ಸೆನೆಗಲ್ ಎದುರು ಎಂಬಾಪೆ ಪರಾಕ್ರಮ: ಹಾಲಿ ರನ್ನರ್ ಅಪ್ ಫ್ರಾನ್ಸ್ ಶುಭಾರಂಭ

ಸೆನೆಗಲ್ ಎದುರು ಎಂಬಾಪೆ ಪರಾಕ್ರಮ: ಹಾಲಿ ರನ್ನರ್ ಅಪ್ ಫ್ರಾನ್ಸ್ ಶುಭಾರಂಭ
ಸೆನೆಗಲ್ ಎದುರು ಎಂಬಾಪೆ ಪರಾಕ್ರಮ: ಹಾಲಿ ರನ್ನರ್ ಅಪ್ ಫ್ರಾನ್ಸ್ ಶುಭಾರಂಭ
Published on
ನ್ಯೂಜೆರ್ಸಿ: ಹಾಲಿ ರನ್ನರ್ ಅಪ್ ಫ್ರಾನ್ಸ್ ತಂಡ 23ನೇ ಆವೃತ್ತಿಯ ಫಿಫಾ ವಿಶ್ವಕಪ್‌ನಲ್ಲಿ ಅಮೋಘ ಆರಂಭ ಕಂಡಿದ್ದು, 27 ವರ್ಷದ ಕೈಲಿಯಾನ್ ಎಂಬಾಪೆ (66, 90+6ನೇ ನಿಮಿಷ) ಅವಳಿ ಗೋಲುಗಳ ನೆರವಿನಿಂದ ಸೆನೆಗಲ್ ಎದುರು 3-1 ಅಂತರರಿಂದ ಗೆಲುವಿನ ಆರಂಭ ಕಂಡಿದೆ.
ನ್ಯೂ ಜೆರ್ಸಿ ಕ್ರೀಡಾಂಗಣದಲ್ಲಿ ನಡೆದ ಐ ಗುಂಪಿನ ಪಂದ್ಯದ ಮೊದಲಾರ್ಧದ ಗೋಲು ರಹಿತವಾಗಿ ಉಳಿಯಿತು. ಆರಂಭಿಕ 45 ನಿಮಿಷಗಳಲ್ಲಿ 14 ಬಾರಿ ಚೆಂಡಿನೊಂದಿಗೆ ಸಂಪರ್ಕ ಸಾಧಿಸಿದ ಎಂಬಾಪೆ ದ್ವಿತೀಯಾರ್ಧದಲ್ಲಿ ಕೌಶಲ ಮೆರೆದರು. ಪಂದ್ಯದ 66ನೇ ನಿಮಿಷದಲ್ಲಿ ಫ್ರಾನ್ಸ್ ಗೆ ಮುನ್ನಡೆ ನೀಡಿದ ಎಂಬಾಪೆ, ವಿಶ್ವಕಪ್‌ನಲ್ಲಿ ಗರಿಷ್ಠ ಗೋಲು ಗಳಿಸಿದವರ ಪಟ್ಟಿಯಲ್ಲಿ ಬ್ರೆಜಿಲ್ ದಿಗ್ಗಜ ತಾರೆ ಪೀಲೆ (12 ಗೋಲು) ಅವರನ್ನು ಹಿಂದಿಕ್ಕಿದರು.
ನಂತರ 80ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಬ್ರಾಡಿ ಬಾರ್ಕೊಲಾ (82ನೇ ನಿಮಿಷ) ವಿಶ್ವಕಪ್‌ನಲ್ಲಿ ತನ್ನ ಚೊಚ್ಚಲ ಗೋಲು ಗಳಿಸಿ ಫ್ರಾನ್ಸ್ ಮುನ್ನಡೆ ದ್ವಿಗುಣಗೊಳಿಸಿದರು. ಪಂದ್ಯದ ಹೆಚ್ಚುವರಿ ಸಮಯದಲ್ಲಿ ಸೆನೆಗಲ್‌ನ ಇಬ್ರಾಹಿಂ ಮೆಬೇ (90+5) ಫ್ರಾನ್ಸ್ ಗೆಲುವಿನ ಅಂತರ ತಗ್ಗಿಸಿದರು. ಮರು ನಿಮಿಷದಲ್ಲಿ ಮತ್ತೊಂದು ಆಕರ್ಷಕ ಲಾಂಗ್ ರೆಂಜ್ ಗೋಲುಗಳಿಸಿದ ಎಂಬಾಪೆ ಫ್ರಾನ್ಸ್ ನ ಜಯದ ರೂವಾರಿ ಎನಿಸಿದರು.
ಸತತ ಮೂರನೇ ಬಾರಿಗೆ ಪ್ರಶಸ್ತಿ ಸುತ್ತಿಗೇರುವ ವಿಶ್ವಾಸದಲ್ಲಿರುವ ಫ್ರಾನ್ಸ್ ತಂಡ ಫಿಫಾ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿದ್ದು, ಸೆನೆಗಲ್ 16ನೇ ಸ್ಥಾನದಲ್ಲಿದೆ. 80,545 ಪ್ರೇಕ್ಷಕರಿಂದ ತುಂಬಿದ್ದ ಕ್ರೀಡಾಂಗಣದ ಕೆಲ ಆಸನಗಳು ಖಾಲಿ ಉಳಿದಿದ್ದವು. ಡಿಸೆಂಬರ್‌ನಲ್ಲಿ ಕನಿಷ್ಠ 20 ರಿಂದ 58 ಸಾವಿರ ರೂ. ಬೆಲೆ ಹೊಂದಿದ್ದ ಟಿಕೆಟ್ ಬೆಲೆ, ಪಂದ್ಯ ಆರಂಭಕ್ಕೆ 2 ಗಂಟೆಗೆ ಮುನ್ನ 6,512 ಸಾವಿರಕ್ಕೆ ಕುಸಿತ ಕಂಡಿತ್ತು.
"

