ಸತತ 3ನೇ ಬಾರಿ ಇಟಲಿ ಕೈತಪ್ಪಿದ ಫಿಫಾ ವಿಶ್ವಕಪ್​ ಟಿಕೆಟ್​!

ಸತತ 3ನೇ ಬಾರಿ ಇಟಲಿ ಕೈತಪ್ಪಿದ ಫಿಫಾ ವಿಶ್ವಕಪ್​ ಟಿಕೆಟ್​!
ಸತತ 3ನೇ ಬಾರಿ ಇಟಲಿ ಕೈತಪ್ಪಿದ ಫಿಫಾ ವಿಶ್ವಕಪ್​ ಟಿಕೆಟ್​!
Published on
ಜೆನಿಕಾ (ಬೋಸ್ನಿಯಾ): ನಾಲ್ಕು ಬಾರಿಯ ವಿಶ್ವ ಚಾಂಪಿಯನ್​ ಇಟಲಿ (Italy) ತಂಡ ಸತತ 3ನೇ ಬಾರಿ ಫಿಫಾ ವಿಶ್ವಕಪ್​ಗೆ (Fifa World Cup) ಅರ್ಹತೆ ಪಡೆಯಲು ವಿಫಲವಾಗಿದೆ. ಈ ಬಾರಿ ಫಿಫಾ ವಿಶ್ವಕಪ್​ನಲ್ಲಿ ಆಡುವ ಒಟ್ಟು ತಂಡಗಳ ಸಂಖ್ಯೆ 48ಕ್ಕೆ ಏರಿಕೆಯಾಗಿರುವ ನಡುವೆಯೂ ಇಟಲಿ ಅರ್ಹತೆ ಪಡೆಯದಿರುವುದು ಫುಟ್​ಬಾಲ್​ ಜಗತ್ತಿನ ಅಚ್ಚರಿಯ ಬೆಳವಣಿಗೆಯಾಗಿದೆ.
ಫಿಫಾ ವಿಶ್ವ ರ್ಯಾಂಕಿಂಗ್​ನಲ್ಲಿ ಸದ್ಯ 12ನೇ ಸ್ಥಾನದಲ್ಲಿರುವ ಇಟಲಿ ತಂಡ, ಮಂಗಳವಾರ ನಡೆದ ಯುರೋಪಿಯನ್​ ಅರ್ಹತಾ ಟೂರ್ನಿಯ ಕೊನೆಯ ಪ್ಲೇಆಫ್​ ಪಂದ್ಯದಲ್ಲಿ 66ನೇ ರ್ಯಾಂಕ್​ನ ಬೋಸ್ನಿಯಾ ಮತ್ತು ಹರ್ಜೆಗೋವಿನಾ ದೇಶದ ಎದುರು ಪೆನಾಲ್ಟಿ ಶೂಟೌಟ್​ನಲ್ಲಿ 1-4ರಿಂದ ಪರಾಭವಗೊಂಡಿತು. 

ಪಂದ್ಯದಲ್ಲಿ 15ನೇ ನಿಮಿಷದಲ್ಲೇ ಮುನ್ನಡೆ ಸಾಧಿಸಿದ ಇಟಲಿ, 41ನೇ ನಿಮಿಷದಲ್ಲಿ ಅಲೆಸಾಂಡ್ರೊ ಬಸ್ಟೋನಿ ಕೆಂಪು ಕಾರ್ಡ್​ ಪಡೆದು ಮೈದಾನ ತೊರೆದ ಬಳಿಕ 10 ಆಟಗಾರರೊಂದಿಗೆ ಆಟ ಮುಂದುವರಿಸಿತು. ಬೋಸ್ನಿಯಾ 79ನೇ ನಿಮಿಷದಲ್ಲಿ ಸಮಬಲದ ಗೋಲು ಬಾರಿಸಿ ಪಂದ್ಯವನ್ನು ಪೆನಾಲ್ಟಿ ಶೂಟೌಟ್​ಗೆ ವಿಸ್ತರಿಸಿತು. ಇಟಲಿ ಈ ಮುನ್ನ 2018 ಮತ್ತು 2022ರ ಫಿಫಾ ವಿಶ್ವಕಪ್​ಗೂ ಅರ್ಹತೆ ಗಳಿಸಲು ವಿಫಲವಾಗಿತ್ತು. ಅದಕ್ಕೆ ಮುನ್ನ 1958ರ ವಿಶ್ವಕಪ್​ಗೂ ಅರ್ಹತೆ ಗಳಿಸಿರಲಿಲ್ಲ. ಇಟಲಿ ಈ ಹಿಂದೆ 1934, 1938, 1982 ಮತ್ತು 2006ರಲ್ಲಿ ಫಿಫಾ ವಿಶ್ವಕಪ್​ ಗೆದ್ದಿತ್ತು. 
ಬೋಸ್ನಿಯಾ 2014ರ ಬಳಿಕ ಮತ್ತೊಮ್ಮೆ ಫಿಫಾ ವಿಶ್ವಕಪ್​ ಅರ್ಹತೆ ಸಂಪಾದಿಸಿದೆ. ಯುರೋಪಿಯನ್​ ಪ್ಲೇಆಫ್​ನ ಇತರ ಪಂದ್ಯಗಳಲ್ಲಿ ಸ್ವೀಡನ್​, ಟರ್ಕಿ, ಜೆಕ್​ ಗಣರಾಜ್ಯವೂ ಫಿಫಾ ವಿಶ್ವಕಪ್​ ಅರ್ಹತೆ ಗಳಿಸಿತು. ಯುರೋಪ್​ ಅರ್ಹತಾ ಸುತ್ತಿನ ಕೊನೆಯ 4 ಸ್ಥಾನಗಳಿಗಾಗಿ 8 ತಂಡಗಳು ಪೈಪೋಟಿ ನಡೆಸಿದವು.

