FIFA WorldCup: ಔಸ್ಮಾನ್​ ಡೆಂಬಲ್ ಹ್ಯಾಟ್ರಿಕ್​ ಗೋಲು; ಸತತ 3 ಜಯದೊಂದಿಗೆ ನಾಕೌಟ್​ಗೇರಿದ ಫ್ರಾನ್ಸ್​

FIFA WorldCup: ಔಸ್ಮಾನ್​ ಡೆಂಬಲ್ ಹ್ಯಾಟ್ರಿಕ್​ ಗೋಲು; ಸತತ 3 ಜಯದೊಂದಿಗೆ ನಾಕೌಟ್​ಗೇರಿದ ಫ್ರಾನ್ಸ್​
FIFA WorldCup: ಔಸ್ಮಾನ್​ ಡೆಂಬಲ್ ಹ್ಯಾಟ್ರಿಕ್​ ಗೋಲು; ಸತತ 3 ಜಯದೊಂದಿಗೆ ನಾಕೌಟ್​ಗೇರಿದ ಫ್ರಾನ್ಸ್​
Published on
ಬೋಸ್ಟನ್​: ಪ್ಯಾರಿಸ್​ ಸೇಂಟ್​-ಜಮೈರ್ನ್​ ಫಾರ್ವರ್ಡ್​ ಆಟಗಾರ ಮತ್ತು 2025ರ ಬ್ಯಾಲನ್​ ಡಿಓರ್​ ಪ್ರಶಸ್ತಿ ವಿಜೇತ ಔಸ್ಮಾನ್​ ಡೆಂಬೆಲ್​ (7, 20, 32ನೇ ನಿಮಿಷ) 25 ನಿಮಿಷಗಳ ಅಂತರದಲ್ಲಿ ಸಿಡಿಸಿದ ಹ್ಯಾಟ್ರಿಕ್​ ಗೋಲಿನ ಸಾಹಸದಿಂದ ಹಾಲಿ ರನ್ನರ್​ಅಪ್​ ಫ್ರಾನ್ಸ್​ ತಂಡ ಫಿಫಾ ವಿಶ್ವಕಪ್ (FIFA WorldCup)​ 23ನೇ ಆವೃತ್ತಿಯಲ್ಲಿ ನಾರ್ವೆ ಎದುರು 4-1 ಅಂತರದಿಂದ ಗೆಲುವು ಸಾಧಿಸಿದೆ. ಹ್ಯಾಟ್ರಿಕ್​ ಗೆಲುವಿನಿಂದ ಲೆಸ್​ ಬ್ಲೂಸ್​ ತಂಡ ಐ ಗುಂಪಿನ ಅಗ್ರಸ್ಥಾನಿಯಾಗಿ ನಾಕೌಟ್​ ಪ್ರವೇಶಿಸಿದೆ. 32ರ ಘಟ್ಟದಲ್ಲಿ ಫ್ರಾನ್ಸ್​​ಗೆ ಸ್ವೀಡನ್​ ಮತ್ತು ನಾರ್ವೆಗೆ ಐವರಿ ಕೋಸ್ಟ್​ ಎದುರಾಳಿಯಾಗಲಿದೆ.
ಭಾರತೀಯ ಕಾಲಮಾನ ಪ್ರಕಾರ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ 29 ವರ್ಷದ ಡೆಂಬೆಲ್ (Ousmane Dembele)​, 1994ರ ನಂತರ ವಿಶ್ವಕಪ್​ನ ಮೊದಲಾರ್ಧದಲ್ಲೇ ಹ್ಯಾಟ್ರಿಕ್​ ಗೋಲು ಸಿಡಿಸಿದ ಮೊದಲ ಆಟಗಾರ ಎನಿಸಿದರು. ಈಗಾಗಲೆ ನಾಕೌಟ್​ ಸ್ಥಾನ ಖಚಿತಪಡಿಸಿಕೊಂಡಿದ್ದ ಫ್ರಾನ್ಸ್​-ನಾರ್ವೆ ತಂಡಗಳು ಗುಂಪಿನ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸಿದವು. ಆದರೆ ನಾರ್ವೆ ತನ್ನ ಸ್ಟಾರ್​ ಆಟಗಾರ ಎರ್ಲಿಂಗ್​ ಹಾಲೆಂಡ್​ಗೆ ವಿಶ್ರಾಂತಿ ನೀಡಿ, ಪಂದ್ಯಕ್ಕೆ ಮೊದಲೇ ಅಗ್ರಸ್ಥಾನದ ರೇಸ್​ನಿಂದ ಹಿಂದೆ ಸರಿದಂತಿತ್ತು.

ಡೆಂಬೆಲ್​ 7, 20, 32ನೇ ನಿಮಿಷದಲ್ಲಿ ಸಿಡಿಸಿದ ಆಕರ್ಷಕ ಗೋಲಿನ ನಡುವೆ ನಾರ್ವೆಯ ಥೆಲೊ ಅಸ್ಗಾರ್ಡ್​ 21ನೇ ನಿಮಿಷದಲ್ಲೊಂದು ಗೋಲು ಬಾರಿಸಿದರು. ಇದರಿಂದ ಫ್ರಾನ್ಸ್ 3-1 ಮುನ್ನಡೆಯೊಂದಿಗೆ ವಿರಾಮಕ್ಕೆ ತೆರಳಿತು. ದ್ವೀತಿಯಾರ್ಧ ಬಹುತೇಕ ಗೋಲುರಹಿತವಾಗಿದ್ದ ಬಳಿಕ ಡಿಸೈರ್​ ಡೌ (90+4) ಇಂಜುರಿ ಸಮಯದಲ್ಲಿ ಹೆಡರ್​ ಮೂಲಕ ಫ್ರಾನ್ಸ್ ಗೆಲುವಿನ ಅಂತರ ಹಿಗ್ಗಿಸಿದರು.

