ಫೋರ್ಚುಗಲ್​ಗೆ ಒಂದೇ ಒಂದು ಟೈಟಲ್​ ಸಿಕ್ಕಿರಲಿಲ್ಲ! ನನ್ನಿಂದ 3 ಟ್ರೋಫಿ ಮುಡಿಗೇರಿದೆ: ರೊನಾಲ್ಡೊ ಭಾವುಕ ನುಡಿ ​

ಫುಟ್ಬಾಲ್​ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೊ
ಫುಟ್ಬಾಲ್​ ದಂತಕಥೆ ಕ್ರಿಸ್ಟಿಯಾನೋ ರೊನಾಲ್ಡೊ
Published on

ಪ್ರಮುಖ ಮುಖ್ಯಾಂಶಗಳು

  • 16ರ ರೌಂಡ್​ ಪಂದ್ಯದಲ್ಲಿ ಸ್ಪೇನ್​ ಎದುರು ಸೋತ ಪೋರ್ಚುಗಲ್​
  • ಇದೇ ನನ್ನ ಕೊನೆಯ ವಿಶ್ವಕಪ್​ ಎಂದ ಫುಟ್ಬಾಲ್​ ದಂತಕಥೆ
  • ನಾನು ಬರುವ ಮುನ್ನ ಪೋರ್ಚುಗಲ್​ ಒಂದೇ ಒಂದು ಕಪ್​ ಗೆದ್ದಿರಲಿಲ್ಲ
Cristiano Ronaldo: ಫಿಫಾ ವಿಶ್ವಕಪ್‌ನ 16ರ ಸುತ್ತಿನಲ್ಲಿ ಸ್ಪೇನ್ ಎದುರು 1-0 ಅಂತರದಿಂದ ಸೋಲುಂಡ ಪೋರ್ಚುಗಲ್​, ಇದೀಗ ಮೆಗಾ ಟೂರ್ನಿಯಿಂದಲೇ ಹೊರಬಿದ್ದಿದೆ. ತಮ್ಮ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗದ ಬೇಸರದಲ್ಲಿ ಕಣ್ಣೀರಿಟ್ಟ ಫುಟ್ಬಾಲ್​ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ, ಇದೇ ನನ್ನ ಕೊನೆಯ ವಿಶ್ವಕಪ್​ ಎಂಬ ಮಾತನ್ನು ಮತ್ತೊಮ್ಮೆ ಅಭಿಮಾನಿಗಳಿಗೆ ನೆನಪಿಸಿದರು. 
ಪಂದ್ಯ ಮುಗಿದ ಬಳಿಕ ಮಾತನಾಡಿದ ರೊನಾಲ್ಡೊ, ಈ ರೀತಿ ವಿಶ್ವಕಪ್‌ನಿಂದ ಹಿಂದೆ ಸರಿದಿರುವುದು ತುಂಬಾ ದುಃಖ ತಂದಿದೆ. ವಿಶ್ವಕಪ್ ಟ್ರೋಫಿ ಗೆಲ್ಲಲು ನನ್ನಿಂದ ಏನೆಲ್ಲ, ಎಷ್ಟೆಲ್ಲ ಸಾಧ್ಯವೋ ಅಷ್ಟು ಪ್ರಯತ್ನಿಸಿದೆ. ಆದರೆ, ಕಡೆಗೂ ಆಗಲಿಲ್ಲ. ಇದು ನನ್ನ ಕೊನೆಯ ವಿಶ್ವಕಪ್ ಅನ್ನೋದು ನಿಜ. ನಾನು ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ತರಾತುರಿಯಲ್ಲಿ ನಿವೃತ್ತಿಯನ್ನು ಘೋಷಿಸುತ್ತಿಲ್ಲ. ಈ ವಿಷಯದಲ್ಲಿ ನಾನು ಯಾವುದೇ ಆತುರದ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂದರು.
ನಾನು ಬರೋವವರೆಗೂ ಪೋರ್ಚುಗಲ್​ ಬಳಿ ಒಂದೇ ಒಂದು ಟೈಟಲ್​ ಇರಲಿಲ್ಲ. 2016ರಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್, 2019 ಮತ್ತು 2025 ರಲ್ಲಿ UEFA ನೇಷನ್ಸ್ ಲೀಗ್‌ಗಳಲ್ಲಿ ಒಟ್ಟಿಗೆ ಟ್ರೋಫಿ ಎತ್ತಿಹಿಡಿದಿದ್ದೇವೆ. ಅದಕ್ಕೂ ಮೊದಲು ಒಂದೂ ಟ್ರೋಫಿಯು ಈ ತಂಡಕ್ಕೆ ಸಿಕ್ಕಿರಲಿಲ್ಲ. ನಾನು ನನ್ನ ತಂಡಕ್ಕೆ ಮೂರು ಪ್ರಶಸ್ತಿಗಳನ್ನು ಗೆಲ್ಲಿಸಿಕೊಟ್ಟಿದ್ದೇನೆ. ನನ್ನ ಅಭಿಪ್ರಾಯದಲ್ಲಿ, ನಮ್ಮ ತಂಡವು ಚೆನ್ನಾಗಿ ಆಡಿದೆ. ಫಲಿತಾಂಶ ಏನೇ ಇರಬಹುದು. ಅಂತಿಮವಾಗಿ ಇದು ಫುಟ್ಬಾಲ್ ಎಂದು ಭಾವುಕರಾಗಿ ಮಾತನಾಡಿದರು,(ಏಜೆನ್ಸೀಸ್). 

