಲೆ ಅತ್ಯಂತ ಆಗರ್ಭ ಶ್ರೀಮಂತ ಟೂರ್ನಿಯಾಗಿ ಇತಿಹಾಸ ಸೇರಿದೆ. ಈ ಸಲದ ವಿಶ್ವಕಪ್​ 2ನೇ ಶ್ರೀಮಂತ ಟೂರ್ನಿ ಎನಿಸಲಿದೆ. 3 ದೇಶಗಳ ಜತೆಯಾಗಿ ಟೂರ್ನಿ ಆಯೋಜಿಸುತ್ತಿರುವುದರಿಂದ ಈ ಸಲದ ನಿಖರ ವೆಚ್ಚ ಸ್ಪಷ್ಟವಾಗಿಲ್ಲ. ಆದರೆ ಅಂದಾಜು 1,14,383 ಕೋಟಿ ರೂ. (12 ಶತಕೋಟಿ ಡಾಲರ್​) ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ. ಇದರಲ್ಲಿ 16 ಕ್ರೀಡಾಂಗಣಗಳ ನವೀಕರಣ ಕೆಲಸದ ಜತೆಗೆ ಆತಿಥೇಯ ನಗರಗಳ ಮೂಲಸೌಕರ್ಯ ಅಭಿವೃದ್ಧಿ, ತಂಡ-ಕ್ಲಬ್​ಗಳಿಗೆ ಹಂಚಲಾಗುವ ಬಹುಮಾನ ಮೊತ್ತ ಎಲ್ಲವೂ ಸೇರಿದೆ. ಈ ಪೈಕಿ ಫಿಫಾ ಟೂರ್ನಿ ಆಯೋಜನೆಗಾಗಿ 36,244 ಕೋಟಿ ರೂ. ವ್ಯಯಿಸುತ್ತಿದೆ. ಭದ್ರತೆ ಮತ್ತಿತರ ಕಾರ್ಯಚರಣೆ ವೆಚ್ಚ 10,492 ಕೋಟಿ ರೂ. ಆಗಿದೆ. ಆತಿಥೇಯ ದೇಶಗಳು ಒಟ್ಟು 85,803 ಕೋಟಿ ರೂ. ವ್ಯಯಿಸಿವೆ. ಈ ಬಾರಿ ಟೂರ್ನಿಗಾಗಿ ಯಾವುದೇ ಕ್ರೀಡಾಂಗಣವನ್ನು ಹೊಸದಾಗಿ ಕಟ್ಟಲಾಗಿಲ್ಲ. ಮೊದಲೇ ಇದ್ದ ಖಾಸಗಿ&ಸರ್ಕಾರಿ ಸ್ಟೇಡಿಯಂಗಳನ್ನು ಆಧುನೀಕರಿಸಲಾಗಿದೆ. ಆಸನ ಸಂಖ್ಯೆ ಏರಿಕೆ, ರ್ಟ್​ಗ್ರಾಸ್​, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಇದರಲ್ಲಿ ಸೇರಿವೆ.
ಬಹುಮಾನಕ್ಕೆ 6,935 ಕೋಟಿ ರೂ.
ಫಿಫಾ ಈ ಬಾರಿ ಟೂರ್ನಿಯ ಬಹುಮಾನ ಮೊತ್ತಕ್ಕಾಗಿ 6,935 ಕೋಟಿ ರೂ. (727 ದಶಲಕ್ಷ ಡಾಲರ್​) ಖರ್ಚು ಮಾಡಲಿದೆ. ಈ ಪೈಕಿ 6,247 ಕೋಟಿ ರೂ. (655 ದಶಲಕ್ಷ ಡಾಲರ್​) ಟೂರ್ನಿಯಲ್ಲಿ ಆಡುವ 48 ತಂಡಗಳಿಗೆ ಹಂಚಿಕೆಯಾಗಲಿದ್ದು, ಚಾಂಪಿಯನ್​ ತಂಡ 477 ಕೋಟಿ ರೂ. (50 ದಶಲಕ್ಷ ಡಾಲರ್​) ಪಡೆಯಲಿದೆ. ಇನ್ನು ಟೂರ್ನಿಯಲ್ಲಿ ಆಡಲು ಆಟಗಾರರನ್ನು ಬಿಟ್ಟುಕೊಟ್ಟಿರುವ ವಿವಿಧ ದೇಶಗಳ ಫುಟ್​ಬಾಲ್​ ಕ್ಲಬ್​ಗಳಿಗೆ ಒಟ್ಟಾರೆ 3,385 ಕೋಟಿ ರೂ. ಹಂಚಿಕೆಯಾಗಲಿದೆ. ಪ್ರತಿ ಆಟಗಾರನಿಗೆ ದಿನಕ್ಕೆ 4.76 ಲಕ್ಷ ರೂ.ಯಂತೆ ಕ್ಲಬ್​ಗಳಿಗೆ ಹಣ ಲಭಿಸಲಿದೆ. ಇದರನ್ವಯ ಆಟಗಾರನೊಬ್ಬ ಫೈನಲ್​ ತಲುಪಿದರೆ ಆತನ ಕ್ಲಬ್​ಗೆ ಗರಿಷ್ಠ 2.72 ಕೋಟಿ ಸಿಗಲಿದೆ.
