FIFA WorldCup: 32ರ ಘಟ್ಟದಲ್ಲೇ ಹೊರಬಿದ್ದ ಜರ್ಮನಿ; ಪ್ರಿ ಕ್ವಾರ್ಟರ್​ಫೈನಲ್​ಗೇರಿದ ಪರಾಗ್ವೆ

FIFA WorldCup: 32ರ ಘಟ್ಟದಲ್ಲೇ ಹೊರಬಿದ್ದ ಜರ್ಮನಿ; ಪ್ರಿ ಕ್ವಾರ್ಟರ್​ಫೈನಲ್​ಗೇರಿದ ಪರಾಗ್ವೆ
FIFA WorldCup: 32ರ ಘಟ್ಟದಲ್ಲೇ ಹೊರಬಿದ್ದ ಜರ್ಮನಿ; ಪ್ರಿ ಕ್ವಾರ್ಟರ್​ಫೈನಲ್​ಗೇರಿದ ಪರಾಗ್ವೆ
Published on
ಬೋಸ್ಟನ್​: ಪೆನಾಲ್ಟಿ ಶೂಟೌಟ್​ನಲ್ಲಿ ಪರಾಗ್ವೆ ಗೋಲು ಕೀಪರ್​ ಒರ್ಲ್ಯಾಂಡೊ ಗಿಲ್​ ತೋರಿದ ಅಮೋಘ ನಿರ್ವಹಣೆ ಎದುರು ಮುಗ್ಗರಿಸಿದ 4 ಬಾರಿಯ ಚಾಂಪಿಯನ್​ ಜರ್ಮನಿ ತಂಡ ಫಿಫಾ ವಿಶ್ವಕಪ್​ (FIFA WorldCup) 23ನೇ ಆವೃತ್ತಿಯಲ್ಲಿ 32ರ ಘಟ್ಟದಲ್ಲೇ ಹೊರಬಿದ್ದಿದೆ. 12 ವರ್ಷಗಳ ಬಳಿಕ ನಾಕೌಟ್​ ಹಂತಕ್ಕೇರಿದ್ದ ಜರ್ಮನಿ, ಸಡನ್​ ಡೆತ್​ನಲ್ಲಿ 3-4ರಿಂದ ಪರಾಭವಗೊಂಡಿತು. 16 ವರ್ಷಗಳ ಬಳಿಕ ವಿಶ್ವಕಪ್​ಗೆ ಮರುಪ್ರವೇಶ ಪಡೆದಿದ್ದ ಪರಾಗ್ವೆ ಪ್ರಿ ಕ್ವಾರ್ಟರ್​ಫೈನಲ್​ ಹಂತಕ್ಕೇರಿ ಇತಿಹಾಸ ನಿರ್ಮಿಸಿದ್ದು, ಅಂತಿಮ 8ರ ಘಟ್ಟಕ್ಕೇರಲು ಫ್ರಾನ್ಸ್​ ಅಥವಾ ಸ್ವೀಡನ್​ ವಿರುದ್ಧ ಸೆಣಸಲಿದೆ.
ಭಾರತೀಯ ಕಾಲಮಾನ ಪ್ರಕಾರ ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಜೂಲಿಯೊ ಎನ್ಸಿಸೊ 42ನೇ ನಿಮಿಷದಲ್ಲಿ ಹೆಡರ್​ ಮೂಲಕ ಪರಾಗ್ವೆಗೆ ಮುನ್ನಡೆ ಒದಗಿಸಿದರೆ, 54ನೇ ನಿಮಿಷದಲ್ಲಿ ಕಾಯ್​ ಹಾವರ್ಟ್ಜ್​ ಜರ್ಮನಿಗೆ ಸಮಬಲ ಒದಗಿಸಿದರು. ಬಳಿಕ ಪಂದ್ಯ ಹೆಚ್ಚುವರಿ ಸಮಯದಲ್ಲೂ 1-1 ಸಮಬಲದಲ್ಲಿ ಕೊನೆಗೊಂಡು ಶೂಟೌಟ್​ಗೆ ವಿಸ್ತರಿಸಲ್ಪಟ್ಟಿತು. ಶೂಟೌಟ್​ನಲ್ಲೂ ಮೊದಲ 5 ಹೊಡೆತಗಳಲ್ಲಿ ಉಭಯ ತಂಡಗಳು 3-3 ಸಮಬಲ ಸಾಧಿಸಿದವು. ನಂತರದ ಮೊದಲ ಸಡನ್​ಡೆತ್​ನಲ್ಲಿ ಜೊನಾಥನ್​ ತಾಹ್​ ಚೆಂಡನ್ನು ಗೋಲು ಪೆಟ್ಟಿಗೆಯ ಹೊರಗೆ ಒದ್ದರೆ, ಜೋಸ್​ ಕ್ಯಾನೆಲ್​ ಜರ್ಮನಿ ಗೋಲು ಕೀಪರ್​ ಮ್ಯಾನ್ಯುಯೆಲ್​ ನ್ಯೂಯೆರ್​ರನ್ನು ವಂಚಿಸಿ ಪರಾಗ್ವೆಗೆ ಗೆಲುವು ನೀಡಿದರು. 2002ರ ವಿಶ್ವಕಪ್​ನ 16ರ ಟ್ಟದಲ್ಲಿ ಜರ್ಮನಿ ವಿರುದ್ಧವೇ 0-1ರಿಂದ ಸೋತು ಹೊರಬಿದ್ದಿದ್ದ ಪರಾಗ್ವೆ 24 ವರ್ಷಗಳ ಬಳಿಕ ಸೇಡು ತೀರಿಸಿಕೊಂಡಿತು.