ಫಿಫಾ ವಿಶ್ವಕಪ್​ ಜೂನ್​ 11ರಿಂದ ಜುಲೈ 19ರವರೆಗೆ ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾದ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ. 48 ತಂಡಗಳನ್ನು ತಲಾ 4ರಂತೆ 12 ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ರೌಂಡ್​ ರಾಬಿನ್​ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಮತ್ತು 3ನೇ ಸ್ಥಾನ ಪಡೆದ 8 ಅತ್ಯುತ್ತಮ ತಂಡಗಳು ನಾಕೌಟ್​ ಹಂತಕ್ಕೇರಲಿವೆ. 
ಇರಾನ್​ಗೆ ಕೊನೆಯ ಮತ್ತು 48ನೇ ಸ್ಪಾಟ್​
ಬರೋಬ್ಬರಿ ಎರಡೂವರೆ ವರ್ಷಗಳ ಕಾಲ ನಡೆದ ಫಿಫಾ ವಿಶ್ವಕಪ್​ ಟೂರ್ನಿಯ ಅರ್ಹತಾ ಸುತ್ತಿನ ಸಮರ ಕೊನೆಗೂ ಮುಕ್ತಾಯಗೊಂಡಿದ್ದು, ಟೂರ್ನಿಯಲ್ಲಿ ಆಡುವ ಎಲ್ಲ 48 ತಂಡಗಳು ಅಂತಿಮಗೊಂಡಿವೆ. ನಾರ್ಥರ್ನ್​ ಮೆಕ್ಸಿಕೋದ ಮಾಂಟೆರ್ರಿಯಲ್ಲಿ ಮಂಗಳವಾರ ನಡೆದ ಪ್ಲೇಆಫ್​ ಪಂದ್ಯದಲ್ಲಿ ಬೊಲಿವಿಯಾ ಎದುರು 2-1 ಗೋಲುಗಳಿಂದ ಗೆದ್ದ ಇರಾನ್​ ಟೂರ್ನಿಯ 48ನೇ ಹಾಗೂ ಕೊನೆಯ ಸ್ಥಾನವನ್ನು ಒಲಿಸಿಕೊಂಡಿತು. 2023ರ ಸೆಪ್ಟೆಂಬರ್​ 7ರಂದು ಅರ್ಹತಾ ಸುತ್ತಿನ ಪಂದ್ಯಗಳು ಆರಂಭಗೊಂಡಿದ್ದವು.
ಫಿಫಾ ವಿಶ್ವಕಪ್​ ಗುಂಪುಗಳು:
ಎ: ಮೆಕ್ಸಿಕೋ, ಜೆಕ್​ ಗಣರಾಜ್ಯ, ದಣ ಆಫ್ರಿಕಾ, ದಣ ಕೊರಿಯಾ.
ಬಿ: ಕೆನಡಾ, ಬೋಸ್ನಿಯಾ-ಹರ್ಜೆಗೋವಿನಾ, ಕತಾರ್​, ಸ್ವಿರ್ಜಲೆಂಡ್​.
ಸಿ: ಬ್ರೆಜಿಲ್​, ಹೈಟಿ, ಮೊರಾಕೊ, ಸ್ಕಾಟ್ಲೆಂಡ್​.
ಡಿ: ಆಸ್ಟ್ರೆಲಿಯಾ, ಪರಾಗ್ವೆ, ಟರ್ಕಿ, ಅಮೆರಿಕ.
ಇ: ಕುರಾಕಾವೊ, ಈಕ್ವಡಾರ್​, ಜರ್ಮನಿ, ಐವರಿ ಕೋಸ್ಟ್​.
ಎಫ್​​: ನೆದರ್ಲೆಂಡ್​, ಜಪಾನ್​, ಸ್ವೀಡನ್​, ಟುನೀಷಿಯಾ.
ಜಿ: ಬೆಲ್ಜಿಯಂ, ಈಜಿಪ್ಟ್​, ಇರಾನ್​, ನ್ಯೂಜಿಲೆಂಡ್​.
ಎಚ್​: ಕೇಪ್​ ವರ್ಡೆ, ಸೌದಿ ಅರೇಬಿಯಾ, ಸ್ಪೇನ್​, ಉರುಗ್ವೆ.
ಐ: :ಫ್ರಾನ್ಸ್​, ನಾರ್ವೆ, ಸೆನೆಗಲ್​, ಇರಾಕ್​.
ಜೆ: ಅಲ್ಜೀರಿಯಾ, ಅರ್ಜೆಂಟೀನಾ, ಆಸ್ಟ್ರಿಯಾ, ಜೋರ್ಡನ್​.
ಕೆ: ಕೊಲಂಬಿಯಾ, ಜಮೈಕಾ, ಪೋರ್ಚುಗಲ್​, ಉಜ್ಬೇಕಿಸ್ತಾನ.
ಎಲ್​: ಕ್ರೊವೇಷಿಯಾ, ಇಂಗ್ಲೆಂಡ್​, ಘಾನಾ, ಪನಾಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net