ಫುಟ್‌ಬಾಲ್ ಜಗತ್ತಿನಲ್ಲಿ ಹೊಸ ಕ್ರಾಂತಿ: ಟ್ರೋಫಿ ಜೊತೆಗೆ ವಿಜೇತ ತಂಡದ ಬೆರಳು ಸೇರಲಿದೆ ರಾಯಲ್ ಉಂಗುರ! FIFA World Cup 2026

FIFA World Cup 2026  (ಚಿತ್ರ X)
FIFA World Cup 2026 (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಫಿಫಾ ವಿಶ್ವಕಪ್ 2026ರ ವಿಜೇತ ತಂಡಕ್ಕೆ ವಿಶ್ವಕಪ್ ಟ್ರೋಫಿಯೊಂದಿಗೆ ಚಾಂಪಿಯನ್‌ಶಿಪ್ ರಿಂಗ್ಸ್‌ ನೀಡಿ ಗೌರವಿಸಲಾಗುವುದು
  • ಫಿಫಾ ಸಿದ್ಧಪಡಿಸಿರುವ ಈ ವಿಶೇಷ ಉಂಗುರದ ಒಂದು ಬದಿಯಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯ ಚಿತ್ರ ಇರಲಿದೆ
  • ಇನ್ನೊಂದು ಬದಿಯಲ್ಲಿ ವಿಜೇತ ತಂಡದ ಗುರುತು ಹಾಗೂ ಹಿನ್ನಲೆಗೆ ತಕ್ಕಂತೆ ಕಸ್ಟಮೈಸ್​ ಮಾಡಲಾಗುತ್ತದೆ
ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026ರ ಮಹಾ (FIFA World Cup 2026) ಸಮರವು ಅಂತಿಮ ಹಂತಕ್ಕೆ ತಲುಪಿದ್ದು, ಈ ಬಾರಿಯ ವಿಜೇತ ತಂಡಕ್ಕೆ ಸಾಂಪ್ರದಾಯಿಕ ಚಿನ್ನದ ಪದಕಗಳು ಮತ್ತು ವಿಶ್ವಕಪ್ ಟ್ರೋಫಿಯೊಂದಿಗೆ ಇತಿಹಾಸದಲ್ಲೇ ಮೊದಲ ಬಾರಿಗೆ ವಿಶೇಷ ಚಾಂಪಿಯನ್‌ಶಿಪ್ ರಿಂಗ್ಸ್‌ ನೀಡಿ ಗೌರವಿಸಲಾಗುವುದು ಎಂದು ಫಿಫಾ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಅಮೆರಿಕನ್ ಕ್ರೀಡಾ ಜಗತ್ತಿನ ಜನಪ್ರಿಯ ಸಂಪ್ರದಾಯವಾದ ಈ ಉಂಗುರ ನೀಡುವ ಪದ್ಧತಿಯನ್ನು ಇದೀಗ ಜಾಗತಿಕ ಫುಟ್‌ಬಾಲ್ ಕ್ರೀಡೆಗೂ ಪರಿಚಯಿಸಲಾಗುತ್ತಿದೆ.

ಹೇಗಿರಲಿದೆ ಈ ವಿಶೇಷ ಉಂಗುರ?

ಫಿಫಾ ಸಿದ್ಧಪಡಿಸಿರುವ ಈ ವಿಶೇಷ ಉಂಗುರದ ಒಂದು ಬದಿಯಲ್ಲಿ ಫಿಫಾ ವಿಶ್ವಕಪ್ ಟ್ರೋಫಿಯ ಚಿತ್ರ ಇರಲಿದ್ದು, ಇನ್ನೊಂದು ಬದಿಯಲ್ಲಿ ವಿಜೇತ ತಂಡದ ಗುರುತು ಹಾಗೂ ಹಿನ್ನಲೆಗೆ ತಕ್ಕಂತೆ ಕಸ್ಟಮೈಸ್​ ಮಾಡಲಾಗುತ್ತದೆ. ಆದಾಗ್ಯೂ, ಪ್ರತಿಯೊಂದು ಉಂಗುರಕ್ಕೂ ಪ್ರತ್ಯೇಕವಾದ ನಂಬರ್​ ನೀಡಲಾಗುತ್ತದಲ್ಲದೇ, ಅದನ್ನು ವಿಜೇತರಿಗೆ ತಕ್ಕಂತೆ ಕಸ್ಟಮೈಸ್​ ಫಿಟ್​ ಮಾಡಿ ಅಧಿಕೃತ ಪ್ರಮಾಣ ಪತ್ರದೊಂದಿಗೆ ನೀಡಲಾಗುತ್ತದೆ. 
ಫೈನಲ್ ಪಂದ್ಯ ಮುಗಿದ ಬೆನ್ನಲ್ಲೇ ಈ ಐತಿಹಾಸಿಕ ಕ್ಷಣದ ನೆನಪಿಗಾಗಿ ವಿಜೇತ ತಂಡದ ನಾಯಕ ಮತ್ತು ಮುಖ್ಯ ತರಬೇತುದಾರರಿಗೆ ತಾತ್ಕಾಲಿಕ ಉಂಗುರಗಳನ್ನು ನೀಡಲಾಗುತ್ತದೆ. ಆ ಬಳಿಕ, ವಿಜೇತ ತಂಡದ ಆಟಗಾರರು ಮತ್ತು ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾದ ಒಟ್ಟು 30 ಉಂಗುರಗಳನ್ನು ಅವರವರ ಬೆರಳಿಗೆ ಸರಿಯಾಗಿ ಹೊಂದುವಂತೆ ವಿನ್ಯಾಸಗೊಳಿಸಿ ನಂತರದ ದಿನಗಳಲ್ಲಿ ಅಧಿಕೃತವಾಗಿ ಹಸ್ತಾಂತರಿಸಲಾಗುತ್ತದೆ. 

ಅಭಿಮಾನಿಗಳಿಗೂ ಸಿಗಲಿದೆ ಸುವರ್ಣಾವಕಾಶ!

ಈ ಜಾಗತಿಕ ಟೂರ್ನಿಯ ನೆನಪಿಗಾಗಿ ಫಿಫಾ ಒಟ್ಟು 2,026 ಉಂಗುರಗಳನ್ನು ಮಾತ್ರ ಸೀಮಿತ ಆವೃತ್ತಿಯಲ್ಲಿ ಸಿದ್ಧಪಡಿಸುತ್ತಿದೆ. ಇವುಗಳಲ್ಲಿ 30 ಉಂಗುರಗಳನ್ನು ಚಾಂಪಿಯನ್ ತಂಡಕ್ಕೆ ನೀಡಿದರೆ, ಉಳಿದ 1,996 ಉಂಗುರಗಳನ್ನು ವಿಶ್ವದಾದ್ಯಂತ ಇರುವ ಫುಟ್‌ಬಾಲ್ ಅಭಿಮಾನಿಗಳಿಗೆ ಅಧಿಕೃತ ಪರವಾನಗಿ ಉತ್ಪನ್ನ ಮಾದರಿಯಲ್ಲಿ ಖರೀದಿಸಲು ಮುಕ್ತವಾಗಿಡಲಾಗುತ್ತದೆ. ಇದರಿಂದ ಅಭಿಮಾನಿಗಳು ಕೂಡ ಈ ಐತಿಹಾಸಿಕ ವಿಶ್ವಕಪ್​ನ ನೆನಪನ್ನು ತಮ್ಮದಾಗಿಸಿಕೊಳ್ಳಬಹುದು. 

ಫೈನಲ್‌ನಲ್ಲಿ ಅರ್ಜೆಂಟೀನಾ-ಸ್ಪೇನ್ ಮುಖಾಮುಖಿ

ಜೆರ್ಸಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್‌ನ 104ನೇ ಮಹಾ ಫೈನಲ್ ಪಂದ್ಯದಲ್ಲಿ ಯೂರೋಪಿಯನ್ ಚಾಂಪಿಯನ್ ಸ್ಪೇನ್ ಮತ್ತು ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡಗಳು ಮುಖಾಮುಖಿಯಾಗುತ್ತಿವೆ. ಬಲಿಷ್ಠ ಫ್ರಾನ್ಸ್ ತಂಡವನ್ನು ಸೆಮಿಫೈನಲ್‌ನಲ್ಲಿ ಸೋಲಿಸಿ ಸ್ಪೇನ್ ಫೈನಲ್ ಪ್ರವೇಶಿಸಿದೆ.
ಮತ್ತೊಂದೆಡೆ, ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು ರೋಮಾಂಚನಕಾರಿ ಹಾದಿಯನ್ನು ದಾಟಿ ತನ್ನ 7ನೇ ವಿಶ್ವಕಪ್ ಫೈನಲ್ ತಲುಪಿದೆ. ಗುಂಪು ಹಂತದ ಸತತ ಮೂರು ಗೆಲುವುಗಳೊಂದಿಗೆ ಅಭಿಯಾನ ಆರಂಭಿಸಿದ್ದ ಅರ್ಜೆಂಟೀನಾ ತಂಡವನ್ನು ದಂತಕಥೆ ಲಿಯೋನೆಲ್ ಮೆಸ್ಸಿ ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಮೆಸ್ಸಿ ಈಗಾಗಲೇ ಈ ಟೂರ್ನಿಯಲ್ಲಿ 8 ಗೋಲುಗಳನ್ನು ಬಾರಿಸಿದ್ದು, ತಮ್ಮ ಸುದೀರ್ಘ ವಿಶ್ವಕಪ್ ವೃತ್ತಿಜೀವನದಲ್ಲಿ ಒಟ್ಟು 21 ಗೋಲುಗಳ ಮೈಲಿಗಲ್ಲು ತಲುಪಿದ್ದಾರೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net