ಫಿಫಾಗೆ 1,23,906 ಕೋಟಿ ರೂ. ಆದಾಯ ನಿರೀಕ್ಷೆ
2026ರ ಫಿಫಾ ವಿಶ್ವಕಪ್​ ಟೂರ್ನಿಯಿಂದ ಫಿಫಾ ಒಟ್ಟಾರೆ 1,23,906 ಕೋಟಿ ರೂ. (13 ಶತಕೋಟಿ ಡಾಲರ್​) ಆದಾಯದ ನಿರೀಕ್ಷೆ ಹೊಂದಿದೆ. ಈ ಪೈಕಿ ಟೂರ್ನಿಯ ಸಮಯದಲ್ಲೇ 85,737 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಪಂದ್ಯಗಳ ಪ್ರಸಾರ ಹಕ್ಕು ಮಾರಾಟದಿಂದಲೇ ಫಿಫಾ, ಬರೋಬ್ಬರಿ 38,104 ಕೋಟಿ ರೂ. ಆದಾಯ ಗಳಿಸಲಿದೆ. ಟಿಕೆಟ್​ ಮಾರಾಟದಿಂದ ಸುಮಾರು 28,577 ಕೋಟಿ ರೂ. ಆದಾಯದ ನಿರೀಕ್ಷೆ ಇದೆ. ಪ್ರಾಯೋಜಕತ್ವದಿಂದ 26,674 ಕೋಟಿ ರೂ. ಆದಾಯ ಗಳಿಸಲಿದೆ. ಕಳೆದ 2022ರ ಕತಾರ್​ ವಿಶ್ವಕಪ್​ನಿಂದ ಫಿಫಾ 72,115 ಕೋಟಿ ರೂ. ಆದಾಯ ಗಳಿಸಿದ್ದು ಹಾಲಿ ದಾಖಲೆಯಾಗಿದೆ. ಈ ಬಾರಿ ಪಂದ್ಯ, ತಂಡಗಳ ಸಂಖ್ಯೆ ಏರಿಕೆಯಿಂದ ಆದಾಯವೂ ಹೆಚ್ಚುವುದು ಖಚಿತವಾಗಿದೆ.
ಪ್ರತಿ ತಂಡಕ್ಕೆ ಕನಿಷ್ಠ 100 ಕೋಟಿ ರೂ.!
ಈ ಬಾರಿ ವಿಶ್ವಕಪ್​ನಲ್ಲಿ ಆಡುವ ಎಲ್ಲ 48 ತಂಡಗಳು ಕನಿಷ್ಠ 100 ಕೋಟಿ ರೂ. ಪಡೆಯಲಿವೆ. ಯಾಕೆಂದರೆ ಟೂರ್ನಿಯ ಲೀಗ್​ ಹಂತದಲ್ಲಿ ಹೊರಬೀಳುವ ತಂಡಕ್ಕೂ 86 ಕೋಟಿ ರೂ. ಬಹುಮಾನ ಸಿಗಲಿದೆ. ಇನ್ನು ಟೂರ್ನಿಯ ಪೂರ್ವಸಿದ್ಧತೆಗಾಗಿ ಈಗಾಗಲೆ ಎಲ್ಲ 48 ತಂಡಗಳಿಗೆ ತಲಾ 14 ಕೋಟಿ ರೂ. ವಿತರಿಸಲಾಗಿದೆ. 
