FIFA WorldCup 2026: ಈ ಬಾರಿ ಮೆಸ್ಸಿ-ರೊನಾಲ್ಡೊ ಮುಖಾಮುಖಿ ನಿರೀಕ್ಷೆ

FIFA WorldCup 2026: ಈ ಬಾರಿ ಮೆಸ್ಸಿ-ರೊನಾಲ್ಡೊ ಮುಖಾಮುಖಿ ನಿರೀಕ್ಷೆ
FIFA WorldCup 2026: ಈ ಬಾರಿ ಮೆಸ್ಸಿ-ರೊನಾಲ್ಡೊ ಮುಖಾಮುಖಿ ನಿರೀಕ್ಷೆ
Published on
ಬೆಂಗಳೂರು: ಅರ್ಜೆಂಟೀನಾ ಮತ್ತು ಪೋರ್ಚುಗಲ್​ ಸೂಪರ್​ಸ್ಟಾರ್​ಗಳಾದ ಲಿಯೋನೆಲ್​ ಮೆಸ್ಸಿ (Lionel Messi) ಮತ್ತು ಕ್ರಿಶ್ಚಿಯಾನೊ ರೊನಾಲ್ಡೊ (Cristiano Ronaldo) ಈ ಹಿಂದೆ 5 ಬಾರಿ ಫಿಫಾ ವಿಶ್ವಕಪ್​ ಆಡಿದ್ದಾರೆ. ಆದರೆ ಅವರ ತಂಡಗಳು ಟೂರ್ನಿಯಲ್ಲಿ ಒಮ್ಮೆಯೂ ಮುಖಾಮುಖಿ ಆಗಿಲ್ಲ. ಆದರೆ ಈ ಬಾರಿ ಇಬ್ಬರೂ ಆರನೇ ಬಾರಿ ಆಡುತ್ತಿರುವ ಸಮಯದಲ್ಲಿ ಪರಸ್ಪರ ಮುಖಾಮುಖಿ ಆಗುವ ಸಾಧ್ಯತೆ ಇದೆ. ಆದರೆ ಫಲಿತಾಂಶಗಳು ಕೂಡ ನಿರೀಕ್ಷಿತ ರೀತಿಯಲ್ಲೇ ಬರಬೇಕಾಗುತ್ತದೆ.

ಲೀಗ್​ ಹಂತದಲ್ಲಿ ಅರ್ಜೆಂಟೀನಾ ಜೆ ಮತ್ತು ಪೋರ್ಚುಗಲ್​ ಕೆ ಗುಂಪಿನಲ್ಲಿದೆ. ಇವೆರಡೂ ತಂಡಗಳು ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಕ್ವಾರ್ಟರ್​ಫೈನಲ್​ ಹಂತಕ್ಕೇರಿದರೆ ಪರಸ್ಪರ ಮುಖಾಮುಖಿ ಆಗಲಿವೆ. ಎರಡೂ ತಂಡಗಳು ಗುಂಪಿನಲ್ಲಿ 2ನೇ ಸ್ಥಾನ ಪಡೆದರೆ, ಪ್ರಿ ಕ್ವಾರ್ಟರ್​ಫೈನಲ್​ ಹಂತದಲ್ಲೇ ಮುಖಾಮುಖಿ ಆಗಲಿವೆ. ಆದರೆ ಒಂದು ತಂಡ ತನ್ನ ಗುಂಪಿನಲ್ಲಿ ಅಗ್ರಸ್ಥಾನ ಪಡೆದು, ಇನ್ನೊಂದು ತಂಡ 2ನೇ ಸ್ಥಾನ ಪಡೆದರೆ ಆಗ ಉಭಯ ತಂಡಗಳು ಫೈನಲ್​ನಲ್ಲಷ್ಟೇ ಮುಖಾಮುಖಿ ಆಗಲಿವೆ.

39 ವರ್ಷದ ಮೆಸ್ಸಿ ಈ ಹಿಂದೆ 2022ರಲ್ಲಿ ಚಾಂಪಿಯನ್​, 2014ರಲ್ಲಿ ರನ್ನರ್​ಅಪ್​ ಸ್ಥಾಧನೆ ಮಾಡಿದ್ದರೆ, 41 ವರ್ಷದ ರೊನಾಲ್ಡೊ 2006ರ ಸೆಮಿಫೈನಲ್​ನಲ್ಲಿ ಆಡಿದ್ದೇ ಶ್ರೇಷ್ಠ ಸಾಧನೆಯಾಗಿದೆ. ಫಿಫಾ ವಿಶ್ವಕಪ್​ನಲ್ಲಿ ಮೆಸ್ಸಿ ಇದುವರೆಗೆ ಆಡಿರುವ 26 ಪಂದ್ಯಗಳಲ್ಲಿ 13 ಗೋಲು ಸಿಡಿಸಿದ್ದರೆ, ರೊನಾಲ್ಡೊ 22 ಪಂದ್ಯಗಳಲ್ಲಿ 8 ಗೋಲು ಬಾರಿಸಿದ್ದಾರೆ. ಜತೆಗೆ ಮೆಸ್ಸಿ 8 ಮತ್ತು ರೊನಾಲ್ಡೊ 2 ಗೋಲುಗಳಿಗೆ ನೆರವಾಗಿದ್ದಾರೆ. ಮೆಸ್ಸಿ 10 ಮತ್ತು ರೊನಾಲ್ಡೊ 1 ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದಾರೆ.

ಕ್ಲಬ್ ಫುಟ್​ಬಾಲ್​ನಲ್ಲಿ ಮೆಸ್ಸಿ-ರೊನಾಲ್ಡೊ ಈ ಹಿಂದೆ ಬಾರ್ಸಿಲೋನಾ-ರಿಯಲ್​ ಮ್ಯಾಡ್ರಿಡ್​ ತಂಡಗಳಲ್ಲಿ ಇದ್ದಾಗ 35 ಬಾರಿ ಮುಖಾಮುಖಿ ಆಗಿದ್ದರು. ಈ ಪೈಕಿ ಮೆಸ್ಸಿ 16 ಮತ್ತು ರೊನಾಲ್ಡೊ 10ರಲ್ಲಿ ಗೆಲುವು ಕಂಡಿದ್ದರು. ಉಳಿದ 9 ಪಂದ್ಯಗಳು ಡ್ರಾಗೊಂಡಿದ್ದವು. ಇಬ್ಬರೂ 22 ಗೋಲು ಬಾರಿಸಿದ್ದಾರೆ.

ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ ಮೆಸ್ಸಿ-ರೊನಾಲ್ಡೊ ಈ ಹಿಂದೆ 2 ಬಾರಿ ಮುಖಾಮುಖಿ ಆಗಿದ್ದು, ತಲಾ 1 ಗೆಲುವು ಕಂಡಿದ್ದಾರೆ ಮತ್ತು ತಲಾ 1 ಗೋಲು ಬಾರಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net