FIFA WorldCup: ಇಂದು ಮಧ್ಯರಾತ್ರಿ ಅರ್ಜೆಂಟೀನಾ-ಸ್ಪೇನ್​ ಫೈನಲ್​ ಸಮರ; ಮೆಸ್ಸಿ ಬಳಗಕ್ಕೆ ಲಾ ರೋಜಾ ಸತ್ವಪರೀಕ್ಷೆ

FIFA WorldCup: ಇಂದು ಮಧ್ಯರಾತ್ರಿ ಅರ್ಜೆಂಟೀನಾ-ಸ್ಪೇನ್​ ಫೈನಲ್​ ಸಮರ; ಮೆಸ್ಸಿ ಬಳಗಕ್ಕೆ ಲಾ ರೋಜಾ ಸತ್ವಪರೀಕ್ಷೆ
FIFA WorldCup: ಇಂದು ಮಧ್ಯರಾತ್ರಿ ಅರ್ಜೆಂಟೀನಾ-ಸ್ಪೇನ್​ ಫೈನಲ್​ ಸಮರ; ಮೆಸ್ಸಿ ಬಳಗಕ್ಕೆ ಲಾ ರೋಜಾ ಸತ್ವಪರೀಕ್ಷೆ
Published on
ನ್ಯೂಜೆರ್ಸಿ: ಬರೋಬ್ಬರಿ 48 ತಂಡಗಳೊಂದಿಗೆ ಆರಂಭಗೊಂಡ ಫಿಫಾ ವಿಶ್ವಕಪ್ (FIFA WorldCup)​ 23ನೇ ಆವೃತ್ತಿ ಈಗ ಕೊನೆಯ ಘಟ್ಟ ತಲುಪಿದ್ದು, ಅಗ್ರ 2 ತಂಡಗಳ ನಡುವೆ ಭಾನುವಾರ ಮಧ್ಯರಾತ್ರಿ (ಭಾರತೀಯ ಕಾಲಮಾನ ಪ್ರಕಾರ) ಟೂರ್ನಿಯ 104ನೇ ಪಂದ್ಯದಲ್ಲಿ ಚಾಂಪಿಯನ್​ ಪಟ್ಟಕ್ಕೆ ಸಮರ ನಡೆಯಲಿದೆ. ಸತತ ಎರಡನೇ ಮತ್ತು ಒಟ್ಟಾರೆ ನಾಲ್ಕನೇ ಬಾರಿ ವಿಶ್ವಕಪ್​ ಗೆಲ್ಲುವ ಹಂಬಲದಲ್ಲಿರುವ ಕೋಪಾ ಅಮೆರಿಕ ಚಾಂಪಿಯನ್​ ಅರ್ಜೆಂಟೀನಾ ಮತ್ತು 16 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವಕಪ್​ ಎತ್ತಿ ಹಿಡಿಯುವ ತವಕದಲ್ಲಿರುವ ಯುರೋ ಕಪ್​ ಚಾಂಪಿಯನ್​ ಸ್ಪೇನ್​ ತಂಡಗಳು ಪ್ರಶಸ್ತಿ ಸುತ್ತಿನಲ್ಲಿ ಸೆಣಸಲು ಸಜ್ಜಾಗಿವೆ. ಫುಟ್​ಬಾಲ್​ ಸೂಪರ್​ಸ್ಟಾರ್​ ಲಿಯೋನೆಲ್​ ಮೆಸ್ಸಿ ಮತ್ತು ಭವಿಷ್ಯದ ಸೂಪರ್​ಸ್ಟಾರ್​ ಎನಿಸಿರುವ ಲ್ಯಾಮಿನ್​ ಯಮಲ್​ ನಡುವೆ ಒಬ್ಬರಿಗೆ ಮಾತ್ರ ಈ ಬಾರಿ ವಿಶ್ವಕಪ್​ ಟ್ರೋಫಿಯೊಂದಿಗೆ ಸಂಭ್ರಮಿಸುವ ಅದೃಷ್ಟ ಒಲಿಯಲಿದೆ.
