FIFA WorldCup: ಎರ್ಲಿಂಗ್​ ಹಾಲೆಂಡ್​ ಕಟ್ಟಿಹಾಕಿ ಗೆದ್ದ ಆಂಗ್ಲರು; ನಾರ್ವೆ ತಾರೆ 636 ದಿನಗಳ ಬಳಿಕ ಗೋಲುರಹಿತ!

FIFA WorldCup: ಎರ್ಲಿಂಗ್​ ಹಾಲೆಂಡ್​ ಕಟ್ಟಿಹಾಕಿ ಗೆದ್ದ ಆಂಗ್ಲರು; ನಾರ್ವೆ ತಾರೆ 636 ದಿನಗಳ ಬಳಿಕ ಗೋಲುರಹಿತ!
FIFA WorldCup: ಎರ್ಲಿಂಗ್​ ಹಾಲೆಂಡ್​ ಕಟ್ಟಿಹಾಕಿ ಗೆದ್ದ ಆಂಗ್ಲರು; ನಾರ್ವೆ ತಾರೆ 636 ದಿನಗಳ ಬಳಿಕ ಗೋಲುರಹಿತ!
Published on
ಮಿಯಾಮಿ: ರಿಯಲ್​ ಮ್ಯಾಡ್ರಿಡ್​ ಮಿಡ್​ಫೀಲ್ಡರ್​ ಜೂಡ್​ ಬೆಲ್ಲಿಂಗ್​ಹ್ಯಾಂ (45+2, 93ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ಬಲದಿಂದ ಇಂಗ್ಲೆಂಡ್​ ತಂಡ ಫಿಫಾ ವಿಶ್ವಕಪ್ (FIFA WorldCup)​ ಕ್ವಾರ್ಟರ್​ಫೈನಲ್​ ಪಂದ್ಯದಲ್ಲಿ ನಾರ್ವೆ ವಿರುದ್ಧ 2-1 ಅಂತರದಿಂದ ಗೆಲುವು ದಾಖಲಿಸಿದೆ. ಈ ಮೂಲಕ ತ್ರಿ ಲಯನ್ಸ್​ ಖ್ಯಾತಿಯ ಇಂಗ್ಲೆಂಡ್​ ತಂಡ 8 ವರ್ಷಗಳ ಬಳಿಕ ಮತ್ತು ಒಟ್ಟಾರೆ 4ನೇ ಬಾರಿ ವಿಶ್ವಕಪ್​ ಅಂತಿಮ ನಾಲ್ಕರ ಘಟ್ಟಕ್ಕೇರಿದೆ. 28 ವರ್ಷಗಳ ಬಳಿಕ ವಿಶ್ವಕಪ್​ಗೆ ಮರಳಿದ್ದ ನಾರ್ವೆ, ಕ್ವಾರ್ಟರ್​ಫೈನಲ್​ನಲ್ಲಿ ಸವಾಲು ಅಂತ್ಯಗೊಳಿಸಿತು. ನಾರ್ವೆಯ ಸ್ಟಾರ್​ ಆಟಗಾರ ಎರ್ಲಿಂಗ್​ ಹಾಲೆಂಡ್ (Erling Haaland)​ ಸತತ 14 ಪಂದ್ಯಗಳ ಬಳಿಕ ಗೋಲು ಸಿಡಿಸದಂತೆ ಕಟ್ಟಿಹಾಕಿದ್ದು ಆಂಗ್ಲರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಭಾರತೀಯ ಕಾಲಮಾನ ಪ್ರಕಾರ ಶನಿವಾರ ತಡರಾತ್ರಿ ನಡೆದ ಪಂದ್ಯದಲ್ಲಿ ನಾರ್ವೆ ಆರಂಭಿಕ ಮುನ್ನಡೆ ಸಾಧಿಸಿತು. ಆಂಡ್ರಿಯಾಸ್​ ಸ್ಕೆಜೆಲ್ಡೆರಪ್​ 36ನೇ ನಿಮಿಷದಲ್ಲಿ ನಾರ್ವೆಗೆ ಮುನ್ನಡೆ ಒದಗಿಸಿದರು. ಆದರೆ ಮೊದಲಾರ್ಧದ ಇಂಜುರಿ ಸಮಯದ 2ನೇ ನಿಮಿಷದಲ್ಲಿ 23 ವರ್ಷದ ಬೆಲ್ಲಿಂಗ್​ಹ್ಯಾಂ ಪಂದ್ಯದ ಮೊದಲ ಗೋಲು ಬಾರಿಸಿ ಆಂಗ್ಲರಿಗೆ ಸಮಬಲ ಒದಗಿಸಿದರು. ಬಳಿಕ ದ್ವೀತಿಯಾರ್ಧದಲ್ಲಿ ಒಂದೂ ಗೋಲು ದಾಖಲಾಗದ ಕಾರಣ ಪಂದ್ಯ ಹೆಚ್ಚುವರಿ ಸಮಯಕ್ಕೆ ವಿಸ್ತರಿಸಲ್ಪಟ್ಟಿತು. ಆಗ ಮೂರು ನಿಮಿಷಗಳ ಆಟದಲ್ಲೇ ಬೆಲ್ಲಿಂಗ್​ಹ್ಯಾಂ ಆಂಗ್ಲರಿಗೆ ಗೆಲುವಿನ ಗೋಲು ತಂದುಕೊಟ್ಟರು.

