ನವದೆಹಲಿಯಲ್ಲೂ ಮೆಸ್ಸಿ ಮೋಡಿ; ಫುಟ್​ಬಾಲ್​ ತಾರೆಗೆ ವಿಶೇಷ ಉಡುಗೊರೆಗಳನ್ನು ನೀಡಿದ ಜಯ್​ ಷಾ!

ಫುಟ್​ಬಾಲ್​ ತಾರೆಗೆ ವಿಶೇಷ ಉಡುಗೊರೆಗಳನ್ನು ನೀಡಿದ ಜಯ್​ ಷಾ!
ಫುಟ್​ಬಾಲ್​ ತಾರೆಗೆ ವಿಶೇಷ ಉಡುಗೊರೆಗಳನ್ನು ನೀಡಿದ ಜಯ್​ ಷಾ!
Published on
ನವದೆಹಲಿ: ಅರ್ಜೆಂಟೀನಾದ ಫುಟ್​ಬಾಲ್​ ಸೂಪರ್​ಸ್ಟಾರ್​ ಲಿಯೋನೆಲ್​ ಮೆಸ್ಸಿ (LIONEL MESSI ) ಅವರ ಭಾರತ ಪ್ರವಾಸದ ಕೊನೇ ದಿನವಾದ ಸೋಮವಾರ ರಾಷ್ಟ್ರ ರಾಜಧಾನಿಯ ಹವಾಮಾನ ವೈಪರೀತ್ಯಗಳಿಂದಾಗಿ ಕಾರ್ಯಕ್ರಮಗಳು ಸ್ವಲ್ಪ ಬದಲಾವಣೆ ಕಂಡವು. ಆದರೂ, ಭಾಗವಹಿಸಿದ ಕಾರ್ಯಕ್ರಮಗಳೆಲ್ಲ ಫುಟ್​ಬಾಲ್​ ಪ್ರೇಮಿಗಳಿಗೆ ಮೋಡಿ ಮಾಡಿದರು. ಮೊದಲ ದಿನ ಕೋಲ್ಕತದ ಕಾರ್ಯಕ್ರಮದಲ್ಲಿ ಗಲಾಟೆ ನಡೆದ ಬಳಿಕ ಕಲಿತ ಪಾಠದಿಂದ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದ ನಡುವೆ, ಹೈದರಾಬಾದ್​ ಮತ್ತು ಮುಂಬೈನಂತೆ ನವದೆಹಲಿಯ ಕಾರ್ಯಕ್ರಮವೂ ಅಚ್ಚುಕಟ್ಟಿನಿಂದ ಸಾಗಿತು. ಸೋಮವಾರ ರಾತ್ರಿಯ ವೇಳೆಗೆ ಮೆಸ್ಸಿ 3 ದಿನಗಳ "ಗೋಟ್​ ಟೂರ್​' ಮುಗಿಸಿ ಭಾರತದಿಂದ ನಿರ್ಗಮಿಸಿದರು.

ಫಿರೋಜ್​ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದ ಸೆಲೆಬ್ರಿಟಿಗಳು, ಕ್ರೀಡಾತಾರೆಯರು ಮತ್ತು ಗಣ್ಯರು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದರೊಂದಿಗೆ, ಸ್ಟೇಡಿಯಂನಲ್ಲಿ ಸೇರಿದ್ದ ುಟ್​ಬಾಲ್​ ಪ್ರೇಮಿಗಳು ಮೆಸ್ಸಿ ಅವರನ್ನು ಮನಸಾರೆ ಕಣ್ತುಂಬಿಕೊಂಡು ಆನಂದಿಸಿದರು. ಕಾರ್ಯಕ್ರಮದಲ್ಲಿ ಸ್ಪ್ಯಾನಿಷ್​ ಭಾಷೆಯಲ್ಲಿ ಕಿರು ಭಾಷಣವನ್ನೂ ಮಾಡಿದ ಮೆಸ್ಸಿ, "ಗ್ರೇಸಿಯಸ್​ ದೆಹಲಿ, ಹಸ್ತಾ ಪ್ರಂಟೊ' ಅಂದರೆ "ಧನ್ಯವಾದಗಳು ದೆಹಲಿ, ಮತ್ತೊಮ್ಮೆ ಇಲ್ಲಿಗೆ ಬರುವೆ' ಎಂದರು. 7/7 ಸೆಲೆಬ್ರಿಟಿ ಪಂದ್ಯವನ್ನು ವೀಸಿದ ಮೆಸ್ಸಿ, ಮಕ್ಕಳೊಂದಿಗೆ ಫುಟ್​ಬಾಲ್​ ಕೂಡ ಆಡಿದರು.