ಆಕ್ರಮಣಕಾರಿ ಕಾರ್ಯತಂತ್ರ ಮತ್ತು ಹಿನ್ನಡೆಯಿಂದ ಪುಟಿದೆದ್ದು ಕೊನೇ ಕ್ಷಣದಲ್ಲೂ ಗೋಲು ಬಾರಿಸುವ ಸಾಮರ್ಥ್ಯದಿಂದ ಅರ್ಜೆಂಟೀನಾ ತಂಡ ಈ ಪಂದ್ಯದ ಫೇವರಿಟ್​ ಎನಿಸಿದ್ದರೆ, ಸ್ಪೇನ್​ ತಂಡ ತನ್ನ ಸದೃಢ ರಕ್ಷಣಾ ವಿಭಾಗದ ಬಲದಿಂದಾಗಿ ಎರಡನೇ ಬಾರಿ ವಿಶ್ವಕಪ್​ ಜಯಿಸುವ ನೆಚ್ಚಿನ ತಂಡವೆನಿಸಿದೆ.
ಟೂರ್ನಿಯಲ್ಲಿ ಇದುವರೆಗೆ 8 ಗೋಲು ಸಿಡಿಸಿ ಗೋಲ್ಡನ್​ ಬೂಟ್​ ರೇಸ್​ನಲ್ಲಿರುವ 39 ವರ್ಷದ ಲಿಯೋನೆಲ್​ ಮೆಸ್ಸಿ ಸ್ಪೇನ್​ ಪಾಲಿಗೆ ಪ್ರಮುಖ ಸವಾಲೆನಿಸಿದ್ದಾರೆ. ಅವರನ್ನು ಕಟ್ಟಿಹಾಕುವ ಜತೆಗೆ ಅವರ ಪಾಸ್​ಗಳನ್ನೂ ನಿಯಂತ್ರಿಸುವುದು ಲಾ ರೋಜಾ ಖ್ಯಾತಿಯ ಸ್ಪೇನ್​ ಸತ್ವಪರೀಕ್ಷೆಯೊಡ್ಡಲಿದೆ.
19 ವರ್ಷಗಳ ಹಿಂದೆ ಮೆಸ್ಸಿ ತೋಳಿನಲ್ಲೇ ಫೋಟೋಗೆ ಪೋಸ್​ ನೀಡಿ ಇದೀಗ ಅವರಿಗೆ ಎದುರಾಳಿಯಾಗಿ ನಿಂತಿರುವ ಲ್ಯಾಮಿನ್​ ಯಮಲ್​ ಅರ್ಜೆಂಟೀನಾಗೆ ಸವಾಲಾಗಬಲ್ಲರು. ಅವರೊಂದಿಗೆ ಮತ್ತೋರ್ವ 19 ವರ್ಷದ ಆಟಗಾರ ಪೌ ಕ್ಯೂಬಾರ್ಸಿ ಕೂಡ ಚುರುಕಿನ ಪಾಸ್​ಗಳಿಂದ ಗಮನಸೆಳೆದಿದ್ದಾರೆ.

ಸ್ಪೇನ್​ ತಂಡ ಕಳೆದ 37 ಪಂದ್ಯಗಳಿಂದ (28 ಜಯ, 9 ಡ್ರಾ) ಅಜೇಯವಾಗಿದ್ದರೆ, ಅರ್ಜೆಂಟೀನಾ ವಿಶ್ವಕಪ್​ನಲ್ಲಿ 13 ಪಂದ್ಯಗಳಿಂದ (11 ಜಯ, 2 ಡ್ರಾ) ಅಜೇಯವಾಗಿದೆ. ಉಭಯ ದೇಶಗಳ ರಾಜತಾಂತ್ರಿಕವಾಗಿ ಉತ್ತಮ ಸಂಬಂಧ ಹೊಂದಿದ್ದು, ಫುಟ್​ಬಾಲ್​ನಲ್ಲೂ ಹೆಚ್ಚಿನ ವೈರತ್ವವಿಲ್ಲ. ವಿಶ್ವಕಪ್​ ಇತಿಹಾಸದ 96 ವರ್ಷಗಳಲ್ಲಿ ಉಭಯ ತಂಡಗಳು ಒಮ್ಮೆ ಮಾತ್ರ ಮುಖಾಮುಖಿ ಆಗಿವೆ.
*ಆರಂಭ: ರಾತ್ರಿ 12.30
*ನೇರಪ್ರಸಾರ: ಯುನೈಟ್​8 ಸ್ಪೋರ್ಟ್ಸ್​, ಝೀ5
64 ವರ್ಷಗಳ ಬಳಿಕ ಪ್ರಶಸ್ತಿ ಉಳಿಸಿಕೊಳ್ಳುವ ಅವಕಾಶ
ಫಿಫಾ ವಿಶ್ವಕಪ್​ನಲ್ಲಿ ಕಳೆದ 64 ವರ್ಷಗಳಲ್ಲಿ ಸತತ 2 ಬಾರಿ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸುವ ಅವಕಾಶ ಅರ್ಜೆಂಟೀನಾ ಮುಂದಿದೆ. ಇಟಲಿ ತಂಡ 1934-1938ರಲ್ಲಿ ಮೊದಲ ಬಾರಿ ಈ ಸಾಧನೆ ಮಾಡಿದ್ದರೆ, ಬ್ರೆಜಿಲ್​ 1958-1962ರಲ್ಲಿ ಕೊನೆಯದಾಗಿ ಸತತ 2 ವಿಶ್ವಕಪ್​ ಗೆದ್ದಿತ್ತು.