ಪಂದ್ಯದ ವಿವರ

ಪಂದ್ಯದ ನಿಗದಿತ 90 ನಿಮಿಷಗಳವರೆಗೆ ಎರಡೂ ತಂಡಗಳು ಯಾವುದೇ ಗೋಲು ಬಾರಿಸದೆ ಸಮಬಲ ಕಾಯ್ದುಕೊಂಡಿತ್ತು. ಆದರೆ, ಹೆಚ್ಚುವರಿ ಸಮಯದಲ್ಲಿ ಸ್ಪೇನ್ ರೊನಾಲ್ಡೊ ಪಡೆಗೆ ಬಿಗ್ ಶಾಕ್​ ನೀಡಿತು. 85ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಮೈಕೆಲ್ ಮೆರಿನೋ, ಸ್ಪೇನ್​ ಪರ ಮಿಂಚಿದರು. ಕೇವಲ ಐದೇ ನಿಮಿಷಗಳಲ್ಲಿ ಪಂದ್ಯದ ದಿಕ್ಕನೇ ಸಂಪೂರ್ಣವಾಗಿ ಬದಲಿಸಿದರು.
ಇಂಜುರಿ ಟೈಮ್‌ನ ಮೊದಲ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಅವಕಾಶವನ್ನು ಬಳಸಿಕೊಂಡ ಸ್ಪೇನ್ ಗೆಲುವಿಗೆ ಹತ್ತಿರವಾಯಿತು. ಫೆರಾನ್ ಟೊರೆಸ್ ನೀಡಿದ ಅತ್ಯುತ್ತಮ ಪಾಸ್ ಅನ್ನು ಗೋಲಿನತ್ತ ಹೊಡೆದ ಮೆರಿನೋ, ಸ್ಪೇನ್ ಪಾಲಿಗೆ ವಿಜಯದ ಶಿಲ್ಪಿಯಾಗಿ ಹೊರಹೊಮ್ಮಿದರು. ಈ ಟೂರ್ನಿಯಲ್ಲಿ ಇದುವರೆಗೆ ಒಂದೂ ಗೋಲು ಬಿಟ್ಟುಕೊಡದ ತನ್ನ ಅಜೇಯ ದಾಖಲೆಯನ್ನು ಸ್ಪೇನ್ ಈ ಪಂದ್ಯದಲ್ಲೂ ಮುಂದುವರಿಸಿದ್ದು ಗಮನಾರ್ಹ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net