ನ್ಯೂಜೆರ್ಸಿ: ಲಿಯೋನೆಲ್ ಮೆಸ್ಸಿಗೆ ಜನ್ಮ ನೀಡಿದ್ದು ಅರ್ಜೆಂಟೀನಾವಾದರೂ, ವರ್ಣರಂಜಿತ ಫುಟ್ಬಾಲ್ ಜೀವನ ನೀಡಿದ್ದು ಸ್ಪೇನ್ನ ಬಾರ್ಸಿಲೋನಾ. 12ನೇ ವಯಸ್ಸಿನಲ್ಲಿ ಹಾಮೋರ್ನ್ ಕೊರತೆಯಿಂದ ದುರ್ಬಲವಾಗಿದ್ದ ಮೆಸ್ಸಿ 13ನೇ ವಯಸ್ಸಿನಲ್ಲಿ ಬಾರ್ಸಿಲೋನಾ ಅಕಾಡೆಮಿಗೆ ಸೇರಿದ ಬಳಿಕ ಬದುಕು ಬದಲಾಗಿತ್ತು. ಬಳಿಕ 21 ವರ್ಷಗಳ ಕಾಲ ಅವರು ಸ್ಪೇನ್ ನಗರದ ಕ್ಲಬ್ ಪರ ಆಡಿ ಫುಟ್ಬಾಲ್ ಮಾಂತ್ರಿಕರಾಗಿ ಬೆಳೆದಿದ್ದರು.
ಕ್ಸಾವಿ ಹರ್ನಾಂಡೆಜ್, ಆಂಡ್ರೆಸ್ ಇನೀಸ್ಟ, ಸೆರ್ಗಿಯೊ ಬಸ್ಕೆಟ್ಸ್ರಂಥ ಸ್ಪೇನ್ ದಿಗ್ಗಜರೊಂದಿಗೆ ಆಡಿ ಪಳಗಿದ್ದರು. ಬಾರ್ಸಿಲೋನಾ ಪರ ಆಡಿದ 17 ವರ್ಷಗಳಲ್ಲಿ 10 ಲಾ ಲೀಗಾ, 4 ಚಾಂಪಿಯನ್ಸ್ ಲೀಗ್, 7 ಕೋಪಾ ಡೆಲ್ ರೇ ಪ್ರಶಸ್ತಿ ಜಯಿಸಿದ್ದರು ಮತ್ತು 672 ಗೋಲು ಸಿಡಿಸಿದ್ದರು. ಆದರೆ ರಾಷ್ಟ್ರೀಯ ತಂಡದ ವಿಚಾರಕ್ಕೆ ಬಂದಾಗ, ಜನ್ಮನಿಡಿದ ಅರ್ಜೆಂಟೀನಾವನ್ನೇ ಆರಿಸಿಕೊಂಡಿದ್ದ ಮೆಸ್ಸಿ, ಈಗ 2ನೇ ಬಾರಿ ವಿಶ್ವಕಪ್ (FIFA WorldCup) ಗೆಲ್ಲಬೇಕಾದರೆ ಜೀವನದ ನೀಡಿದ ದೇಶದ ತಂಡವನ್ನೇ ಮಣಿಸಬೇಕಾದ ಭಾವನಾತ್ಮಕ ಸವಾಲು ಹೊಂದಿದ್ದಾರೆ. ರಾಜತಾಂತ್ರಿಕವಾಗಿ ಅರ್ಜೆಂಟೀನಾ-ಸ್ಪೇನ್ ಉತ್ತಮ ಸಂಬಂಧ ಹೊಂದಿದ್ದು, ಫುಟ್ಬಾಲ್ನಲ್ಲೂ ವೈರತ್ವವಿಲ್ಲದೆ, ಸೌಹಾರ್ದ ಸಂಬಂಧವಿದೆ.