ಸ್ಟೇಡಿಯಂಗೆ ಆಗಮಿಸಿದ್ದ 25 ಸಾವಿರ ಜನರಲ್ಲಿ ಬಹುತೇಕರು ಮೆಸ್ಸಿ ಅವರ 10 ನಂಬರ್​ನ ಅರ್ಜೆಂಟೀನಾ ಜೆರ್ಸಿಯನ್ನು ಧರಿಸಿ ಆಗಮಿಸಿದ್ದರು. ಮಿನರ್ವ ಅಕಾಡೆಮಿಯ ಫುಟ್​ಬಾಲ್​ ತಂಡವನ್ನು ಸನ್ಮಾನಿಸಿದ ಮೆಸ್ಸಿ, ಭಾರತ ತಂಡದ ಮಾಜಿ ನಾಯಕ ಬೈಚುಂಗ್​ ಭುಟಿಯಾ ಕುಟುಂಬದೊಂದಿಗೆ ಪೋಸ್​ ಕೂಡ ನೀಡಿದರು. ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಐಸಿಸಿ ಅಧ್ಯಕ್ಷ ಜಯ್​ ಷಾ, ದೆಹಲಿ ಕ್ರಿಕೆಟ್​ ಸಂಸ್ಥೆ ಅಧ್ಯಕ್ಷ ರೋಹನ್​ ಜೇಟ್ಲಿ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಮೆಸ್ಸಿಗೆ ಟಿ20 ವಿಶ್ವಕಪ್​ ಟಿಕೆಟ್​, ಬ್ಯಾಟ್​, ಜೆರ್ಸಿ ಉಡುಗೊರೆ
ಭಾರತ ಪ್ರವಾಸದ ಕೊನೇ ದಿನ ಮೆಸ್ಸಿ ಅವರನ್ನು ಭೇಟಿಯಾದ ಐಸಿಸಿ ಚೇರ್ಮನ್​ ಜಯ್​ ಷಾ (jay shah), 2026ರ ಟಿ20 ವಿಶ್ವಕಪ್​ನಲ್ಲಿ ಆತಿಥೇಯ ಭಾರತ ತಂಡ ಆಡಲಿರುವ ಮೊದಲ ಪಂದ್ಯದ ಟಿಕೆಟ್​ಅನ್ನು ಸಾಂಕೇತಿಕವಾಗಿ ಉಡುಗೊರೆ ನೀಡಿದರು. ಜತೆಗೆ ಮೆಸ್ಸಿ ಮಾತ್ರವಲ್ಲದೆ ಅವರೊಂದಿಗೆ ಆಗಮಿಸಿದ್ದ ಇಂಟರ್​ ಮಿಯಾಮಿ ಕ್ಲಬ್​ನ ಸಹ-ಆಟಗಾರರಾದ ಉರುಗ್ವೆಯ ಲೂಯಿಸ್​ ಸ್ಯೂರೆಜ್​ ಮತ್ತು ಅರ್ಜೆಂಟೀನಾದ ರೋಡ್ರಿಗೋ ಡಿ ಪೌಲ್​ಗೂ ಟೀಮ್​ ಇಂಡಿಯಾದ ನೀಲಿ ಬಣ್ಣದ ಜೆರ್ಸಿಯನ್ನು ನೀಡಿದರು. ಇದರಲ್ಲಿ ಅವರ ಹೆಸರು ಮತ್ತು ಜೆರ್ಸಿ ನಂಬರ್​ ಕೂಡ ಇತ್ತು. ಟೀಮ್​ ಇಂಡಿಯಾ ಆಟಗಾರರ ಹಸ್ತಾಕ್ಷರವಿದ್ದ ಕ್ರಿಕೆಟ್​ ಬ್ಯಾಟ್​ ಒಂದನ್ನು ಕೂಡ ಜಯ್​ ಷಾ ಮೆಸ್ಸಿಗೆ ಉಡುಗೊರೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net