ಮೊದಲು ಸರಿಯಾಗಿ... ಸ್ವಿಟ್ಜರ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ರೆಫರಿಗೆ ಮೆಸ್ಸಿ ಖಡಕ್​ ವಾರ್ನಿಂಗ್​! ವಿಡಿಯೋ ವೈರಲ್​

ಪಂದ್ಯದ ವೇಳೆ ರೆಫರಿ ಜೊತೆ ಮೆಸ್ಸಿ ವಾಗ್ವಾದ
ಪಂದ್ಯದ ವೇಳೆ ರೆಫರಿ ಜೊತೆ ಮೆಸ್ಸಿ ವಾಗ್ವಾದ
Published on

ಪ್ರಮುಖ ಮುಖ್ಯಾಂಶಗಳು

  • ಅರ್ಜೆಂಟೀನಾ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವಿನ ಪಂದ್ಯದಲ್ಲಿ ಘಟನೆ
  • ಮೈದಾನದಲ್ಲೇ ಪಂದ್ಯದ ರೆಫರಿಗೆ ಲಿಯೋನಲ್​ ಮೆಸ್ಸಿ ಎಚ್ಚರಿಕೆ
ನ್ಯೂಯಾರ್ಕ್: 2026ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವಿನ ಪಂದ್ಯದಲ್ಲಿ ಫುಟ್ಬಾಲ್​ ದಂತಕಥೆ ಲಿಯೋನಲ್​ ಮೆಸ್ಸಿ ತಂಡ ರೋಚಕ ಜಯ ಸಾಧಿಸಿತು. ಆದರೆ, ಈ ಮ್ಯಾಚ್​ನಲ್ಲಿ ರೆಫರಿ ಜೊತೆ ಮೈದಾನದಲ್ಲೇ ವಾಗ್ವಾದಕ್ಕಿಳಿದ ಮೆಸ್ಸಿ ನೀಡಿದ ಖಡಕ್​ ಎಚ್ಚರಿಕೆ ಸದ್ಯ ಜಾಲತಾಣಗಳಲ್ಲಿ ವೈರಲ್ ಆಗಿದೆ.  
ಪಂದ್ಯದ ಮೊದಲಾರ್ಧದಲ್ಲಿ ಅರ್ಜೆಂಟೀನಾ ಕ್ಯಾಪ್ಟನ್​ ಲಿಯೋನೆಲ್ ಮೆಸ್ಸಿ ಮತ್ತು ಪೋರ್ಚುಗಲ್ ಮೂಲದ ರೆಫರಿ ಜೊವಾವೊ ಪೆಡ್ರೊ ಪಿನೈರೊ ನಡುವೆ ಮಾತಿನ ಚಕಮಕಿ ನಡೆಯಿತು. ಸ್ವಿಟ್ಜರ್‌ಲ್ಯಾಂಡ್ ತಂಡಕ್ಕೆ ಫ್ರೀ-ಕಿಕ್ ಸಿಕ್ಕಾಗ, ಮೆಸ್ಸಿ ಅರ್ಜೆಂಟೀನಾದ ಡಿಫೆನ್ಸಿವ್​ ವಾಲ್​ ಬಳಿ ನಿಂತಿದ್ದರು. ಈ ವೇಳೆ ನಿಯಮವನ್ನು ನೆನಪಿಸಿದ ರೆಫರಿ, ಸ್ವಲ್ಪ ದೂರ ಜರುಗುವಂತೆ ಹೇಳಿದರು. ಇದಕ್ಕೆ ಕೋಪಗೊಂಡ ಮೆಸ್ಸಿ, ನನ್ನೊಂದಿಗೆ ಸರಿಯಾಗಿ ಮಾತಾಡಿ ಎಂದು ವಾರ್ನಿಂಗ್ ನೀಡಿದರು. 
ನಾನು ನಿಮ್ಮ ಜೊತೆ ಗೌರವದಿಂದಲೇ ಮಾತನಾಡಿದ್ದೇನೆ. ಹೀಗಿದ್ದಮೇಲೆ, ನೀವೂ ಸರಿಯಾಗಿ ಮಾತಾಡಿ ಮತ್ತು ಗೌರವಿಸಿ ಎಂದು ಓಪನ್ ಆಗಿ ಹೇಳಿದರು. ಇದು ಮೈದಾನದಲ್ಲಿದ್ದ ಮೆಸ್ಸಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು. ಕ್ಷಣಮಾತ್ರದಲ್ಲಿ, ರೆಫರಿ ಜೊತೆಗಿನ ಮೆಸ್ಸಿ ವಾಗ್ವಾದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿತು.
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಲಿಯೋನೆಲ್ ಮೆಸ್ಸಿಗೆ ಈ ಪಂದ್ಯದಲ್ಲಿ ಒಂದೂ ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಸ್ವಿಟ್ಜರ್‌ಲ್ಯಾಂಡ್‌ನ ಆಟಗಾರರು ದಿಗ್ಗಜನಿಗೆ ಗೋಲು ಹೊಡೆಯಲು ಅವಕಾಶ ಕೊಡದಂತೆ ತಡೆದಿದ್ದು, ಪರೋಕ್ಷವಾಗಿ ಅರ್ಜೆಂಟೀನಾ ಕ್ಯಾಪ್ಟನ್​ ತೀವ್ರ ನಿರಾಶೆ ಮತ್ತು ಕೋಪಕ್ಕೆ ಕಾರಣವಾಯಿತು.