*7: 2010ರ ಚಾಂಪಿಯನ್​ ಸ್ಪೇನ್​ ಗೆದ್ದರೆ ಒಂದಕ್ಕಿಂತ ಹೆಚ್ಚು ಬಾರಿ ವಿಶ್ವಕಪ್​ ಗೆದ್ದ 7ನೇ ತಂಡ ಎನಿಸಲಿದೆ. ಬ್ರೆಜಿಲ್​ (5), ಜರ್ಮನಿ, ಇಟಲಿ (ತಲಾ 4), ಅರ್ಜೆಂಟೀನಾ (3), ಫ್ರಾನ್ಸ್​, ಉರುಗ್ವೆ (ತಲಾ 2) ಈಗಾಗಲೆ ಈ ಸಾಧನೆ ಮಾಡಿರುವ ತಂಡಗಳಾಗಿವೆ.
ಎಲ್ಲ ಪಂದ್ಯ ಗೆಲುವಿನ ದಾಖಲೆ?
ಅರ್ಜೆಂಟೀನಾ ತಂಡ ಟೂರ್ನಿಯಲ್ಲಿ ಇದುವರೆಗೆ ಆಡಿರುವ ಎಲ್ಲ 7 ಪಂದ್ಯಗಳಲ್ಲಿ ಗೆದ್ದಿದ್ದು, 2002ರಲ್ಲಿ ಬ್ರೆಜಿಲ್​ ತಂಡ ಕಂಡಿದ್ದ ಸತತ 7 ಗೆಲುವಿನ ದಾಖಲೆ ಸರಿಗಟ್ಟಿದೆ. ಅರ್ಜೆಂಟೀನಾ ಫೈನಲ್​ನಲ್ಲೂ ಗೆದ್ದರೆ, ಟೂರ್ನಿಯ ಎಲ್ಲ ಪಂದ್ಯ ಗೆದ್ದು ವಿಶ್ವಕಪ್​ ಎತ್ತಿಹಿಡಿದ 5ನೇ ದೃಷ್ಟಾಂತ ಸೃಷ್ಟಿಸಲಿದೆ. 1930ರಲ್ಲಿ ಉರುಗ್ವೆ, 1938ರಲ್ಲಿ ಇಟಲಿ, 1970, 2002ರಲ್ಲಿ ಬ್ರೆಜಿಲ್​ ಈ ಸಾಧನೆ ಮಾಡಿತ್ತು.
ಒಂದೇ ಗೋಲು ಬಿಟ್ಟು ಪ್ರಶಸ್ತಿ?
ಸ್ಪೇನ್​ ತಂಡ ಫೈನಲ್​ನಲ್ಲಿ ಒಂದೂ ಗೋಲು ಬಿಟ್ಟುಕೊಡದೆ ವಿಶ್ವಕಪ್​ ಗೆದ್ದರೆ, ಅತ್ಯಂತ ಕನಿಷ್ಠ ಗೋಲು ಬಿಟ್ಟುಕೊಟ್ಟು ಚಾಂಪಿಯನ್​ ಪಟ್ಟಕ್ಕೇರಿದ ತಂಡವೆನಿಸಲಿದೆ. 1998ರಲ್ಲಿ ಫ್ರಾನ್ಸ್​, 2006ರಲ್ಲಿ ಇಟಲಿ ಮತ್ತು 2010ರಲ್ಲಿ ಸ್ಪೇನ್​ ತಂಡವೇ ಕೇವಲ 2 ಗೋಲು ಬಿಟ್ಟುಕೊಟ್ಟು ವಿಶ್ವಕಪ್​ ಗೆದ್ದಿತ್ತು. ಅರ್ಜೆಂಟೀನಾ ಈಗಾಗಲೆ 7 ಗೋಲು ಬಿಟ್ಟುಕೊಟ್ಟರೂ ಫೈನಲ್​ಗೇರಿದ ಮೊದಲ ತಂಡವೆನಿಸಿದೆ. 1998ರಲ್ಲಿ ಬ್ರೆಜಿಲ್​ 6 ಗೋಲು ಬಿಟ್ಟುಕೊಟ್ಟು ಫೈನಲ್​ಗೇರಿದ್ದು ಹಿಂದಿನ ಗರಿಷ್ಠ.