56ನೇ ನಿಮಿಷದಲ್ಲಿ ನಾರ್ವೆಗೆ 2-1 ಮುನ್ನಡೆ ಸಾಧಿಸುವ ಅವಕಾಶ ಲಭಿಸಿತ್ತು. ಆದರೆ ಕಾರ್ನರ್​ ಕಿಕ್​ನಲ್ಲಿ ಇಂಗ್ಲೆಂಡ್​ ಗೋಲು ಕೀಪರ್​ ಜೋರ್ಡನ್​ ಪಿಕ್​ಫೋರ್ಡ್​ ಕೈಯಿಂದ ರಿಬೌಂಡ್​ ಆದ ಚೆಂಡನ್ನು ಟಾರ್ಬ್​ಜಾರ್ನ್​ ಹೆಗ್ಗೆಮ್​ ಗೋಲು ಪೆಟ್ಟಿಗೆ ಸೇರಿಸಿದರೂ, ಆ ವೇಳೆ ಹಾಲೆಂಡ್​ ಇಂಗ್ಲೆಂಡ್​ ಆಟಗಾರನೊಬ್ಬನನ್ನು ತಳ್ಳಿ ಫೌಲ್​ ಮಾಡಿದ್ದ ವಿಡಿಯೋ ಪರಾಮರ್ಶೆ (ವಿಎಆರ್​) ವೇಳೆ ಸ್ಪಷ್ಟವಾಗಿದ್ದರಿಂದ ಆ ಗೋಲು ಅಮಾನ್ಯಗೊಂಡಿತು. ಪಂದ್ಯದ ವೇಳೆ ಭಾರಿ ಬಿಸಿಲಿನ ವಾತಾವರಣ ಉಭಯ ತಂಡಗಳ ಆಟಗಾರರನ್ನೂ ಸತಾಯಿಸಿತು.

1966ರ ಆವೃತ್ತಿಯ ಚಾಂಪಿಯನ್​ ಇಂಗ್ಲೆಂಡ್​ ಇದೀಗ 60 ವರ್ಷಗಳ ಬಳಿಕ ಮತ್ತೆ ಪ್ರಶಸ್ತಿ ಸುತ್ತಿಗೇರುವ ಅವಕಾಶ ಪಡೆದಿದೆ. ಬೆಲ್ಲಿಂಗ್​ಹ್ಯಾಂ ಈ ಮುನ್ನ ಮೆಕ್ಸಿಕೋ ವಿರುದ್ಧದ 16ರ ಟ್ಟದ ಪಂದ್ಯದಲ್ಲೂ ಅವಳಿ ಗೋಲು ಸಿಡಿಸಿ ಮಿಂಚಿದ್ದರು. ಇಂಗ್ಲೆಂಡ್​ 4ನೇ ಬಾರಿ ವಿಶ್ವಕಪ್​ ಉಪಾಂತ್ಯಕ್ಕೇರಿದೆ. ಈ ಮುನ್ನ 1966, 1990, 2018ರಲ್ಲಿ ಈ ಸಾಧನೆ ಮಾಡಿತ್ತು.
ಹಾಲೆಂಡ್​ 636 ದಿನಗಳ ಬಳಿಕ ಗೋಲುರಹಿತ!
ನಾರ್ವೆ ತಂಡ ಮೊಟ್ಟಮೊದಲ ಬಾರಿ 8ರ ಘಟ್ಟಕ್ಕೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 25 ವರ್ಷದ ತಾರೆ ಎರ್ಲಿಂಗ್​ ಹಾಲೆಂಡ್​, ನಿರ್ಣಾಯಕ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಇದರಿಂದಾಗಿ ಹೆಚ್ಚುವರಿ ಅವಧಿಯ ಮೊದಲಾರ್ಧದ ಬಳಿಕ ಅವರ ಬದಲಿಗೆ ಬೇರೆ ಆಟಗಾರನನ್ನು ಕಣಕ್ಕಿಳಿಸುವ ಕಠಿಣ ನಿರ್ಧಾರವನ್ನು ನಾರ್ವೆ ಕೋಚ್​ ಸ್ಟೇಲ್​ ಸೋಲ್ಬಕ್ಕೆನ್​ ತೆಗೆದುಕೊಂಡರು. ವಿಶ್ವಕಪ್​ನ ಹಿಂದಿನ 4 ಪಂದ್ಯಗಳಲ್ಲಿ 7 ಗೋಲು ಸಿಡಿಸಿದ್ದ ಹಾಲೆಂಡ್​, ಸ್ಪರ್ಧಾತ್ಮಕ ಫುಟ್​ಬಾಲ್​ನಲ್ಲಿ ಸತತ 14 ಪಂದ್ಯ ಮತ್ತು 636 ದಿನಗಳ ಬಳಿಕ ಗೋಲು ಬಾರಿಸಲು ವಿಫಲರಾದರು. 2024ರ ಅಕ್ಟೋಬರ್​ನಿಂದಲೂ ಅವರು ನಾರ್ವೆ ಪರ ಸತತ ಗೋಲು ಸಿಡಿಸುತ್ತ ಬಂದಿದ್ದರು. ಹಾಲೆಂಡ್​ ಜತೆ ಮ್ಯಾಂಚೆಸ್ಟರ್​ ಸಿಟಿ ತಂಡದಲ್ಲಿ ಆಡುವ ಕೆಲ ಆಟಗಾರರೇ ಇಂಗ್ಲೆಂಡ್​ ತಂಡದಲ್ಲಿದ್ದರು ಮತ್ತು ಅವರು ಹಾಲೆಂಡ್​ಗೆ ಚೆಂಡು ಹೆಚ್ಚು ಸಿಗದಂತೆ ನೋಡಿಕೊಂಡರು. ದ್ವೀತಿಯಾರ್ಧದಲ್ಲಿ ಹಾಲೆಂಡ್​ ಮಾಡಿದ ಫೌಲ್​ ನಾರ್ವೆಗೆ ಮುನ್ನಡೆಯನ್ನೂ ತಪ್ಪಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net