ಫಿಫಾ ರ್ಯಾಂಕಿಂಗ್​ನಲ್ಲಿ 12ನೇ ಸ್ಥಾನದಲ್ಲಿರುವ ಜರ್ಮನಿ, 34ನೇ ರ್ಯಾಂಕ್​ನ ಪರಾಗ್ವೆ ಎದುರು ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಲು ವಿಲವಾಯಿತು. ಶೂಟೌಟ್​ನಲ್ಲಿ ಒರ್ಲ್ಯಾಂಡೊ ಗಿಲ್​ 2 ಹೊಡೆತಗಳನ್ನು ತಡೆಯುವಲ್ಲಿ ಯಶಸ್ವಿಯಾದರು. ಪರಾಗ್ವೆ ಈ ಹಿಂದೆ ವಿಶ್ವಕಪ್​ನಲ್ಲಿ ಆಡಿದ 5 ನಾಕೌಟ್​ ಪಂದ್ಯಗಳಲ್ಲೂ ಗೋಲು ಗಳಿಸಲು ವಿಫಲವಾಗಿತ್ತು.

ಹೆಚ್ಚುವರಿ ಸಮಯದ 102ನೇ ನಿಮಿಷದಲ್ಲಿ ನಥಾನೀಲ್​ ಬ್ರೌನ್​ರ ಕಾರ್ನರ್​ ಕಿಕ್​ನಲ್ಲಿ ಜೊನಾಥನ್​ ತಾಹ್​ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ವಿಎಆರ್​ ಪರಿಶೀಲನೆಯ ವೇಳೆ 26 ವರ್ಷದ ಕೀಪರ್​ ಒರ್ಲ್ಯಾಂಡೊರನ್ನು ವಲ್ಡಮರ್​ ಆಂಟನ್​ ತಳ್ಳಿದ್ದು ಸ್ಪಷ್ಟವಾಗಿದ್ದರಿಂದ ಅದು ಫೌಲ್​ ಆಗಿ, ಗೋಲು ಅಮಾನ್ಯಗೊಂಡಿತು. ಇದರಿಂದ ಜರ್ಮನಿಗೆ 2-1 ಮುನ್ನಡೆ ಸಿಗಲಿಲ್ಲ.

ಜರ್ಮನಿ ಲೀಗ್​ ಹಂತದಲ್ಲಿ 10 ಗೋಲು ಸಿಡಿಸಿತ್ತು. ಇದೇ ಮೊದಲ ಬಾರಿಗೆ ವಿಶ್ವಕಪ್​ ಆಡಿದ ಒರ್ಲ್ಯಾಂಡೊ, ದಾಖಲೆಯ 5ನೇ ಬಾರಿ ವಿಶ್ವಕಪ್​ ಆಡಿದ ಜರ್ಮನಿ ಗೋಲು ಕೀಪರ್​ ನ್ಯೂಯೆರ್​ಗಿಂತ ಶೂಟೌಟ್​ನಲ್ಲಿ ಗಮನಾರ್ಹ ನಿರ್ವಹಣೆ ಪ್ರದರ್ಶಿಸಿದರು. ಹಾವರ್ಟ್ಜ್​ರ ಮೊದಲ ಪೆನಾಲ್ಟಿ ಕಿಕ್​ಅನ್ನೇ ತಡೆದು ಒರ್ಲ್ಯಾಂಡೊ ಪರಾಗ್ವೆ ಆಟಗಾರರ ವಿಶ್ವಾಸ ಹಿಗ್ಗಿಸಿದ್ದರು.
*1: ಜರ್ಮನಿ ತಂಡ ಫಿಫಾ ವಿಶ್ವಕಪ್​ನಲ್ಲಿ ಮೊದಲ ಬಾರಿ ಪೆನಾಲ್ಟಿ ಶೂಟೌಟ್​ನಲ್ಲಿ ಸೋತಿತು. ಹಿಂದಿನ 4 ಪೆನಾಲ್ಟಿ ಶೂಟೌಟ್​ಗಳಲ್ಲಿ ಗೆದ್ದಿತ್ತು.
*50: ಜರ್ಮನಿ ಕಳೆದ 50 ವರ್ಷಗಳಲ್ಲಿ ಮೊದಲ ಬಾರಿ ಯಾವುದೇ ಟೂರ್ನಿಯ ಶೂಟೌಟ್​ನಲ್ಲಿ ಸೋತಿತು. 1976ರಲ್ಲಿ ಕೊನೆಯದಾಗಿ ಯುರೋಕಪ್​ನಲ್ಲಿ ಜೆಕೋಸ್ಲೋವಾಕಿಯಾ ಎದುರು ಸೋತಿತ್ತು.
*2: ಪರಾಗ್ವೆ ವಿಶ್ವಕಪ್​ನಲ್ಲಿ ಆಡಿದ 2 ಪೆನಾಲ್ಟಿ ಶೂಟೌಟ್​ನಲ್ಲೂ ಗೆದ್ದ ಸಾಧನೆ ಮಾಡಿತು. 2010ರಲ್ಲಿ ಜಪಾನ್​ ಎದುರು ಶೂಟೌಟ್​ನಲ್ಲಿ ಗೆದ್ದಿತ್ತು.
*5: ಪರಾಗ್ವೆ ವಿಶ್ವಕಪ್​ನಲ್ಲಿ 5ನೇ ಬಾರಿ ಮತ್ತು 2010ರ ಬಳಿಕ ಮೊದಲ ಬಾರಿ 16ರ ಟ್ಟಕ್ಕೇರಿದ ಸಾಧನೆ ಮಾಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net