‘ದೇಶದ ಇತಿಹಾಸಕ್ಕೆ ಮತ್ತಷ್ಟು ಕೊಡುಗೆ ನೀಡುತ್ತಿರುವುದು ಹೆಚ್ಚು ಖುಷಿ ನೀಡಿದೆ. ನಾನು ಫುಟ್‌ಬಾಲ್ ಆಡುವುದನ್ನು ನಿಲ್ಲಿಸಿದ ಬಳಿಕ ದಾಖಲೆಗಳ ಬಗ್ಗೆ ಯೋಚಿಸಲು ಸಮಯ ಸಿಗಲಿದೆ. ಆದರೆ, ಈಗ ಯಾವುದಕ್ಕೆ ನಾವೂ ಆಡುತ್ತಿದ್ದೇವೆ ಎಂಬುದು ಮುಖ್ಯ’

— ಎಂಬಾಪೆ, ಪಂದ್ಯಶ್ರೇಷ್ಠ


ಫ್ರಾನ್ಸ್: 3
ಕೈಲಿಯಾನ್ ಎಂಬಾಪೆ (66, 90+6ನೇ ನಿಮಿಷ)
ಬ್ರಾಡಿ ಬಾರ್ಕೊಲಾ (82)
ಸೆನೆಗಲ್: 1
ಇಬ್ರಾಹಿಂ ಮೆಬೇ (90+5).
58. ಕೈಲಿಯಾನ್ ಎಂಬಾಪೆ ಫ್ರಾನ್ಸ್ ಪರ ಸರ್ವಾಧಿಕ ಅಂತಾರಾಷ್ಟ್ರೀಯ ಗೋಲು ಗಳಿಸಿದ ಒಲಿವರ್ ಗಿರೌಡ್ (57) ದಾಖಲೆ ಮುರಿದರು.
5. ಎಂಬಾಪೆ ವಿಶ್ವಕಪ್‌ನಲ್ಲಿ 5ನೇ ಬಾರಿ ವಿಶ್ವಕಪ್ ಪಂದ್ಯವೊಂದರಲ್ಲಿ ಒಂದಕ್ಕಿಂತ ಹೆಚ್ಚು ಗೋಲು ಬಾರಿಸಿದ ಸಾಧನೆ ಮಾಡಿದರು.
3. ಕೈಲಿಯಾನ್ ಎಂಬಾಪೆ (14) ವಿಶ್ವಕಪ್‌ನಲ್ಲಿ 4ನೇ ಅತಿ ಹೆಚ್ಚು ಗೋಲು ಗಳಿಸಿದ ಗೆರ್ಡ್ ಮುಲ್ಲರ್ (14) ಸಾಧನೆಯನ್ನು ಸರಿಗಟ್ಟಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net