10ನೇ ವಯಸ್ಸಿನಲ್ಲಿ ಅಪರೂಪದ ಕಾಯಿಲೆ: ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿಯ ಸ್ಫೂರ್ತಿದಾಯಕ ಕತೆ! Lionel Messi

ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ
ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ
Published on

ಪ್ರಮುಖ ಮುಖ್ಯಾಂಶಗಳು

  • ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಆಗಮನ
  • GOAT ಇಂಡಿಯಾ ಟೂರ್-2025 ಭಾಗವಾಗಿ ಮೂರು ದಿನಗಳ ಭಾರತ ಪ್ರವಾಸ
  • ಜೀವನ ಏನು ಅನ್ನೋದು ಗೊತ್ತಿಲ್ಲದ ವಯಸ್ಸಿನಲ್ಲಿ ಸಾಕಷ್ಟು ಕಷ್ಟವನ್ನು ಎದುರಿಸಿದ ಮೆಸ್ಸಿ
Lionel Messi : ಭಾರತದಲ್ಲಿ ಈ ದಿನದ ವಿಶೇಷ ಏನೆಂದರೆ ಅರ್ಜೆಂಟೀನಾದ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಆಗಮಿಸಿರುವುದು. ಹೌದು, ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ಮೆಸ್ಸಿ, GOAT ಇಂಡಿಯಾ ಟೂರ್-2025 ಭಾಗವಾಗಿ ಮೂರು ದಿನಗಳ ಭಾರತ ಪ್ರವಾಸಕ್ಕಾಗಿ ಇಂದು(ಡಿ. 13) ಮುಂಜಾನೆ 1.30ರ ಸುಮಾರಿಗೆ ಕೋಲ್ಕತ್ತಾಗೆ ಬಂದಿಳಿದಿದ್ದಾರೆ.
ಅಂದಹಾಗೆ, ತಮ್ಮ ಪುಟ್ಬಾಲ್​ ಕೌಶಲ್ಯದಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿರುವ ಮೆಸ್ಸಿ ಅವರ ಜೀವನದ ಹಾದಿ ಅಷ್ಟೊಂದು ಸುಲಭವಾಗಿರಲಿಲ್ಲ. ಜೀವನ ಏನು ಅನ್ನೋದು ಗೊತ್ತಿಲ್ಲದ ವಯಸ್ಸಿನಲ್ಲಿ ಸಾಕಷ್ಟು ಕಷ್ಟವನ್ನು ಎದುರಿಸಿ ಇಂದು ಉನ್ನತ ಸ್ಥಾನಕ್ಕೇರಿರುವ ಮೆಸ್ಸಿ ಅವರ ಸ್ಫೂರ್ತಿದಾಯಕ ಕತೆ ಇಲ್ಲಿದೆ.
ಮೆಸ್ಸಿ ಅವರು 1987, ಜೂನ್ 24 ರಂದು ಅರ್ಜೆಂಟೀನಾದ ಸಾಂತಾ ಫೆಯ ರೊಸಾರಿಯೋದಲ್ಲಿ ಜನಿಸಿದರು. ಅವರು ತಮ್ಮ ನಾಲ್ಕನೇ ವಯಸ್ಸಿನಲ್ಲಿ ತಮ್ಮ ಮೊದಲ ಕ್ಲಬ್ ಗ್ರಾಂಡೋಲಿಯನ್ನು ಸೇರಿದರು. ನಂತರ ಅವರು ಏಳನೇ ವಯಸ್ಸಿನಲ್ಲಿ ವೆನೆಜಿಯಾ ಓಲ್ಡ್ ಬಾಯ್ಸ್ ಕ್ಲಬ್ ಸೇರಿದರು. ಹತ್ತನೇ ವಯಸ್ಸಿನಲ್ಲಿ, ಅವರಿಗೆ ಬೆಳವಣಿಗೆಯ ಹಾರ್ಮೋನ್ ಕೊರತೆ ಎಂಬ ಅಪರೂಪದ ಹಾರ್ಮೋನ್ ಕೊರತೆ ಇರುವುದು ಪತ್ತೆಯಾಯಿತು, ಇದು ಅವರ ಬೆಳವಣಿಗೆಯನ್ನು ಕುಂಠಿತಗೊಳಿಸಿತು.