ರೆಡ್ ಕಾರ್ಡ್

ದ್ವಿತೀಯಾರ್ಧದಲ್ಲಿ ಪಂದ್ಯ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿತು. ಸ್ವಿಟ್ಜರ್‌ಲ್ಯಾಂಡ್‌ನ ಸ್ಟ್ರೈಕರ್ ಬ್ರೀಲ್ ಎಂಬೊಲೊ ಅವರು ಫೌಲ್ ಆದಂತೆ ನಟಿಸಿ ಡೈವ್ ಮಾಡಿದ್ದಕ್ಕಾಗಿ, ವಿಡಿಯೋ ಅಸಿಸ್ಟೆಂಟ್ ರೆಫರಿ (VAR) ಕ್ರಾಸ್​ ಚೆಕ್​ ಮಾಡಿದ ಬೆನ್ನಲ್ಲೇ ರೆಫರಿ ಅವರಿಗೆ ರೆಡ್ ಕಾರ್ಡ್ ತೋರಿಸಲು ಹೇಳಿ, ಅವರನ್ನು ಮೈದಾನದಿಂದ ಹೊರಗಟ್ಟಿದರು. ಇದರಿಂದ ಸ್ವಿಟ್ಜರ್‌ಲ್ಯಾಂಡ್ ತಂಡ 10 ಆಟಗಾರರಿಗೆ ಸೀಮಿತಗೊಳ್ಳಬೇಕಾಯಿತು.

ಎಕ್ಸ್‌ಟ್ರಾ ಟೈಮ್‌ನಲ್ಲಿ ಅರ್ಜೆಂಟೀನಾ ಜಾದೂ

ನಿಗದಿತ 90 ನಿಮಿಷಗಳ ಆಟ ಮುಗಿದಾಗ ಉಭಯ ತಂಡಗಳು 1-1 ಗೋಲುಗಳ ಅಂತರದಲ್ಲಿ ಸಮಬಲ ಸಾಧಿಸಿತು. ಸ್ವಿಟ್ಜರ್‌ಲ್ಯಾಂಡ್ 10 ಆಟಗಾರರೊಂದಿಗೆ ಆಡುತ್ತಿದ್ದರೂ ಅರ್ಜೆಂಟೀನಾಕ್ಕೆ ಕಠಿಣ ಪೈಪೋಟಿ ನೀಡಿತ್ತು. ಆದರೆ, ಪಂದ್ಯ ಹೆಚ್ಚುವರಿ ಸಮಯಕ್ಕೆ ಹೋದಾಗ ಅರ್ಜೆಂಟೀನಾ ಆಟಗಾರರು ಗೆಲುವಿನತ್ತ ಮುಖಮಾಡಿದರು. ಕೆಲವೇ ನಿಮಿಷಗಳ ಅಂತರದಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಗೋಲುಗಳನ್ನು ಬಾರಿಸುವ ಮೂಲಕ ಅರ್ಜೆಂಟೀನಾ ಸ್ವಿಟ್ಜರ್‌ಲ್ಯಾಂಡ್ ತಂಡವನ್ನು ಮಣಿಸಿ, ರೋಚಕ ಜಯಕ್ಕೆ ಸಾಕ್ಷಿಯಾಯಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net