ಮೆಕ್ಸಿಕೋ ಸಿಟಿ: ಜೂಡ್ ಬೆಲ್ಲಿಂಗ್ಹ್ಯಾಂ (36, 38ನೇ ನಿಮಿಷ) ಮತ್ತು ನಾಯಕ ಹ್ಯಾರಿ ಕೇನ್ (60ನೇ ನಿಮಿಷ, ಪೆನಾಲ್ಟಿ) ಜೋಡಿಯ ಅಮೋಘ ನಿರ್ವಹಣೆಯ ಬಲದಿಂದ ಇಂಗ್ಲೆಂಡ್ ತಂಡ ಫಿಫಾ ವಿಶ್ವಕಪ್ (FIFA WorldCup) 16ರ ಘಟ್ಟದಲ್ಲಿ ಸಹ-ಆತಿಥೇಯ ಮೆಕ್ಸಿಕೋ ತಂಡಕ್ಕೆ 3-2 ಅಂತರದಿಂದ ಸೋಲುಣಿಸಿದೆ. ಇದರಿಂದ ಟೂರ್ನಿಯಲ್ಲಿ ಮೆಕ್ಸಿಕೋ ತಂಡದ ಕನಸಿನ ಓಟಕ್ಕೆ ತಡೆಬಿದ್ದಿತು. ಜತೆಗೆ ಅಜ್ಟೆಕಾ ಸ್ಟೇಡಿಯಂನಲ್ಲಿ ಮೆಕ್ಸಿಕೋದ ಅಜೇಯ ದಾಖಲೆಯೂ ಕೊನೆಗೊಂಡಿತು. ಇಲ್ಲಿ ಆಡಿದ ಹಿಂದಿನ 10 ವಿಶ್ವಕಪ್ ಪಂದ್ಯಗಳಲ್ಲೂ ಮೆಕ್ಸಿಕೋ ಸೋತಿರಲಿಲ್ಲ. ತ್ರಿ ಲಯನ್ಸ್ ಖ್ಯಾತಿಯ ಇಂಗ್ಲೆಂಡ್ ಸತತ 3ನೇ ಬಾರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ.