FIFA WorldCup 2026: ಇಂದಿನಿಂದ ಫುಟ್​ಬಾಲ್​ ಮೆಗಾ ಫೈಟ್​; ಮೆಕ್ಸಿಕೋ-ದಕ್ಷಿಣ ಆಫ್ರಿಕಾ ನಡುವೆ ಉದ್ಘಾಟನಾ ಪಂದ್ಯ

FIFA WorldCup 2026: ಇಂದಿನಿಂದ ಫುಟ್​ಬಾಲ್​ ಮೆಗಾ ಫೈಟ್​; ಮೆಕ್ಸಿಕೋ-ದಕ್ಷಿಣ ಆಫ್ರಿಕಾ ನಡುವೆ ಉದ್ಘಾಟನಾ ಪಂದ್ಯ
FIFA WorldCup 2026: ಇಂದಿನಿಂದ ಫುಟ್​ಬಾಲ್​ ಮೆಗಾ ಫೈಟ್​; ಮೆಕ್ಸಿಕೋ-ದಕ್ಷಿಣ ಆಫ್ರಿಕಾ ನಡುವೆ ಉದ್ಘಾಟನಾ ಪಂದ್ಯ
Published on
ಮೆಕ್ಸಿಕೋ ಸಿಟಿ: ಅಮೆರಿಕ ಒಂದೆಡೆ ಮಧ್ಯಪ್ರಾಚ್ಯದಲ್ಲಿ ಇಸ್ರೇಲ್​ ಜತೆಗೂಡಿ ಇರಾನ್​ ಮೇಲೆ ಯುದ್ಧ ಸಾರುವ ಮೂಲಕ ಇಡೀ ಜಗತ್ತು ವಿವಿಧ ರೀತಿಯ ತಾಪತ್ರಯಗಳನ್ನು ಎದುರಿಸುವಂತೆ ಮಾಡಿದ್ದರೆ, ಮತ್ತೊಂದೆಡೆ ಉತ್ತರ ಅಮೆರಿಕದ ನೆರೆರಾಷ್ಟ್ರಗಳಾದ ಮೆಕ್ಸಿಕೋ ಮತ್ತು ಕೆನಡಾ ಜತೆಗೂಡಿ ವಿಶ್ವದ ಶ್ರೀಮಂತ ಫುಟ್​ಬಾಲ್​ ಹಬ್ಬ "ಫಿಫಾ ವಿಶ್ವಕಪ್​'ನ (FIFA WorldCup 2026) ಸಂಯುಕ್ತ ಆತಿಥ್ಯಕ್ಕೆ ಸಜ್ಜಾಗಿದೆ. ಗಮನಾರ್ಹವೆಂದರೆ ಇಲ್ಲಿ ಇರಾನ್​ ತಂಡದ ಎಲ್ಲ ಲೀಗ್​ ಪಂದ್ಯಗಳಿಗೆ ಅಮೆರಿಕವೇ ಆತಿಥ್ಯ ವಹಿಸಲಿದೆ. ಯುದ್ಧದ ಕಾಮೋರ್ಡದ ನಡುವೆ ಎಲ್ಲ ದೇಶಗಳ ಫುಟ್​ಬಾಲ್​ ಪ್ರೇಮಿಗಳು ಕಾಲ್ಚಳಕದ ಆನಂದವನ್ನು ಸವಿಯಲು ಉತ್ಸುಕರಾಗಿದ್ದಾರೆ.

ಈ ಸಲದ 23ನೇ ಆವೃತ್ತಿಯ ಫಿಫಾ ವಿಶ್ವಕಪ್​ ಹಲವು ಕಾರಣಗಳಿಂದ ವಿಭಿನ್ನ, ವಿಶೇಷವಾಗಿದೆ. ಮೊದಲ ಬಾರಿಗೆ ಮೂರು ದೇಶಗಳ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ. ಜತೆಗೆ ಟೂರ್ನಿಯಲ್ಲಿ ಆಡುವ ತಂಡಗಳ ಸಂಖ್ಯೆ 48 ಮತ್ತು ಪಂದ್ಯಗಳ ಸಂಖ್ಯೆ 104ಕ್ಕೆ ಏರಿಕೆಯಾಗಿರುವುದರಿಂದ ಮತ್ತು ಒಟ್ಟು 16 ಕ್ರೀಡಾಂಗಣಗಳಲ್ಲಿ ಸ್ಪರ್ಧೆ ನಡೆಯಲಿರುವುದರಿಂದ ಇದು ಅತ್ಯಂತ ಬೃಹತ್​ ಫುಟ್​ಬಾಲ್​ ಹಬ್ಬವೆನಿಸಿದೆ.

ಕತಾರ್​ನಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಪ್ರಶಸ್ತಿ ಒಲಿಸಿಕೊಂಡಿದ್ದ ಅರ್ಜೆಂಟೀನಾ ಈ ಬಾರಿ ಹಾಲಿ ಚಾಂಪಿಯನ್​ ತಂಡವಾಗಿ ಕಣಕ್ಕಿಳಿಯಲಿದೆ. ಲಿಯೋನೆಲ್​ ಮೆಸ್ಸಿ ಸಾರಥ್ಯದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವ ಅದರ ಅಭಿಯಾನಕ್ಕೆ ಸಾಂಪ್ರದಾಯಿಕ ಬಲಿಷ್ಠ ಫುಟ್​ಬಾಲ್​ ರಾಷ್ಟ್ರಗಳಾದ ಬ್ರೆಜಿಲ್​, ಜರ್ಮನಿ, ಫ್ರಾನ್ಸ್​, ಸ್ಪೇನ್​, ಪೋರ್ಚುಗಲ್​ನಿಂದ ಪ್ರಬಲ ಪ್ರತಿಸ್ಪರ್ಧೆ ಎದುರಾಗಲಿದೆ. ಇದರೊಂದಿಗೆ ಬೆಲ್ಜಿಯಂ, ಇಂಗ್ಲೆಂಡ್​, ಕ್ರೊಯೇಷಿಯಾ, ನೆದರ್ಲೆಂಡ್​, ಮೊರಾಕ್ಕೊ, ಕೊಲಂಬಿಯಾ, ಸಹ-ಆತಿಥೇಯ ಅಮೆರಿಕ, ಮೆಕ್ಸಿಕೋ ತಂಡಗಳೂ ಮಿರುಗುವ ಚಿನ್ನದ ಟ್ರೋಫಿಗಾಗಿ ನಿಕಟ ಪೈಪೋಟಿ ತೋರಲಿವೆ. ಏಷ್ಯಾ ಮತ್ತು ಆಫ್ರಿಕಾ ಖಂಡದ ತಂಡಗಳು ಇದುವರೆಗೆ ಫಿಫಾ ವಿಶ್ವಕಪ್​ ಗೆಲ್ಲದ ಕೊರತೆ ಈ ಸಲವಾದರೂ ನೀಗುವುದೇ ಎಂಬ ಕುತೂಹಲವೂ ಮನೆಮಾಡಿದೆ.

ಜೀವಮಾನದ ಅವಿಸ್ಮರಣೀಯ ಪ್ರಶಸ್ತಿ ಗೆಲುವನ್ನು ತಮ್ಮದಾಗಿಸಿಕೊಳ್ಳಲು ತುದಿಗಾಲ ಮೇಲೆ ನಿಂತಿರುವ ಹಲವು ಸ್ಟಾರ್​ ಆಟಗಾರರಿಗೆ ಈ ಬಾರಿಯ ವಿಶ್ವಕಪ್​ ಬಹುತೇಕ ಕೊನೆಯದಾಗಿರಲಿದೆ. ಲಿಯೋನೆಲ್​ ಮೆಸ್ಸಿ ಮತ್ತು ಕ್ರಿಶ್ಚಿಯಾನೊ ರೊಲಾನ್ಡೊ ಅವರಂಥ ಸೂಪರ್​ಸ್ಟಾರ್​ ಆಟಗಾರರ ಕಾಲ್ಚಳಕವನ್ನು ಜಾಗತಿಕ ವೇದಿಕೆಯಲ್ಲಿ ಕೊನೆಯದಾಗಿ ನೋಡುವ ಅಪೂರ್ವ ಅವಕಾಶವೂ ಇದಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net