ದಾಖಲೆ ಬಿಯರ್​ ಮಾರಾಟ ನಿರೀಕ್ಷೆ
ಫಿಫಾ ವಿಶ್ವಕಪ್​ ಬಂದರೆ ಸಹಜವಾಗಿಯೇ ಬಿಯರ್​ ಮಾರಾಟ ಏರಿಕೆಯಾಗುತ್ತದೆ. ಪ್ರತಿ ಅಭಿಮಾನಿಯೂ ಪಂದ್ಯ ವೀಸುವ ವೇಳೆ ಕೈಯಲ್ಲೊಂದು ಬಿಯರ್​ ಬಾಟಲಿ ಹಿಡಿದುಕೊಳ್ಳಲು ಇಷ್ಟಪಡುವುದು ಇದಕ್ಕೆ ಕಾರಣ. ಈ ಬಾರಿ ವಿಶ್ವಕಪ್​ ಸಮಯದಲ್ಲಿ ವಿಶ್ವದೆಲ್ಲೆಡೆ 100 ಕೋಟಿ ಪಿಂಟ್​ ಬಿಯರ್​ ಮಾರಾಟವಾಗುವ ನಿರೀಕ್ಷೆ ಇದೆ. ಕಳೆದ ಬಾರಿ ಕತಾರ್​ ವಿಶ್ವಕಪ್​ ವೇಳೆ ಸ್ಟೇಡಿಯಂನೊಳಗೆ ಬಿಯರ್​ ಮಾರಾಟ ನಿಷೇಧಿಸಲಾಗಿತ್ತು. ಉತ್ತರ ಅಮೆರಿಕದಲ್ಲಿ ಇತ್ತೀಚೆಗೆ ಕುಸಿತ ಕಂಡಿದ್ದ ಬಿಯರ್​ ಮಾರಾಟಕ್ಕೆ ವಿಶ್ವಕಪ್​ ಹುರುಪು ತುಂಬುವ ನಿರೀಕ್ಷೆ ಇದೆ. ಹಾಲಿ ಐಪಿಎಲ್​ವರೆಗೆ ಆರ್​ಸಿಬಿ ಒಡೆತನ ಹೊಂದಿದ್ದ ಡಿಯಾಜಿಯೋ ಕಂಪನಿ, ಟೂರ್ನಿಯ ಅಧಿಕೃತ ಬಿಯರ್​ ಮಾರಾಟ ಪಾಲುದಾರನಾಗಿದೆ. 
ಮಿರುಗುವ ಚಿನ್ನದ ಟ್ರೋಫಿ
ಫಿಫಾ ವಿಶ್ವಕಪ್​ ವಿಜೇತರಿಗೆ ಚಿನ್ನದ ಮಿರುಗುವ ಟ್ರೋಫಿಯನ್ನು ನೀಡಲಾಗುತ್ತದೆ. ಇದು 6.175 ಕೆಜಿ ಭಾರವಿದ್ದು, ಇದರಲ್ಲಿ 4927 ಗ್ರಾಂ 18 ಕ್ಯಾರೆಟ್​ ಚಿನ್ನವಿದೆ. 36.8 ಸೆಂ.ಮೀ. ಎತ್ತರ ಮತ್ತು 12.5 ಸೆಂ.ಮೀ ತಳವ್ಯಾಸ ಹೊಂದಿರುವ ಟ್ರೋಫಿಯ ಮೌಲ್ಯ ಸುಮಾರು 7 ಕೋಟಿ ರೂ. ಆಗಿದೆ. ಆದರೆ ಟೂರ್ನಿಯ ಪ್ರತಿಷ್ಠೆ ಮತ್ತು ಇತಿಹಾಸವನ್ನು ಪರಿಗಣಿಸಿ ಇದರ ಮಾರುಕಟ್ಟೆ ಬೆಲೆ 191 ಕೋಟಿ ರೂ. ಎನ್ನಬಹುದು ಎಂಬುದು ತಜ್ಞರ ಅಭಿಪ್ರಾಯ. ಈಗಿನ ಟ್ರೋಫಿಯನ್ನು 1974ರ ಆವೃತ್ತಿಯಿಂದ ನೀಡಲಾಗುತ್ತಿದೆ. ಅದಕ್ಕೆ ಮುನ್ನ 1930ರಿಂದ 1970ರವರೆಗೆ ವಿಶ್ವಕಪ್​ ವಿಜೇತರಿಗೆ ಜೂಲ್ಸ್​ ರಿಮೆಟ್​ ಟ್ರೋಫಿ ಎಂಬ ರೋಲಿಂಗ್​ ಟ್ರೋಫಿ ನೀಡಲಾಗುತ್ತಿತ್ತು. 1970ರಲ್ಲಿ ಬ್ರೆಜಿಲ್​ ತಂಡ 3ನೇ ಬಾರಿ ವಿಶ್ವಕಪ್​ ಗೆದ್ದಾಗ ಟ್ರೋಫಿಯನ್ನು ಅದಕ್ಕೆ ಶಾಶ್ವತವಾಗಿ ನೀಡಲಾಯಿತು. ಬಳಿಕ ಇಟಲಿಯ ವಿನ್ಯಾಸಕ ಸಿಲ್ವಿಯೋ ಗ್ಯಾಜಾನಿಗಾ ರೂಪಿಸಿರುವ ಈಗಿನ ಟ್ರೋಫಿಯ ಪ್ರತಿಕೃತಿಯನ್ನಷ್ಟೇ ವಿಜೇತರಿಗೆ ನೀಡಲಾಗುತ್ತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net