ಡೆಂಬೆಲ್​ 65ನೇ ನಿಮಿಷದಲ್ಲಿ ಬದಲಿ ಆಟಗಾರನಿಗೆ ಸ್ಥಾನ ಬಿಟ್ಟು ಮೈದಾನದಿಂದ ಹೊರನಡೆದರೆ, 86ನೇ ನಿಮಿಷದವರೆಗೆ ಮೈದಾನದಲ್ಲಿದ್ದ ಕಳೆದ 2 ಪಂದ್ಯಗಳ ಅವಳಿ ಗೋಲು ಸಾಧಕ ಕೈಲಿಯಾನ್​ ಎಂಬಾಪೆ ಈ ಬಾರಿ ಗೋಲು ಗಳಿಸಲಾಗದೆ ನಿರಾಸೆ ಅನುಭವಿಸಿದರು.
ಫ್ರಾನ್ಸ್​ ಕೋಚ್​ ಡಿಡಿಯರ್​ ಡಿಶಾಂಪ್ಸ್​ ಅವರ ತಾಯಿ ಜಿನೆಟ್​ ಡಿಶಾಂಪ್ಸ್​ ಇತ್ತೀಚೆಗೆ ನಿಧನರಾಗಿರುವ ಕಾರಣ ಅವರು ತವರಿಗೆ ನಿರ್ಗಮಿಸಿದ್ದರಿಂದ ಪಂದ್ಯದ ವೇಳೆ ಹಾಜರಿರಲಿಲ್ಲ. ಡಿಡಿಯರ್​ ಶನಿವಾರ ತಂಡದ ತರಬೇತಿಗೆ ಮರಳಿದರು.
ನಾರ್ವೆ: 1
*ಥೆಲೊ ಅಸ್ಗಾರ್ಡ್​ (21)
ಫ್ರಾನ್ಸ್​: 4
*ಔಸ್ಮಾನ್​ ಡೆಂಬೆಲ್​ (7, 20, 32)
*ಡಿಸೈರ್​ ಡೌ (90+4)
ಹಾಲೆಂಡ್​ ಸಹಿತ 10 ಆಟಗಾರರಿಗೆ ರೆಸ್ಟ್​!
ಗುಂಪಿನ ಅಗ್ರಸ್ಥಾನ ಗಳಿಸುವ ಅವಕಾಶವಿದ್ದ ಪಂದ್ಯದಲ್ಲಿ ನಾರ್ವೆ ತಂಡ ಎರ್ಲಿಂಗ್​ ಹಾಲೆಂಡ್​ ಸಹಿತ ಆರಂಭಿಕ 11ರ 10 ಕಾಯಂ ಆಟಗಾರರಿಗೆ ವಿಶ್ರಾಂತಿ ನೀಡಿ ಕಣಕ್ಕಿಳಿಯುವ ಮೂಲಕ ಅಚ್ಚರಿ ತಂದಿತು. ನಾರ್ವೆ ಕೋಚ್​ ಸ್ಟೇಲ್​ ಸೋಲ್ಬಕ್ಕೆನ್​ ಪಂದ್ಯದ ನಂತರ ತನ್ನ ನಿರ್ಧಾರ ಸಮರ್ಥಿಸಿಕೊಂಡರು. ಹಾಲೆಂಡ್​ ಗೈರಿನಲ್ಲಿ ಆಡಿದ ಕಳೆದ 6 ಪಂದ್ಯದಲ್ಲೂ ನಾರ್ವೆ ಸೋತಿದೆ.
*3: ಲಿಯೋನೆಲ್​ ಮೆಸ್ಸಿ ಮತ್ತು ಕೆನಡಾದ ಜೊನಾಥನ್​ ಡೇವಿಡ್​ ಬಳಿಕ ಡೆಂಬೆಲ್​ ಹಾಲಿ ವಿಶ್ವಕಪ್​ನ 3ನೇ ಹ್ಯಾಟ್ರಿಕ್​ ಗೋಲು ಸಾಧಕ ಎನಿಸಿದರು. ಜತೆಗೆ ಜಸ್ಟ್​ ಫಾಟೇನ್​ (2) ಮತ್ತು ಕೈಲಿಯಾನ್​ ಎಂಬಾಪೆ ಬಳಿಕ ಫ್ರಾನ್ಸ್​ನ 3ನೇ ವಿಶ್ವಕಪ್​ ಹ್ಯಾಟ್ರಿಕ್​ ಸಾಧಕ ಎನಿಸಿದರು. ಅವರು ವಿಶ್ವಕಪ್​ನಲ್ಲಿ ಮೊದಲಾರ್ಧದಲ್ಲೇ ಹ್ಯಾಟ್ರಿಕ್​ ಸಾಧಿಸಿದ 6ನೇ ಆಟಗಾರರೆನಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net