ಇದಕ್ಕೆ ಚಿಕಿತ್ಸೆಯಾಗಿ ಅವರು ಪ್ರತಿದಿನ ಬೆಳವಣಿಗೆಯ ಹಾರ್ಮೋನ್ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗಿತ್ತು. ಆದಾಗ್ಯೂ, ಅವುಗಳ ವೆಚ್ಚ ದುಬಾರಿ ಆಗಿತ್ತು. ಅವರ ಕುಟುಂಬ ಹೇಳಿಕೊಳ್ಳುವಷ್ಟು ಆರ್ಥಿಕವಾಗಿ ಪ್ರಬಲವಾಗಿರಲಿಲ್ಲ. ಹೀಗಾಗಿ ದುಬಾರಿ ಚಿಕಿತ್ಸೆಯನ್ನು ಪಡೆಯಲು ಮೆಸ್ಸಿ ಅವರಿಂದ ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಬಾರ್ಸಿಲೋನಾ ಕ್ಲಬ್, ಮೆಸ್ಸಿಗೆ ಸಹಾಯ ಮಾಡಲು ಮುಂದೆ ಬಂದಿತು. ಮೆಸ್ಸಿ ಅವರಿಗೆ ಸಂಪೂರ್ಣ ಚಿಕಿತ್ಸೆಯನ್ನು ಒದಗಿಸಿದರು. ಆದರೆ, ಒಂದು ಷರತ್ತು ಇತ್ತು. ಅದೇನೆಂದರೆ, ತಮ್ಮ ಕ್ಲಬ್ ಸೇರಲು ಒಪ್ಪಂದ ಮಾಡಿಕೊಂಡರು. ಸುಮಾರು ಮೂರು ವರ್ಷಗಳ ಕಾಲ ನಿರಂತರವಾಗಿ ಮೆಸ್ಸಿ ಅವರು ಹಾರ್ಮೋನ್​ ಇಂಜೆಕ್ಷನ್​ ಪಡೆದುಕೊಂಡರು.
ಚಿಕಿತ್ಸೆ ಪಡೆದ ನಂತರ, ಮೆಸ್ಸಿ ಅವರು ಸಾಮಾನ್ಯ ಎತ್ತರಕ್ಕೆ ಬೆಳೆದು ಫುಟ್ಬಾಲ್ ಆಟದಲ್ಲಿ ದಂತಕಥೆಯ ಆಟಗಾರನಾದನು. 13ನೇ ವರ್ಷದಲ್ಲಿ ಬಾರ್ಸಿಲೋನಾ ಕ್ಲಬ್‌ಗೆ ಸೇರಿದ ಮೆಸ್ಸಿ, ಅಲ್ಲಿ 17 ವರ್ಷಗಳ ಕಾಲ ಆಡಿ, 672 ಗೋಲುಗಳೊಂದಿಗೆ ಕ್ಲಬ್‌ನ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರಾದರು.
ಅಂದಹಾಗೆ, ಮೆಸ್ಸಿ ಅವರು ದಾಖಲೆಯ ಎಂಟು ಬಾರಿ ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಮೆಸ್ಸಿ ಅರ್ಜೆಂಟೀನಾ ಪರ ಚಿನ್ನದ ಪದಕ ಗೆದ್ದರು. ಅರ್ಜೆಂಟೀನಾ ನಾಯಕನಾಗಿ 2022ರಲ್ಲಿ ಫಿಫಾ ವಿಶ್ವಕಪ್ ಗೆದ್ದಿರುವುದು ಮೆಸ್ಸಿ ಅವರ ವೃತ್ತಿಜೀವನದಲ್ಲಿ ಸ್ಮರಣೀಯ ಸಾಧನೆಯಾಗಿದೆ.
2025ರಲ್ಲಿ ಇಂಟರ್ ಮಿಯಾಮಿಗೆ ಮೊದಲ MLS ಕಪ್ ಗೆಲ್ಲಿಸಿ, 29 ಗೋಲುಗಳೊಂದಿಗೆ ಗೋಲ್ಡನ್ ಬೂಟ್ ಮತ್ತು ಸತತ ಎರಡನೇ ಬಾರಿ ಎಂವಿಪಿ ಪ್ರಶಸ್ತಿಗೆ ಭಾಜರಾಗಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net