ಪ್ರಶಸ್ತಿ ಸುತ್ತಿನ ಹಾದಿ...
ಅರ್ಜೆಂಟೀನಾ
*ಲೀಗ್​-1: ಅಲ್ಜೀರಿಯಾ ವಿರುದ್ಧ 3-0 ಜಯ
*ಲೀಗ್​-2: ಆಸ್ಟ್ರಿಯಾ ವಿರುದ್ಧ 2-0 ಜಯ
*ಲೀಗ್​-3: ಜೋರ್ಡಾನ್​ ವಿರುದ್ಧ 3-1 ಜಯ
*32ರ ಘಟ್ಟ: ಕೇಪ್​ ವರ್ಡೆ ವಿರುದ್ಧ 3-2 ಜಯ
*16ರ ಘಟ್ಟ: ಈಜಿಪ್ಟ್​ ವಿರುದ್ಧ 3-2 ಜಯ
*8ರ ಘಟ್ಟ: ಸ್ವಿರ್ಜಲೆಂಡ್​ ವಿರುದ್ಧ 3-1 ಜಯ
*ಸೆಮಿಫೈನಲ್​: ಇಂಗ್ಲೆಂಡ್​ ವಿರುದ್ಧ 2-1 ಜಯ
*ಗೋಲು: ಪರ: 19, ವಿರುದ್ಧ: 7
ಸ್ಪೇನ್​:
*ಲೀಗ್​-1: ಕೇಪ್​ ವರ್ಡೆ ವಿರುದ್ಧ 0-0 ಡ್ರಾ
*ಲೀಗ್​-2: ಸೌದಿ ಅರೇಬಿಯಾ ವಿರುದ್ಧ 4-0 ಜಯ
*ಲೀಗ್​-3: ಉರುಗ್ವೆ ವಿರುದ್ಧ 1-0 ಜಯ
*32ರ ಘಟ್ಟ: ಆಸ್ಟ್ರಿಯಾ ವಿರುದ್ಧ 3-0 ಜಯ
*16ರ ಘಟ್ಟ: ಪೋರ್ಚುಗಲ್​ ವಿರುದ್ಧ 1-0 ಜಯ
*8ರ ಘಟ್ಟ: ಬೆಲ್ಜಿಯಂ ವಿರುದ್ಧ 2-1 ಜಯ
*ಸೆಮಿಫೈನಲ್​: ಫ್ರಾನ್ಸ್​ ವಿರುದ್ಧ 2-0 ಜಯ
*ಗೋಲು: ಪರ: 13, ವಿರುದ್ಧ: 1
ವಿಶ್ವಕಪ್​ನಲ್ಲಿ ಏಕೈಕ ಮುಖಾಮುಖಿ
ಅರ್ಜೆಂಟೀನಾ-ಸ್ಪೇನ್​ ತಂಡಗಳು ಫಿಫಾ ವಿಶ್ವಕಪ್​ನಲ್ಲಿ ಈ ಹಿಂದೆ ಏಕೈಕ ಬಾರಿ ಮುಖಾಮುಖಿ ಆಗಿವೆ. 1966ರಲ್ಲಿ ಒಂದೇ ಗುಂಪಿನಲ್ಲಿದ್ದಾಗ ಅರ್ಜೆಂಟೀನಾ 2-1ರಿಂದ ಸ್ಪೇನ್​ಗೆ ಸೋಲುಣಿಸಿತ್ತು. ಅಂತಾರಾಷ್ಟ್ರೀಯ ಫುಟ್​ಬಾಲ್​ನಲ್ಲಿ 14 ಬಾರಿ ಮುಖಾಮುಖಿ ಆಗಿರುವ ಉಭಯ ತಂಡಗಳು ತಲಾ 6ರಲ್ಲಿ ಗೆದ್ದಿದ್ದು, 2 ಪಂದ್ಯ ಡ್ರಾಗೊಂಡಿವೆ. 2018ರಲ್ಲಿ ಕೊನೇ ಬಾರಿ ಮುಖಾಮುಖಿ ಆದಾಗ ಸ್ಪೇನ್​ 6-1ರಿಂದ ಗೆದ್ದಿತ್ತು. ಆದರೆ ಈ ಪಂದ್ಯದಲ್ಲಿ ಮೆಸ್ಸಿ ಆಡಿರಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net